ಫ್ರೆಂಚ್ ಓಪನ್: ಎರಡನೇ ಸುತ್ತಿಗೆ ಸೈನಾ ನೆಹ್ವಾಲ್

ಪ್ಯಾರಿಸ್, ಅ 24:    ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ. 

ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ಅವರು ಅದ್ಭುತ ಪ್ರದರ್ಶನ ತೋರುವ ಮೂಲಕ 23-21, 21-17 ಅಂತರದಲ್ಲಿ ನೇರ ಸೆಟ್ ಗಳಲ್ಲಿ ಹಾಂಕಾಂಗ್ ನ ಎನ್ಗನ್ ಯೀ ವಿರುದ್ಧ ಗೆದ್ದು ಫ್ರೆಂಚ್ ಓಪನ್ ನಲ್ಲಿ ಶುಭಾರಂಭ ಮಾಡಿದ್ದಾರೆ. 

ಪಂದ್ಯದ ಆರಂಭದಿಂದಲೂ ಇಬ್ಬರ ನಡುವೆ ಭಾರಿ ಕಾದಾಟ ಏರ್ಪಟ್ಟಿತ್ತು. ಒಂದು ಹಂತದಲ್ಲಿ ಎನ್ಗನ್ ಯೀ ಅವರು ಮೊದಲ ಸೆಟ್ ನಲ್ಲಿ ಮುನ್ನಡೆ ಸಾಧಿಸಿ ಗೆಲುವಿನ ಸನಿಹದಲ್ಲಿದ್ದರು. ನಂತರ ಬಲವಾಗಿ ಪುಟಿದೆದ್ದ ಸೈನಾ ನೆಹ್ವಾಲ್ 23-21 ಅಂತರದಲ್ಲಿ ಮೊದಲ ಗೇಮ್ ತನ್ನದಾಗಿಸಿಕೊಂಡರು. 

ಎರಡನೇ ಸೆಟ್ ನಲ್ಲೂ ಅದೇ ಲಯ ಮುಂದುವರಿಸಿದ 29ರ ಪ್ರಾಯದ ಸೈನಾ ನೆಹ್ವಾಲ್ ಅವರು 21-17 ಅಂತರದಲ್ಲಿ ಗೆದ್ದು ಪಂದ್ಯ ತನ್ನದಾಗಿಸಿಕೊಂಡರು. 

ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಭಾರತದ ಜೋಡಿಯು ನೇದರ್ ಲೆಂಡ್ ನ ಜೆಲ್ಲೆ ಮಾಸ್ ಮತ್ತು ರಾಬಿನ್ ಟ್ಯಾಬೆಲಿಂಗ್ ವಿರುದ್ಧ 21-16, 21-14 ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿದೆ. 

ಇದಕ್ಕೂ ಮುನ್ನ ಭಾರತದ ಭರವಸೆಯ ಆಟಗಾರರಾದ ಕಿಡಂಬಿ ಶ್ರೀಕಾಂತ್ ಹಾಗೂ ಪರುಪಳ್ಳಿ ಕಶ್ಯಪ್ ಅವರು ಮೊದಲ ಸುತ್ತಿನ  ಪಂದ್ಯದಲ್ಲಿ ಸೋತು ಫ್ರೆಂಚ್ ಓಪನ್ ಟೂರ್ನಿಯಿಂದ ಹೊರ ನಡೆದಿದ್ದರು. ಕಿಡಂಬಿ ಶ್ರೀಕಾಂತ್ ಅವರು ತೈವಾನ್ ನ ಚೌ ಟೀನ್ ಚೆನ್ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿದ್ದರು. ಪರುಪಳ್ಳಿ ಕಶ್ಯಪ್ ಅವರು ಹಾಂಕಾಂಗ್ನ ಲಾಂಗ್ ಅಂಗುಸ್ ವಿರುದ್ಧ ಸೋಲು ಅನುಭವಿಸಿದ್ದರು.