ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪೂರ್ವ ತರಬೇತಿ ಉದ್ಘಾಟನೆ

Free pre-school training inaugurated for SSLC students

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪೂರ್ವ ತರಬೇತಿ ಉದ್ಘಾಟನೆ

ಹಾನಗಲ್ 08 :ಶಿಕ್ಷಣ ಹಣವಂತರ ಪಾಲು ಎಂಬ ಮಾತುಗಳು ಈಗ ದೂರವಾಗಿ ಪ್ರತಿಭಾವಂತರಿಗೆ ಶಿಕ್ಷಣ ಸಲ್ಲುವ ಕಾಲದಲ್ಲಿ ನಾವಿದ್ದೇವೆ. ಎಲ್ಲ ಸವಾಲುಗಳನ್ನು ಎದುರಿಸಿ, ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಮುನ್ನಡೆಯುವ ಇಚ್ಛಾಶಕ್ತಿ ವಿದ್ಯಾರ್ಥಿಗಳಿಗೆ ಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

   ಇಲ್ಲಿನ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿತವರ್ತನ ಕಲಿಕಾ ಕೇಂದ್ರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ 45 ದಿನಗಳ ಉಚಿತ ಶಾಲಾ ಪೂರ್ವ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭೆ, ಪರಿಶ್ರಮದಿಂದ ಮುನ್ನಡೆದವರು ಮಾತ್ರ ಯಶಸ್ವಿಯಾಗುತ್ತಾರೆ. ಎಲ್ಲ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಮೊದಲು ಸಿದ್ಧರಾಗಬೇಕು. ಹಣದ ಹಿಂದೆ ಶಿಕ್ಷಣ ಇಲ್ಲ. ಎಲ್ಲೆಡೆ ಪ್ರತಿಭಾವಂತರಿಗೆ ಉಚಿತ ಶಿಕ್ಷಣದ ಅವಕಾಶಗಳು ತೆರೆದುಕೊಳ್ಳುತ್ತಿವೆ. ಹಾನಗಲ್ಲಿನಲ್ಲಿ ಪರಿವರ್ತನ ಕಲಿಕಾ ಕೇಂದ್ರದ ಮೂಲಕ ತಾಲೂಕಿನ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಮ್ಮ ಆದ್ಯತೆಯಾಗಿದ್ದು, ಅದಕ್ಕಾಗಿ ವಿಶೇಷ ಕಾಳಜಿಯಿಂದ ಕೆಲಸ ಮಾಡಲಾಗುತ್ತಿದೆ. ಶಿಕ್ಷಣ ರಂಗಕ್ಕೆ ಸಾರ್ವಜನಿಕರಿಂದ ದಾನದ ಅಗತ್ಯವೂ ಇದೆ. ಬಡ ಹಿಂದುಳಿದ ಮಕ್ಕಳ ಕಲ್ಯಾಣಕ್ಕಾಗಿ ಇಂತಹ ದಾನದ ಪ್ರಯೋಜವಾಗಬೇಕು ಎಂದರು.  ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಮಾತನಾಡಿ ಜ್ಞಾನದ ಬುತ್ತಿ ಕಟ್ಟಿಕೊಳ್ಳುವ ಯತ್ನ ನಮ್ಮಿಂದಾಗಬೇಕು. ಕಲಿಕೆಗೆ ಆಸಕ್ತಿ ಇದ್ದರೆ ಎಲ್ಲವೂ ಸಾಧ್ಯ. ಹಾನಗಲ್  ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಹಲವು ರೀತಿಯಲ್ಲಿ ಭವಿಷ್ಯದ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ದೊರಕಿಸುತ್ತಿದ್ದಾರೆ. ಬದುಕು ಕಟ್ಟಿಕೊಳ್ಳಲು ಬೇಕಾಗುವ ಶಿಕ್ಷಣಕ್ಕೆ ನಾವೆಲ್ಲ ಆದ್ಯತೆ ನೀಡಬೇಕು ಎಂದರು.  ಆಶಯ ಮಾತುಗಳನ್ನಾಡಿದ ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ, ನೂರಾರು ಶಾಲೆಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವಲ್ಲಿ ಪರಿವರ್ತನ ಕಲಿಕಾ ಕೇಂದ್ರ ಶಾಸಕ ಶ್ರೀನಿವಾಸ ಮಾನೆ ಅವರ ನೇತೃತ್ವದಲ್ಲಿ ಯಶಸ್ವಿಯಾಗಿದೆ. ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಅದ್ಯತೆಯಾಗಿದೆ. ಸಿಇಟಿ, ಐಎಎಸ್, ಕೆಎಎಸ್, ಪೊಲೀಸ್ ಸೇರಿದಂತೆ ಹತ್ತು ಹಲವು ಸರಕಾರಿ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧತೆ ಮಾಡುವ ಕಾರ್ಯ ಇಲ್ಲಿಂದ ನಡೆಯುತ್ತಿದೆ ಎಂದರು.  ಪರಿವರ್ತನ ಕಲಿಕಾ ಕೇಂದ್ರದ ನಿರ್ದೇಶಕ ಸಂತೋಷ ಅಪ್ಪಾಜಿ, ಸಂಪನ್ಮೂಲ ಶಿಕ್ಷಕ ಬಸವರಾಜ ಲಮಾಣಿ, ಗೀರೀಶ ಅಂಬಿಗೇರ ಈ ಸಂದರ್ಭದಲ್ಲಿದ್ದರು.