ಉಡುಪಿಯಲ್ಲಿ ಇಂದಿನಿಂದ ಉಚಿತ ಬಸ್ ಸಂಚಾರ

ಉಡುಪಿ, ಮೇ 25,ಲಾಕ್ ಡೌನ್ ನಿಂದಾಗಿ ಒಂದೂವರೆ ತಿಂಗಳು ಸಾರ್ವಜನಿಕ ಸಂಚಾರವಿಲ್ಲದೆ  ಸಂಕಷ್ಟಕ್ಕೀಡಾದ ಜಿಲ್ಲೆಯ ಜನತೆ ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಉಡುಪಿಯಲ್ಲಿ ಇಂದಿನಿಂದ ಖಾಸಗಿ ಬಸ್ ಸಂಚಾರ ಪ್ರಾರಂಭಗೊಂಡಿದೆ. ಅಷ್ಟೇ ಅಲ್ಲದೆ ಐದು ದಿನಗಳ ಕಾಲ ಉಚಿತವಾಗಿ ಜನರು ನಗರದಲ್ಲಿ ಸಂಚರಿಸಬಹುದಾಗಿದೆ.ತಮ್ಮ ಸ್ವಂತ ಖರ್ಚಿನಿಂದ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಉಡುಪಿ ಶಾಸಕ ರಘುಪತಿ ಭಟ್ ನಗರದ ಜನರಿಗೆ ಉಚಿತ ಬಸ್ ಸೇವೆ ಕಲ್ಪಿಸಿದ್ದಾರೆ.ಉಡುಪಿ ನಗರದ ಏಳು ಮಾರ್ಗಗಳಿಗೆ 12 ಬಸ್ಸುಗಳ ಓಡಾಟವನ್ನು ಇಂದು ಪ್ರಾರಂಭಿಸಲಾಗಿದೆ.
ಉಚಿತ ಬಸ್ ಸೇವೆಯನ್ನು ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಈ ಬಸ್ ಗಳು ಟಿಕೆಟ್ ಕಲೆಕ್ಟರ್ ಇಲ್ಲದೆ ಓಡಾಡಲಿವೆ. ಜನರು ಹೆಚ್ಚಿಲ್ಲದ ಕಾರಣ, ಉಡುಪಿಯ ಖಾಸಗಿ ಬಸ್ ಮಾಲೀಕರು ಬಸ್ ಓಡಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಇದೇ   31 ರ ವರೆಗೆ ಉಚಿತ ಬಸ್ ಸೇವೆಯನ್ನು ಉಡುಪಿ ಶಾಸಕರು ಕಲ್ಪಿಸಿಕೊಟ್ಟಿದ್ದಾರೆ.