ಹಾಸನದಲ್ಲಿ ಮತ್ತೆ ಕೊರೋನಾ ನಾಲ್ಕು ಪ್ರಕರಣ ಪತ್ತೆ: 30ಕ್ಕೇರಿದ ಸೋಂಕಿತರ ಸಂಖ್ಯೆ

ಹಾಸನ, ಮೇ 18, ಜಿಲ್ಲೆಗೆ  ಮುಂಬೈ ಮೂಲದಿಂದ ಬಂದವರಲ್ಲೇ ದಿನದಿನಕ್ಕೂ ಹೊಸದಾಗಿ ಕೊರೋನಾ ಸೋಂಕು  ಪತ್ತೆಯಾಗುತ್ತಿದ್ದು, ಇಂದು ಕೂಡ 4 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಸೋಂಕಿತರ  ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸುದ್ದಿಗೋಷ್ಠಿಯಲ್ಲಿ  ತಿಳಿಸಿದ್ದಾರೆ.ಜಿಲ್ಲಾಧಿಕಾರಿ  ನ್ಯಾಯಾಲಯ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಪಾಸಿಟಿವ್  ಬಂದಿರುವ ಸೋಂಕಿತರಲ್ಲಿ 3 ಜನ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದ ಒಂದೇ  ಕುಟುಂಬದವರಾಗಿದ್ದು, ಮುಂಬೈನಿಂದ ಮೇ.12 ರಂದು ಜಿಲ್ಲೆಗೆ ಬಂದಿದ್ದಾರೆ.
ಮತ್ತೋರ್ವ  ಸೋಂಕಿತ ಹೊಳೆನರಸೀಪುರ ತಾಲ್ಲೂಕಿಗೆ ಸೇರಿದ್ದು, 17 ವರ್ಷ ವಯಸ್ಸಿನವನಾಗಿದ್ದು, ಈತ  ಕೂಡ ಮುಂಬೈಯಿಂದ ಬಂದಿದ್ದಾನೆ. ಈತನನ್ನು ದೊಡ್ಡಕಾಡನೂರು ಸಮುದಾಯದ ಕ್ವಾರಂಟೈನ್ ಅಲ್ಲಿ  ಇರಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಈ  4 ಜನ ಸೋಂಕಿತರನ್ನು ಜಿಲ್ಲೆಯ ಕೊವೀಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಒಟ್ಟಾರೆಯಾಗಿ ಜಿಲ್ಲೆಯ ಹಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತರ ಸಂಖ್ಯೆ 30 ರ ಗಡಿ  ಮುಟ್ಟಿದ್ದು, ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರಲ್ಲದೆ, ಇನ್ನೂ 470   ಜನರ ಕೊವೀಡ್-19 ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದರು.ಮೇ17  ರಂದು ರಾತ್ರಿ 7:15 ರಲ್ಲಿ ಜಿಲ್ಲೆಯಿಂದ ಬಿಹಾರಕ್ಕೆ 1440 ಜನ ಕಾರ್ಮಿಕರನ್ನು ತವರಿಗೆ  ರೈಲಿನ ಮುಖಾಂತರ ಕಳುಹಿಸಿ ಕೊಡಲಾಗಿದೆ. ಈ ಸಂದರ್ಭದಲ್ಲಿ ಅವರ ಆರೋಗ್ಯ ತಪಾಸಣೆ ಮಾಡಿ,  ಆಹಾರವನ್ನು ಒದಗಿಸಿ ಗೌರವದಿಂದ ಕಳುಹಿಸಿದ್ದು, ಉಳಿದವರಿಗಾಗಿ ಮತ್ತೊಂದು ರೈಲಿನ  ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆರ್ ಗಿರೀಶ್ ಹೇಳಿದರು.
ಮೇ 19  ರಂದು ಸಹ ಮಧ್ಯಪ್ರದೇಶಕ್ಕೆ ಸೇರಿದ ಜಿಲ್ಲೆಯಲ್ಲಿರುವ 230 ಕಾರ್ಮಿಕರನ್ನು , ಜಾರ್ಖಂಡ್  ಗೆ ಸೇರಿದ 120 ಜನರನ್ನು ರೈಲಿನ ಮೂಲಕವೇ ತವರಿಗೆ ಕಳುಹಿಸಲಾಗುತ್ತದೆ. ಅವರೆಲ್ಲ  ಜಿಲ್ಲೆಯಿಂದ ಹೋರಟು ಮೊದಲು ಬೆಂಗಳೂರು ತಲುಪಿ ನಂತರ ಇತರ ಜಿಲ್ಲೆಯ ಕಾರ್ಮಿಕರ ಜೊತೆಗೂಡಿ  ರೈಲಿನ ಮೂಲಕ ಅವರ ಸ್ವಸ್ಥಳಕ್ಕೆ ಸೇರಲಿದ್ದಾರೆಂದು ಅವರು ವಿವರಿಸಿದರು.ಈವರೆಗೂ  ಜಿಲ್ಲೆಗೆ 1304 ಜನರು ಬಂದಿದ್ದು, 294 ಜನ ಜಿಲ್ಲಾ ಆಸ್ಪತ್ರೆಯ ಕ್ವಾರಂಟೈನ್ ಅಲ್ಲಿ  ಮತ್ತು 878 ಹಾಸ್ಟೆಲ್ ಅಲ್ಲಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿದರು.ಸೇವಾ  ಸಿಂಧೂವಿನಲ್ಲಿ ಕಂಡು ಬಂದಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ ಎಂದ  ಜಿಲ್ಲಾಧಿಕಾರಿಯವರು ಆರೋಗ್ಯ ಸಿಂಧು ಆಪ್ ನಲ್ಲಿ ಸಕಾಲಕ್ಕೆ ಮಾಹಿತಿ ನೋಂದಣಿ ಮಾಡಲು  ಕ್ರಮವಹಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ  ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆರ್, ಜಿಲ್ಲಾ ಪಂಚಾಯತ್ ಮುಖ್ಯ  ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪವಿಭಾಗಾಧಿಕಾರಿ ಡಾ. ನವೀನ್ ಭಟ್,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಇದ್ದರು.