ಗುಳೇ ಹೊರಟ ಕಾರ್ಮಿಕರಿಗೆ ಮೂಡಬಿದಿರೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್‌ ಆಶ್ರಯ

ಮಂಗಳೂರು, ಮಾ.29 , ಮಂಗಳೂರಿನ ವಿವಿಧೆಡೆ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಮಿಕರಾಗಿ ಮಂಗಳೂರು, ಬಂಟ್ವಾಳ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಸದ್ಯದ ಪರಿಸ್ಥಿತಿಯಲ್ಲಿ ಹತಾಶಗೊಂಡು ತಮ್ಮ ಊರುಗಳಿಗೆ ಗುಳೇ ಹೊರಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟರೂ ತಮ್ಮ ತವರು ಮನೆಗಳಿಗೆ ವಾಪಸಾಗುವುದಾಗಿ ಹೇಳಿ ಹೊರಟಿರುವ ಸುಮಾರು 200ಕ್ಕೂ ಅಧಿಕ ಕಾರ್ಮಿಕರನ್ನು ಮೂಡಬಿದಿರೆಯಲ್ಲಿ ಪೊಲೀಸರು ತಡೆದಿದ್ದಾರೆ. ಈ ಕಾರ್ಮಿಕರಿಗೆ ಕಳೆದ ರಾತ್ರಿ ತಂಗಲು ಮಾಜಿ ಸಚಿವ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಜೈನ ಮಂದಿರ ಹಾಗೂ ವಿವಿಧೆಡೆ ವ್ಯವಸ್ಥೆ ಮಾಡಿಕೊಡಲಾಗಿದೆ. ಕೈಗೆ ಉದ್ಯೋಗವಿಲ್ಲ, ತಿನ್ನಲು ಕೂಳಿಲ್ಲ ಎಂಬ ಪರಿಸ್ಥಿತಿಯಲ್ಲಿ ಇವರು ಕಾರ್ಮಿಕರು ತಮ್ಮ ಊರುಗಳಿಗೆ ಹೋಗಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅಭಯಚಂದ್ರ ಜೈನ್ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕಾರ್ಮಿಕರ ನಿರ್ಗಮನಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.ಅಲ್ಲದೆ, ಸ್ಥಳೀಯ ಸಂಸದರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೂ ಅಭಯಚಂದ್ರ ಜೈನ್ ಮನವಿ ಮಾಡಿದ್ದು, ಕಾರ್ಮಿಕರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಮಾನವೀಯ ನೆಲೆಯಲ್ಲಿ ಅವರಿಗೆ ತಮ್ಮ ಊರಿಗೆ ತೆರಳಲು ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ.