ಅಮೆರಿಕ ಅಧ್ಯಕ್ಷರಿಂದ ಪ್ರಜಾಪ್ರಭುತ್ವಕ್ಕೆ ಬೆದರಿಕೆ : ಟ್ರಂಪ್ ವಿರುದ್ಧ ಮಾಜಿ ರಕ್ಷಣಾ ಕಾರ್ಯದರ್ಶಿ ಆರೋಪ

ವಾಷಿಂಗ್ಟನ್, ಮೇ 04, ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆಯುಂಟಾಗುತ್ತಿದೆ ಎಂದು ಮಾಜಿ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಆರೋಪಿಸಿದ್ದಾರೆ. ಶ್ಚೇತ ವರ್ಣೀಯ ಪೊಲೀಸ್ ಸಿಬ್ಬಂದಿಯಿಂದ ಫ್ಲಾಯ್ಡ್ ಹತ್ಯೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಜೇಮ್ಸ್ ಮ್ಯಾಟಿಸ್, ಪ್ರತಿಭಟನೆಯನ್ನು ಹತ್ತಿಕ್ಕಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ಬಲವನ್ನು ಬಳಸುತ್ತಿರುವುದನ್ನು ಖಂಡಿಸಿದ್ದಾರೆ. ಹಾಗೂ ಟ್ರಂಪ್ ಅವರು ನಾಗರಿಕ ಸಮಾಜದ ನಡುವೆ "ಸುಳ್ಳು ಸಂಘರ್ಷ" ವನ್ನು ಸ್ಥಾಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಅಟ್ಲಾಂಟಿಕ್ ನಿಯತಕಾಲಿಕೆಗೆ ನೀಡಿರುವ ಹೇಳಿಕೆಯಲ್ಲಿ “ಟ್ರಂಪ್ ಅನಗತ್ಯವಾಗಿ ದೇಶವನ್ನು ವಿಭಜಿಸುತ್ತಿದ್ದಾರೆ ಮತ್ತು ಪ್ರತಿಭಟನೆಗಳಿಗೆ ಅಮೆರಿಕದ ಪ್ರತಿಕ್ರಿಯೆಯನ್ನು ಮಿಲಿಟರೀಕರಣಗೊಳಿಸುತ್ತಿದ್ದಾರೆ” “ಡೊನಾಲ್ಡ್ ಟ್ರಂಪ್ ನನ್ನ ಜೀವಿತಾವಧಿಯಲ್ಲಿ ಅಮೆರಿಕದ ಜನರನ್ನು ಒಗ್ಗೂಡಿಸಲು ಪ್ರಯತ್ನಿಸದ ಹಾಗೂ ಪ್ರಯತ್ನಿಸುವಂತೆ ನಟಿಸಲೂ ಒಲ್ಲದ ಮೊದಲ ಅಧ್ಯಕ್ಷರು.  ಅವರು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಾರೆ" ಎಂದು ತಿಳಿಸಿದ್ದಾರೆ.  "ಈ ಉದ್ದೇಶಪೂರ್ವಕ ಪ್ರಯತ್ನದ ಮೂರು ವರ್ಷಗಳ ಪರಿಣಾಮಗಳಿಗೆ ನಾವು ಸಾಕ್ಷಿಯಾಗಿದ್ದೇವೆ" ಎಂದಿರುವ ಅವರು, " ನಮ್ಮ ಭರವಸೆಯನ್ನು ರಕ್ಷಿಸಲು ಬಲಿದಾನ ಮಾಡಿದ ಹಿಂದಿನ ಪೀಳಿಗೆಗೆ; ಮತ್ತು ನಮ್ಮ ಮಕ್ಕಳಿಗೆ ನಮ್ಮ ನಾಗರಿಕ ಸಮಾಜದಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯಗಳನ್ನು ಸೆಳೆಯುವ ಮೂಲಕ ನಾವು ಆತನಿಲ್ಲದೆ ಒಂದಾಗಬಹುದು. ಕಳೆದ ಕೆಲವು ದಿನಗಳು ತೋರಿಸಿದಂತೆ ಇದು ಸುಲಭವಲ್ಲ, ಆದರೆ ನಾವು ಅದನ್ನು ನಮ್ಮ ಸಹವರ್ತಿ ನಾಗರಿಕರಿಗೆ ನೀಡಬೇಕಿದೆ" ಮಿನ್ನಿಯಾ ಪೋಲಿಸರಿಂದ ನಿರಾಯುಧ ಕಪ್ಪು ಮನುಷ್ಯನಾದ ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ಅಮೆರಿಕಾದ 300 ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಹರಡಿರುವ ಪೊಲೀಸ್ ಕ್ರೌರ್ಯ ಮತ್ತು ಜನಾಂಗೀಯ ತಾರತಮ್ಯದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಮಿಲಿಟರಿ ಪಡೆಗಳನ್ನು ಕಳುಹಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ನಂತರ ಮ್ಯಾಟಿಸ್ ಅವರ ಈ ಹೇಳಿಕೆ ಹೊರಬಂದಿದೆ.