72ನೇ ವಸಂತಕ್ಕೆ ಕಾಲಿಟ್ಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ: ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ

ಬೆಂಗಳೂರು,ಆ 1     ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ  ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ಆದರೆ ರಾಜ್ಯದಲ್ಲಿ ತಲೆ ದೋರಿರುವ ನೆರೆ ಹಾಗೂ ಅತಿವೃಷ್ಟಿಯಿಂದಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ.ಹೀಗಾಗಿ ಸಿದ್ದರಾಮಯ್ಯ ಮನೆ ಕಡೆ ಯಾವೊಬ್ಬ ಕಾಂಗ್ರೆಸ್ ನಾಯಕರೂ ತಲೆ ಹಾಕಿಲ್ಲ. 

 ಎಡಗಣ್ಣಿಗೆ ಶಸ್ತ್ರಚಿಕಿತ್ಸೆ ಆಗಿರುವ ಕಾರಣ ಮತ್ತು ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ  ತಲೆದೋರಿರುವ ಹಿನ್ನೆಲೆಯಲ್ಲಿ ಹಾಗೂ ಜನ್ಮ  ದಿನ ಸಂಭ್ರಮಾಚರಿಸಿಕೊಳ್ಳದಿರಲು ನಿರ್ಧರಿಸಿರುವ  ಸಿದ್ದರಾಮಯ್ಯ,  ಮಾಜಿ ಸಚಿವರು,ಶಾಸಕರು,ಬೆಂಬಲಿಗರಿಗೆ ತಮ್ಮ  ನಿವಾಸಕ್ಕೆ  ಆಗಮಿಸದಂತೆ  ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ನನ್ನ ಎಡಗಣ್ಣಿಗೆ ಶಸ್ತ್ರ ಚಿಕಿತ್ಸೆಯಾಗಿದ್ದು, ಯಾರು ಶುಭಾಶಯ ಕೋರಲು ಬರಬೇಡಿ. ಕಣ್ಣಿಗೆ ಸೋಂಕು ತಗುವಲು ಸಾಧ್ಯತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.ಆದ್ದರಿಂದ ಇಂದು ಯಾರನ್ನೂ ತಾವು ಭೇಟಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ  ಅವರು ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.ಇದರಿಂದಾಗಿ ಇಂದು ಯಾವೊಬ್ಬ ನಾಯಕರೂ ಸಿದ್ದರಾಮಯ್ಯ ಅವರ ನಿವಾಸದ ಕಡೆಗೆ ಸುಳಿಯಲಿಲ್ಲ. 

ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು  ನಾಯಕರು ಟ್ವೀಟರ್ ಮೂಲಕ ಸಿದ್ದರಾಮಯ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.ಸಿದ್ದರಾಮಯ್ಯ ಅವರ  ರಾಜಕೀಯ ಗುರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರಿಗೆ ಜನ್ಮ ದಿನದ ಶುಭಾಶಯ ಕೋರಿ,ಸಿದ್ದರಾಮಯ್ಯ ಅವರಿಗೆ ಆಯುರಾರೋಗ್ಯ, ಸುಖ ಸಮೃದ್ಧಿ ನೀಡಲಿ ಎಂದು  ಹಾರೈಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆ ಜೆ ಜಾರ್ಜ,ಎಚ್ ಕೆ ಪಾಟೀಲ್, ಎಂ ಬಿ ಪಾಟೀಲ್ ಸೇರಿದಂತೆ ಹಲವಾರು ನಾಯಕರು ಸಿದ್ದರಾಮಯ್ಯ ಅವರು ಹುಟ್ಟು ಹಬ್ಬಕ್ಕೆ ಟ್ವೀಟರ್ ಮೂಲಕ ಶುಭಾಶಯ ಕೋರಿದ್ದಾರೆ.