ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಅರುಣ್ ಜೇಟ್ಲಿ ನಿಧನ

  ನವದೆಹಲಿ, ಆ 24     ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು; ಅವರಿಗೆ 66 ವರ್ಷ ವಯಸ್ಸಾಗಿತ್ತು.    ಕಳೆದ 15 ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಉಸಿರಾಟ, ಶ್ವಾಸಕೋಶ, ಮೂತ್ರಪಿಂಡ ಮೊದಲಾದ ಗಂಭೀರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.    ಕಳೆದ ಆ 9 ರಂದು ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದೇ ದಿನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಆರೋಗ್ಯ ಪರಿಸ್ಥಿತಿ ವಿಚಾರಿಸಿದ್ದರು. ಆನಂತರ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಸೇರಿದಂತೆ ಅನೇಕ ಕೇಂದ್ರ ಸಚಿವರು, ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.    ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಅವರು ಹಣಕಾಸು ಮತ್ತು ರಕ್ಷಣಾ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು.    ರಾಜಕೀಯ ವಲಯದಲ್ಲಿ ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಅರುಣ್ ಜೇಟ್ಲಿ ಚಿರಪರಿಚಿತರಾಗಿದ್ದರು. ತಾವು ವಹಿಸಿಕೊಂಡ ಖಾತೆಗಳ ಹೊಣೆಗಾರಿಕೆಯನ್ನು ಯಾವುದೇ ಲೋಪ ಇಲ್ಲದಂತೆ ಅಚ್ಚುಕಟ್ಟಾಗಿ ಮಾಡಿ ಸೈ ಎನಿಸಿಕೊಂಡಿದ್ದರು.     ಜೇಟ್ಲಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅನೇಕ ಕೇಂದ್ರ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಮಾಜದ ವಿವಿಧ ವರ್ಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ