ಮತ್ತೆ ವಕೀಲರಾಗಿ ಕಾಣಿಸಿಕೊಂಡ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ

ನವದೆಹಲಿ, ೧೧  - ಕಾಂಗ್ರೆಸ್  ಹಿರಿಯ ನಾಯಕ, ಮಾಜಿ  ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು  ಬುಧವಾರ  ಸುಪ್ರೀಂ ಕೋರ್ಟ್‌ನಲ್ಲಿ  ವಕೀಲರಾಗಿ  ಕಾಣಿಸಿಕೊಂಡರು.ಪ್ರಮುಖವಾಗಿ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಅವರು ತಮ್ಮ ವಕೀಲೀ  ವೃತ್ತಿಯನ್ನು  ಮತ್ತೆ ಮುಂದುವರಿಸಿದ್ದಾರೆ.   ಮುಂಬೈ ಮೂಲದ ಕೌಟುಂಬಿಕ ಹಿಂಸೆ  ಪ್ರಕರಣದಲ್ಲಿ ಅವರು ಬುಧವಾರ ವಕೀಲರಾಗಿ  ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದರು.

ಅವರೊಂದಿಗೆ ಹಿರಿಯ ವಕೀಲರು ಹಾಗೂ ರಾಜ್ಯಸಭೆಯ ಸಹೋದ್ಯೋಗಿಗಳಾದ  ಕಪಿಲ್ ಸಿಬಲ್  ಹಾಗೂ  ಅಭಿಷೇಕ್ ಮನು ಸಿಂಘ್ವಿ ರೊಂದಿಗೆ  ಮುಖ್ಯ ನ್ಯಾಯಮೂರ್ತಿ ಕೋರ್ಟ್ ಗೆ ಹಾಜರಾಗಿದ್ದರು.ಐಎನ್‌ಎಕ್ಸ್  ಮೀಡಿಯಾ  ಪ್ರಕರಣದಲ್ಲಿ ಬಂಧನಕ್ಕೊಳಗಾಗಿ  ೧೦೬ ದಿನಗಳ ಕಾಲ   ತಿಹಾರ್ ಜೈಲಿನಲ್ಲಿ ಕಳೆದಿದ್ದ  ಪಿ. ಚಿದಂಬರಂ  ಅವರಿಗೆ  ಕಳೆದ ವಾರ (ಡಿಸೆಂಬರ್ ೪) ಜಾಮೀನು ಲಭಿಸಿತ್ತು. 

ಕೇಂದ್ರ ಹಣಕಾಸು ಖಾತೆ, ಗೃಹ  ಖಾತೆ  ಸಚಿವರಾಗಿ   ಮಹತ್ವದ ಹೊಣೆಗಾರಿಕೆ ನಿರ್ವಹಿಸಿದ್ದ    ಚಿದಂಬರಂ   ಕಾನೂನು ಮತ್ತು ಆರ್ಥಶಾಸ್ತಜ್ಞರೂ ಕೂಡ ಆಗಿದ್ದಾರೆ.  ಅವರು ಚೆನ್ನೈನ  ಲಯೋಲಾ  ಕಾಲೇಜು, ಮದ್ರಾಸ್ ವಿಶ್ವವಿದ್ಯಾಲಯದ  ಚೆನ್ನೈ  ಕಾನೂನು ಕಾಲೇಜಿನಲ್ಲಿ   ವ್ಯಾಸಂಗ ಮಾಡಿರುವ   ಚಿದಂಬರಂ  ವೃತ್ತಿಪರ ವಕೀಲರು.

ಹಾರ್ವರ್ಡ್ ವಿಶ್ವವಿದ್ಯಾಲಯದಿಂದ  ಎಂಬಿಎ ಪದವಿ ಕೂಡಾ ಪಡೆದುಕೊಂಡಿದ್ದಾರೆ.  ಅವರು ಸುಪ್ರೀಂ ಕೋರ್ಟ್ ಮತ್ತು ದೇಶದ ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಚಿದಂಬರಂ ಅವರ ಪತ್ನಿ ನಳಿನಿ ಕೂಡ ವಕೀಲರಾಗಿದ್ದಾರೆ. ಏಳು ಬಾರಿ ಲೋಕಸಭಾ ಸದಸ್ಯರಾಗಿದ್ದ ಚಿದಂಬರಂ ಈಗ ಕಾಂಗ್ರೆಸ್ ನಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ.