ನವದೆಹಲಿ, ಏ 9,ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕಿದರೆ ಅವರು ಶತಕದಿಂದಲೇ ಪ್ರತ್ಯುತ್ತರ ನೀಡುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ವಿಡಿಯೋ ಒಂದರಲ್ಲಿ ಹೇಳಿದ್ದಾರೆ.ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚಿನ ಬ್ಯಾಟಿಂಗ್ ಸರಾಸರಿ ಹೊಂದಿರುವ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಅಂಗಣದಲ್ಲಿ ತಮ್ಮ ಆಕ್ರಮಣಕಾರಿ ಸ್ವಭಾವದಿಂದಲೇ ಎದುರಾಳಿಗಳ ಆತ್ಮಬಲವನ್ನು ಅಡಗಿಸಿಬಿಡುತ್ತಾರೆ. ಜೊತೆಗೆ ದೊಡ್ಡ ಶತಕಗಳನ್ನು ಬಾರಿಸುವ ಮೂಲಕ ಎದುರಾಳಿ ತಂಡಗಳನ್ನು ಧೂಳೀಪಟ ಮಾಡುತ್ತಾರೆ.ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಹಾಗೂ ನಾಯಕ ರಶೀದ್ ಲತೀಫ್, ಕೊಹ್ಲಿಯನ್ನು ಬೌಲರ್‌ಗಳು ಅನಗತ್ಯವಾಗಿ ಕೆಣಕಿದ ಸಂದರ್ಭವನ್ನು ವಿವರಿಸಿದ್ದಾರೆ. "2014ರ ಟೆಸ್ಟ್ ಸರಣಿಯಲ್ಲಿ ಎರಡು ಟೆಸ್ಟ್‌ಗಳ ಬಳಿಕ ಧೋನಿ ನಿವೃತ್ತಿ ಘೊಷಿಸಿದ್ದರು. ನಂತರ ಅಂತಿಮ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕ ಬಾರಿಸಿದ್ದರು. ಇದಕ್ಕೂ ಮುನ್ನ ಎಂಸಿಜಿಯಲ್ಲಿ ನಡೆದ 3ನೇ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲೂ ಕೊಹ್ಲಿ ಶತಕ ಗಳಿಸಿದ್ದರು. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನ ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಆಸೀಸ್ ವೇಗಿ ಮಿಚೆಲ್ ಜಾನ್ಸರ್ ಕೊಹ್ಲಿ ಎದುರು ಮಾತಿಗಿಳಿದು ಸಿಕ್ಕಾಪಟ್ಟೆ ಬೈದಾಡುತ್ತಿದ್ದರು. ಕೊಹ್ಲಿ ಕೂಡ ಮಾತಿನ ಜಟಾಪಟಿಗೆ ನಿಂತರಾದರೈ ಹ್ಯಾಟ್ರಿಕ್ ಶತಕದ ಪೆಟ್ಟನ್ನೂ ನೀಡಿದ್ದರು. ಸಿಡ್ನಿ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಬ್ಯಾಟ್ ಗರ್ಜಿಸಿತ್ತು. ಕೊಹ್ಲಿಯನ್ನು ಈ ರೀತಿ ಕೆಣಕಿದರೆ ಅವರಿಂದ ಉತ್ತರ ಒಂದೆ ಶತಕ," ಎಂದು ಲತೀಫ್ ವಿವರಿಸಿದ್ದಾರೆ.