ನರಭಕ್ಷಕ ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ತೀವ್ರ

ರಾಮನಗರ, ಮೇ17,ಮಾಗಡಿ ತಾಲ್ಲೂಕಿನಲ್ಲಿ ಇಬ್ಬರು ಗ್ರಾಮಸ್ಥರನ್ನು ಸಾಯಿಸಿದ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ.  ಕಾಡು ಪ್ರಾಣಿಯನ್ನು ಸೆರೆ ಹಿಡಿಯಲು ಕ್ಯಾಮೆರಾಗಳು ಮತ್ತು ಬೋನುಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲನೆಯದಾಗಿ 62 ವರ್ಷದ ಗಂಗಮ್ಮ ಎಂಬ ವೃದ್ಧೆ ತಮ್ಮ ಮನೆ ಮುಂದೆ ಮಲಗಿದ್ದಾಗ ಚಿರತೆ ಎಳೆದೊಯ್ದು ಸಾಯಿಸಿತ್ತು. ವೃದ್ಧೆಯ ಮೃತದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದೇ ರೀತಿ ಮಾಗಡಿ ತಾಲ್ಲೂಕಿನ ಕದಿರಯ್ಯನಪಾಳ್ಯದಲ್ಲಿ ಮೂರು ವರ್ಷದ ಬಾಲಕನನ್ನು ಚಿರತೆ ಸಾಯಿಸಿತ್ತು. ಕಳೆದ ಬುಧವಾರ ಅರಣ್ಯಾಧಿಕಾರಿಗಳು ಚಿರತೆಯೊಂದನ್ನು ಸೆರೆ ಹಿಡಿದಿದ್ದು, ವೃದ್ಧೆ ಮತ್ತು ಬಾಲಕನನ್ನು ಸಾಯಿಸಿದ್ದು ಅದೇ ಚಿರತೆಯೇ ಎಂಬುದು ದೃಢಪಟ್ಟಿಲ್ಲ.
 ನರಭಕ್ಷಕ ಚಿರತೆ ಸೆರೆಗೆ ಗ್ರಾಮದ ಸುತ್ತಲಿನ ಪ್ರದೇಶಗಳಲ್ಲಿ ಆರು ಬೋನುಗಳನ್ನು ಇಡಲಾಗಿದೆ. ಅಲ್ಲದೆ ಆರು ತಂಡಗಳನ್ನು ರಚಿಸಲಾಗಿದೆ. ಚಿರತೆ ಹಿಡಿಯುವವರೆಗೆ ಶಾಂತತೆ ಕಾಪಾಡುವಂತೆ ಅರಣ್ಯಾಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. ಸಂಜೆ ಆರು ಗಂಟೆ ನಂತರ ಮನೆಗಳಿಂದ ಹೊರ ಬರದಂತೆ ಎಚ್ಚರಿಸಿರುವ ಅಧಿಕಾರಿಗಳು ಬಯಲು ಶೌಚ್ಛಕ್ಕೆ ಹೋಗದಂತೆ ಸಲಹೆ ಮಾಡಿದ್ದಾರೆ. ಚಿರತೆ ಬಗ್ಗೆ ಸುಳಿವು ದೊರೆತರೆ 1926 ಸಂಖ್ಯೆಗೆ ಕರೆ ಮಾಡಿ ತಿಳಿಸುವಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.