ಲೋಕದರ್ಶನ ವರದಿ
ಶಿರಹಟ್ಟಿ 07: ಜನಸಾಮಾನ್ಯರ ಸರ್ವತೋಮುಖ ಅಭಿವ್ಯಕ್ತಿಯೇ ಜನಪದವಾಗಿದ್ದು, ಪರಂಪರಾಗತ ಅನುಭವ ಜ್ಞಾನವನ್ನು ಹೊಂದಿರುವ ಮೌಖಿಕ ಪರಂಪರೆಯ ಭಾಗವೇ ಜನಪದ ಸಾಹಿತ್ಯ ಎಂದು ಜಾನಪದ ಸಾಹಿತ್ಯ ಪರಿಷತ್ತಿನ ತಾಲ್ಲುಕಾ ಘಟಕ ಅಧ್ಯಕ್ಷ ಕೆ.ಎ ಬಳಿಗೇರ ಹೇಳಿದರು.
ಅವರು ಪಟ್ಟಣದ ನವನಗರದ ಬಾಲಕರ ವಸತಿ ನಿಲಯದಲ್ಲಿ ಜಾನಪದ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕನ್ನಡ ಜಾನಪದವು ಸರಳತೆ, ಸ್ಪಷ್ಟತೆ, ಪರಿವರ್ತನಾಶೀಲತೆ ಸರ್ವಸಾಮಾನ್ಯ ಬಳಕೆ ಹಾಗೂ ಎಲ್ಲರ ಸಾಮಾನ್ಯ ಒಪ್ಪಿತ ಸಾಹಿತ್ಯವಾಗಿದ್ದು, ವಿಶ್ವಮೌಲಿಕತೆ ಅಂಶಗಳನ್ನು ಒಳಗೊಂಡ ಜನಸಾಮಾನ್ಯರ ಉಸಿರಾಗಿ ಜಾನಪದ ಸಾಹಿತ್ಯ ಹೊರಹೊಮ್ಮಿದೆ.
ಪುರಾಣ, ಗಾದೆ, ಒಗಟು, ಸಂಗೀತ, ನೃತ್ಯ, ಆಟ, ಹಬ್ಬ, ಸಂಪ್ರದಾಯ ಮುಂತಾದ ಸಾಹಿತ್ಯಿಕ ಬಗೆಗಳನ್ನು ಒಳಗೊಂಡ ಜಾನಪದ ಸಾಹಿತ್ಯ ಪರಿಷತ್ತಿನ ಮೌಲ್ಯವನ್ನು ವಿಧ್ಯಾಥರ್ಿಗಳಿಗೆ ಪರಿಚಯಿಸುವ ಮಹತ್ತರ ಉದ್ದೇಶದಿಂದ ಬಾಲಕರ ವಸತಿ ನಿಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಕ್ಕಳು ಜಾನಪದ ಸಾಹಿತ್ಯದ ಸೊಗಡನ್ನು ಸವಿಯಬೇಕು ಎಂದು ಹೇಳಿದರು.
ಎಫ್.ಎಂ ಡಬಾಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಮಾತನಾಡಿ, ಜನರ ಜೀವಾಳವೇ ಜನಪದ ಸಾಹಿತ್ಯವಾಗಿದ್ದು, ಸರಳ ಹಾಗೂ ಸಹಜತೆಯ ಪ್ರತೀಕವಾಗಿದೆ. ಸಾಹಿತ್ಯಿಕ, ಭಾಷಿಕ, ವೈಜ್ಞಾನಿಕ, ಕ್ರೀಯಾತ್ಮಕ ಸೇರಿದಂತೆ ಹತ್ತು ಹಲವು ವಿಭಿನ್ನ ಬಗೆಯ ಶೈಲಿಯಲ್ಲಿ ಸಾಹಿತ್ಯಿಕ ಅಂಶಗಳು ನಮ್ಮ ಜೀವನದಲ್ಲಿ ಅಡಕಗೊಂಡಿವೆ, ಉತ್ತಮ ಪುಸ್ತಕಗಳನ್ನು ಮಕ್ಕಳು ಓದಬೇಕು. ಮುಖ್ಯವಾಗಿ ಮೊಬೈಲ್ ಹಾಗೂ ದೃಷ್ಯ ಮಾದ್ಯಮದಿಂದ ವಿದ್ಯಾಥರ್ಿಗಳು ದೂರವಿದ್ದು, ಉದಾತ್ತ ಚಿಂತನೆಗಳತ್ತ ಗಮನವಿಡಬೇಕು. ಪರೀಕ್ಷೆ ಎಂಬ ಭೂತವನ್ನು ದೂರವಿಟ್ಟು, ಮುಕ್ತ ಮನಸ್ಸಿನಿಂದ ಹಾಗೂ ಭಯಮುಕ್ತದಿಂದ ಪರೀಕ್ಷೆ ಎದುರಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಚನ ಸಾಹಿತ್ಯ ಪರಿಷತ್ ತಾಲ್ಲೂಕಾ ಘಟಕ ಅಧ್ಯಕ್ಷ ಎಚ್.ಎಂ ದೇವಗಿರಿ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕಾ ಘಟಕ ಅಧ್ಯಕ್ಷ ಎಫ್.ಎಸ್ ಅಕ್ಕಿ, ಪ್ರಕಾಶ ನರಗುಂದೆ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಾ ಘಟಕ ಅಧ್ಯಕ್ಷ ಎಂ.ಕೆ ಲಮಾಣಿ, ಶಿಕ್ಷಕರಾದ ಎಂ.ಎ ಮಕಾಂದರ, ವೆಂಕಟೇಶ ಅರ್ಕಸಾಲಿ, ಹನಮಂತ ವಡ್ಡರ, ಪಿ.ಎಫ್ ಬಂತಿ, ಪಿ.ಎಚ್ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು. ಷಣ್ಮುಖ ಬಡಭೀಮಪ್ಪನವರ ಸ್ವಾಗತಿಸಿ ವಂದಿಸಿದರು.