ಬೆಂಗಳೂರು ಆಗಸ್ಟ್ 12 ಸೋಮವಾರ ಭೀಮಾ ನದಿಯಲ್ಲಿನ ಪ್ರವಾಹ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದ್ದು, ನದಿ ಕೆಳಗಿರುವ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಹಳ್ಳಿಗಳು ತುಸು ನಿರಾಳವಾಗಿವೆ. ಆದರೆ ಕೃಷ್ಣ ಮತ್ತು ತುಂಗಭದ್ರಾ ನದಿಗಳಲ್ಲಿನ ಪ್ರವಾಹ ಮಟ್ಟವು ಹೆಚ್ಚಿದ್ದು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳು ಆತಂಕದಲ್ಲಿವೆ. ಕೃಷ್ಣ ಮತ್ತು ಕಾವೇರಿ ನದಿಯಿಂದ ನೀರಿನ ಹೊರಹರಿವು ಹೆಚ್ಚಾಗಿದ್ದು, ಈ ಪ್ರದೇಶಗಳಲ್ಲಿ ವಿನಾಶಕಾರಿ ಪ್ರವಾಹದ ಆತಂಕ ಮೂರನೇ ವಾರವೂ ಮುಂದುವರಿದಿದೆ.
ವಿಜಯಪುರದ ಕೃಷ್ಣ ನದಿಯ ಆಲಮಟ್ಟಿ ಜಲಾಶಯದಿಂದ ಮತ್ತು ರಾಯಚೂರಿನ ತುಂಗಭದ್ರಾ ಅಣೆಕಟ್ಟಿನಿಂದ ಇಂದು ಮಧ್ಯಾಹ್ನದವರೆಗೆ ಬೃಹತ್ ಪ್ರಮಾಣದ ನೀರನ್ನು ಹೊರಬಿಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಭಾನುವಾರ ಸಂಜೆಯಿಂದ ಮಹಾರಾಷ್ಟ್ರದ ಎರಡು ಪ್ರಮುಖ ಅಣೆಕಟ್ಟಿನಿಂದ ಸೋನ್ನ ಬ್ಯಾರೇಜ್ಗೆ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಸೋಮವಾರ 3 ಲಕ್ಷ ಕ್ಯೂಸೆಕ್ನಿಂದ 95,800 ಕ್ಯೂಸೆಕ್ ಇಳಿಕೆಯಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಹೇಳಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಭೀಮಾ ನದಿಯ ಪ್ರವಾಹ ಮಟ್ಟ ಮತ್ತಷ್ಟು ಇಳಿಯುವ ಸಾಧ್ಯತೆ ಇರುವುದರಿಂದ ನಾವು ಸಹಜ ಪರಿಸ್ಥಿತಿ ನಿರೀಕ್ಷಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಇಂದು ಆಮಲಟ್ಟಿಯಿಂದ ಹೊರಹರಿವು 5.40 ಲಕ್ಷ ಕ್ಯೂಸೆಕ್ಗಳಷ್ಟಿದ್ದು, ಇದು ಕಳೆದೊಂದು ದಶಕದಲ್ಲಿನ ಅತಿ ಹೆಚ್ಚು ಹೊರಹರಿವಾಗಿದೆ. ಒಟ್ಟು 519 ಮೀಟರ್ ಎತ್ತರ, 123 ಟಿಎಂಸಿ ಅಡಿ ನೀರಿನ ಸಂಗ್ರಹಣೆಯ ಒಟ್ಟು ಸಾಮಥ್ರ್ಯ ಹೊಂದಿರುವ ಅಣೆಕಟ್ಟು ಈಗ 517.3 ಮೀಟರ್ನಲ್ಲಿ 88.75 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಿದೆ. ಒಳಹರಿವು ಸುಮಾರು 6.30 ಲಕ್ಷ ಕ್ಯೂಸೆಕ್ ಆಗಿದೆ ಎಂದು ಕೃಷ್ಣ ಭಾಗ್ಯ ಜಲ ನಿಗಮ್ ಲಿಮಿಟೆಡ್ನ(ಕೆಬಿಜೆಎನ್ಎಲ್) ಮೂಲಗಳು ತಿಳಿಸಿವೆ.
ನಾರಾಯಣಪುರ ಬಸವ ಸಾಗರ್ ಜಲಾಶಯದಲ್ಲಿ ಒಳಹರಿವು 6.02 ಲಕ್ಷ ಕ್ಯೂಸೆಕ್ಗೆ ಹೆಚ್ಚಾಗಿದೆ ಮತ್ತು ಜಲಾಶಯದಿಂದ ಹೊರಹರಿವು 6.10 ಲಕ್ಷ ಕ್ಯೂಸೆಕ್ಗಳಷ್ಟಿದೆ. ರಾಯಚೂರಿನ ವಿವಿಧ ಸ್ಥಳಗಳಲ್ಲಿನ ಪರಿಹಾರ ಕೇಂದ್ರದಲ್ಲಿ 4,500 ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದು, ಪರಿಹಾರ ಕೇಂದ್ರದಲ್ಲಿ ಅವರಿಗೆ ಸರಿಯಾದ ಮೂಲಭೂತ ಸೌಲಭ್ಯಗಳನ್ನು ಖಾತ್ರಿಪಡಿಸಲಾಗಿದೆ. ಜಿಲ್ಲೆಯ 1,917 ಹೆಕ್ಟೇರ್ಗಿಂತಲೂ ಹೆಚ್ಚು ಪ್ರದೇಶಗಳಲ್ಲಿ ಬೆಳೆಗಳು ನೀರು ಪಾಲಾಗಿವೆ.
ತುಂಗಾಭದ್ರಾ ಅಣೆಕಟ್ಟಿನಿಂದ ನೀರು ಬಿಟ್ಟ ಬೆನ್ನಲ್ಲೇ ಮಂತ್ರಾಲಯದ ಬಳಿಯ ಎಲೆ ಬಿಚಲೆ ಗ್ರಾಮ ಕೂಡ ಪ್ರವಾಹಕ್ಕೆ ತುತ್ತಾಗಿದೆ.
ಯಾದಗಿರಿ ಜಿಲ್ಲೆಯಲ್ಲೂ ಪ್ರವಾಹ ಪರಿಸ್ಥಿತಿ ತೀವ್ರವಾಗಿದ್ದು, ಜಿಲ್ಲೆಯ ಮೂರು ಪ್ರಮುಖ ಸೇತುವೆಗಳು ಕೃಷ್ಣ ಪ್ರವಾಹದಲ್ಲಿ ಮುಳುಗಿವೆ. ಸುರಪುರ ತಾಲ್ಲೂಕಿನ ದೇವಪುರ ಬಳಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಿಣಸಾಗಿಯ ತೆಹ್ ದ್ವೀಪದಲ್ಲಿ ಸಿಲುಕಿಕೊಂಡಿದ್ದ ಐದು ರೈತರನ್ನು ಭಾನುವಾರ ಸಂಜೆ ವಾಯುಪಡೆ ವಿಮಾನದ ಮೂಲಕ ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ನ ತುಂಗಭದ್ರಾ ಜಲಾಶಯದಿಂದ 2.5 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಬಳ್ಳಾರಿಯ ಹಂಪಿಯ ವಿಶ್ವ ಪರಂಪರೆಯ ತಾಣದಲ್ಲಿನ ಹೆಚ್ಚಿನ ಸ್ಮಾರಕಗಳು ಪ್ರವಾಹಕ್ಕೆ ಸಿಲುಕಿವೆ. ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದಾರೆ.
ಪಾರಂಪರಿಕ ತಾಣವಾದ ಹಂಪಿಯಲ್ಲಿ, ಪುರಂದರ ಮಂಟಪ ಮತ್ತು ಚೋಳ ಮಂಟಪ ಮುಳುಗಿದ್ದರೆ, ರಾಮ ಲಕ್ಷ್ಮಣ ದೇವಸ್ಥಾನ, ಯಡೂರು ಬಸವಣ್ಣ ದೇವಸ್ಥಾನ ಮತ್ತು ಸಾಲು ಮಂಟಪ ಪ್ರವಾಹಕ್ಕೆ ಸಿಲುಕಿವೆ. ಜಲಾಶಯದಿಂದ ಹೊರಹರಿವು ಮತ್ತಷ್ಟು ಹೆಚ್ಚಾದರೆ ಶೀಘ್ರದಲ್ಲೇ ವಿರೂಪಾಕ್ಷ ದೇವಾಲಯದ ಆವರಣಕ್ಕೆ ನೀರು ನುಗ್ಗುವ ನಿರೀಕ್ಷೆಯಿದೆ. ಕೋಟಿಲಿಂಗ ದೇವಸ್ಥಾನ ಮತ್ತು ಸೀತಾ ಸೆರಗು ಪ್ರದೇಶದಲ್ಲಿ ಕೂಡ ಪ್ರವಾಹ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.