ಇಂದೋರ್, ನ 14 : ಭಾರತದ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಮೊದಲನೇ ಟೆಸ್ಟ್ ಪಂದ್ಯದ ಮೊದಲ ದಿನ ಆರಂಭಿಕ ಆಘಾತ ಅನುಭವಿಸಿದೆ.
ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ ಪ್ರಥಮ ಇನಿಂಗ್ಸ್ ನಲ್ಲಿ 26 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 63 ರನ್ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ನಾಯಕ ಮೊಮಿನುಲ್ ಹಕ್ ಅವರ ನಿರ್ಧಾರಕ್ಕೆ ಭಾರತದ ವೇಗಿಗಳು ಕೊಂಚ ಪೆಟ್ಟು ನೀಡಿದರು. ಆರಂಭಿಕರಾಗಿ ಕಣಕ್ಕೆ ಇಳಿದ ಶದ್ಮನ್ ಇಸ್ಲಾಮ್ ಹಾಗೂ ಇಮ್ರುಲ್ ಕಾಯ್ಸ್ ಜೋಡಿ ತಂಡದ ಮೊತ್ತ 12 ರನ್ ಇರುವಾಗಲೇ ಬೇರ್ಪಟ್ಟಿತು.
ಆರು ರನ್ ಗಳಿಸಿ ಆಡುತ್ತಿದ್ದ ಇಮ್ರುಲ್ ಕಾಯ್ಸ್ ಅವರನ್ನು ಉಮೇಶ್ ಯಾದವ್ ಅವರು ಔಟ್ ಮಾಡಿದರೆ, ಶದ್ಮನ್ ಇಸ್ಲಾಮ್(6) ಅವರನ್ನು ಇಶಾಂತ್ ಶರ್ಮಾ ಪೆವಿಲಿಯನ್ಗೆ ಅಟ್ಟಿದರು.
ನಂತರದ ಕ್ರೀಸ್ಗಿಳಿದ ಮೊಹಮ್ಮದ್ ಮಿಥುನ್ 36 ಎಸೆತಗಳಲ್ಲಿ 13 ರನ್ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ಮೊಹಮ್ಮದ್ ಶಮಿ ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಇದೀಗ ಕ್ರೀಸ್ನಲ್ಲಿರುವ ನಾಯಕ ಮೊಮಿನುಲ್ ಹಕ್ ಹಾಗೂ ಮುಷ್ಫಿಕರ್ ರಹೀಮ್ ಜೋಡಿ ಬಾಂಗ್ಲಾ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಹೊಣೆ ಹೊತ್ತಿದ್ದಾರೆ. ಮೊಮಿನುಲ್ ಹಕ್ 56 ಎಸೆತಗಳಲ್ಲಿ 22 ರನ್ ಹಾಗೂ ರಹೀಮ್ 22 ಎಸೆತಗಳಲ್ಲಿ 14 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ
ಪ್ರಥಮ ಇನಿಂಗ್ಸ್: 26 ಎಸೆತಗಳಲ್ಲಿ 63/3 (ಮೊಮಿನುಲ್ ಹಕ್ ಔಟಾಗದೆ 22, ಮುಷ್ಫಿಕರ್ ರಹೀಮ್ ಔಟಾಗದೆ 14; ಇಶಾಂತ್ ಶರ್ಮಾ 12 ಕ್ಕೆ 1, ಮೊಹಮ್ಮದ್ ಶಮಿ 12 ಕ್ಕೆ 1, ಉಮೇಶ್ ಯಾದವ್ 27 ಕ್ಕೆ 1).