ನವದೆಹಲಿ, ಜ 6 ,ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ 30 ಮಾಧ್ಯಮಗಳಿಗೆ ಮೊದಲ ‘ಅಂತಾರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮನ್’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಯೋಗ ಪ್ರಚುರಪಡಿಸುವಲ್ಲಿ ಮಾಧ್ಯಮಗಳ ಸಕಾರಾತ್ಮಕ ಪಾತ್ರ ಮತ್ತು ಜವಾಬ್ದಾರಿಯನ್ನು ಮನಗಂಡ ಸಚಿವಾಲಯ, ಕಳೆದ ವರ್ಷ ಜೂನ್‌ನಲ್ಲಿ ಯೋಗದ ಸಂದೇಶವನ್ನು ಹರಡುವಲ್ಲಿ ಮಾಧ್ಯಮಗಳ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಲು ನಿರ್ಧರಿಸಿತ್ತು.
ಪತ್ರಿಕೆಗಳಲ್ಲಿ ಯೋಗದ ಅತ್ಯುತ್ತಮ ಮಾಹಿತಿ ವಿಭಾಗದಡಿ ಹನ್ನೊಂದು ಪ್ರಶಸ್ತಿಗಳನ್ನು ನೀಡಲಾಗುವುದು, ದೂರದರ್ಶನದಲ್ಲಿ ಯೋಗದ ಅತ್ಯುತ್ತಮ ಮಾಹಿತಿ ಪ್ರಸಾರ ವಿಭಾಗದಡಿ 8 ಪ್ರಶಸ್ತಿಗಳನ್ನೂ, ಶ್ರವ್ಯ ಮಾಧ್ಯಮದಲ್ಲಿ ಯೋಗದ ಬಗ್ಗೆ ಹೆಚ್ಚು ಮಾಹಿತಿ ಪಸರಿಸಿದ ಸಂಸ್ಥೆಗಳಿಗೆ 11 ಪ್ರಶಸ್ತಿಗಳನ್ನು ನೀಡಲಾಗುವುದು. ವಿಶೇಷ ಪದಕ, ಫಲಕ, ಟ್ರೋಫಿ ಮತ್ತು ಭಿನ್ನವತ್ತಳೆಯನ್ನು ಪ್ರಶಸ್ತಿ ಒಳಗೊಂಡಿರುತ್ತದೆ. ಆರು ಸದಸ್ಯರನ್ನೊಳಗೊಂಡ ತೀರ್ಪುಗಾರರ ಸಮಿತಿ ಯೋಗವನ್ನು ಜನಪ್ರಿಯಗೊಳಿಸುವಲ್ಲಿ ಮಾಧ್ಯಮಗಳು ನೀಡಿದ ಕೊಡುಗೆಯನ್ನು ಗಮನಿಸಿ ಪ್ರಶಸ್ತಿ ನಿರ್ಣಯಿಸಿದ್ದಾರೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್ ಈ ಸಮಿತಿಯ ನೇತೃತ್ವ ವಹಿಸಿದ್ದರು.
2015 ರಿಂದ ಪ್ರತಿವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪರಿಕಲ್ಪನೆಯನ್ನು ಸೆಪ್ಟೆಂಬರ್ 27, 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು.