ಜಮ್ಮುವಿನಲ್ಲಿ ಅಗ್ನಿ ದುರಂತ: ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಸಾವು, ಅವಶೇಷಗಳಡಿ ಇಬ್ಬರು ಜೀವಂತ ಸಮಾಧಿ

  ಜಮ್ಮು, ಫೆ 12 : ನಗರದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ  ಮೂರು ಅಂತಸ್ತಿನ ಕಟ್ಟಡ ಕುಸಿದು, ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ಇತರ ಇಬ್ಬರು ಅವಶೇಷಗಳಡಿ ಜೀವಂತ ಸಮಾಧಿಯಾಗಿದ್ದಾರೆ.

  ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದಾರೆ. 

 ‘ದುರಂತದಲ್ಲಿ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, ಇತರ ಇಬ್ಬರು ಅವಶೇಷಗಳಡಿ ಜೀವಂತ ಸಮಾಧಿಯಾಗಿದ್ದಾರೆ.’ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

  ಉತ್ತರ ಜಮ್ಮುವಿನ ಪೊಲೀಸ್ ವರಿಷ್ಠಾಧಿಕಾರಿ ಪಿ ಡಿ ನಿತ್ಯಾ  ಯುಎನ್‌ಐಗೆ ತಿಳಿಸಿರುವಂತೆ, ಇದುವರೆಗೆ ಒಂದು ಸಾವಿನ ವರದಿ ಬಂದಿದ್ದು, ಇನ್ನೂ ಇಬ್ಬರು ಅವಶೇಷಗಳಡಿ ಸಿಕ್ಕಿಬಿದ್ದಿದ್ದಾರೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಇವರನ್ನು ಜಮ್ಮು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.  

 ಮೃತ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಜಾನಿಪುರದ ವಿಮಲ್ ರೈನಾ (32) ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

  ಇದಕ್ಕೂ ಮೊದಲು ಅಗ್ನಿ ಶಾಮಕ ಮತ್ತು ಸೇವೆಗಳ ಮಹಾನಿರ್ದೇಶಕ ಹೇಳಿಕೆ ನೀಡಿ, ಅವಶೇಷಗಳಡಿ ಮೂವರು ಜೀವಂತ ಸಮಾಧಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. 

  ಬೆಂಕಿಯಿಂದಾಗಿ ಕಟ್ಟಡ ಕುಸಿದಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ನಿರತವಾಗಿದೆ ಎಂದು ಅವರು ಹೇಳಿದ್ದಾರೆ.

‘ತಲಾಬ್ ಟಿಲ್ಲೊ ಪ್ರದೇಶದ ಗೋಲ್ ಪುಲಿಯಲ್ಲಿನ ಮರದ ಅಂಗಡಿಯಲ್ಲಿ ಬೆಳಗಿನ ಜಾವ 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಅಂಗಡಿಯು ಮರದ ದಿಮ್ಮಿಗಳಿಂದ ತುಂಬಿದ್ದರಿಂದ ಬೆಂಕಿಯ ಜ್ವಾಲೆ ಮೂರು ಅಂತಸ್ತಿನ ಕಟ್ಟಡಕ್ಕೆ ವ್ಯಾಪಿಸಿ, ಕಟ್ಟಡ ಕುಸಿದಿದೆ ಎಂದು ಅವರು ಹೇಳಿದರು.

  ಬೆಂಕಿಯನ್ನು ನಂದಿಸಲು 12ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.