ಬೆಂಗಳೂರು, ಫೆ 4 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲ ಸೇರ ಬಯಸಿರುವ ಸಚಿವಾಕಾಂಕ್ಷಿ ಶಾಸಕರ ಬಗ್ಗೆ ತಮಗೆ ಸಹಾನುಭೂತಿ ಇದ್ದು, ಅವರ ಭಾವನೆಗಳು ಅರ್ಥವಾಗುತ್ತದೆ. ಏನು ಹೇಳಬೇಕೋ ಅದನ್ನು ಪಕ್ಷದ ವೇದಿಕೆಯಲ್ಲಿ ಹೇಳುತ್ತೇನೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವನಾಗಿ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ನಮ್ಮದು ತ್ಯಾಗ-ಬಲಿದಾನದ ರಾಜಕಾರಣವೂ ಅಲ್ಲ, ಪರಮ ಸ್ವಾರ್ಥದ ರಾಜಕಾರಣವೂ ಅಲ್ಲ. ತತ್ವನಿಷ್ಠೆಯ ರಾಜಕಾರಣ ಮಾತ್ರ ಎಂದು ಮಾರ್ಮಿಕವಾಗಿ ನುಡಿದರು.
ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ತತ್ವ ನಿಷ್ಠೆಗೆ ಬೆಲೆ ಇಲ್ಲ ಎಂದು ಶಾಸಕ ಆನಂದ ಮಹಾಮನ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, " ತತ್ವ ನಿಷ್ಠೆಗೀಗ ಅಗ್ನಿಪರೀಕ್ಷೆ ಕಾಲ. ಇಂತಹ ಅಗ್ನಿ ಪರೀಕ್ಷೆಗಳನ್ನು ನಾವೂ ಎದುರಿಸಿದ್ದೇವೆ. ವಸಂತ ಕಾಲ ಬಂದಾಗ ಕಾಗೆ ಯಾವುದು, ಕೋಗಿಲೆ ಯಾವುದು ಎಂಬುದು ಬಯಲಾಗುತ್ತದೆ. ಕಾಲ ಬಂದಾಗ ತತ್ವನಿಷ್ಠರು ಯಾರು, ಅವಕಾಶವಾದಿಗಳು ಯಾರು ಎಂಬುದು ಗೊತ್ತಾಗುತ್ತದೆ " ಎಂದರು.
ಖಾತೆ ಬದಲಾವಣೆ ಬಗ್ಗೆ ತಮ್ಮಲ್ಲಿ ಮಾಹಿತಿ ಇಲ್ಲ. ಖಾತೆ ಬದಲಾವಣೆ ಕ್ರೀಡೆಯಲ್ಲಿ ರಿಲೇ ಬ್ಯಾಟನ್ ಇದ್ದ ಹಾಗೆ. ಯಾವ ಬ್ಯಾಟನ್ ಕೊಡುತ್ತಾರೋ ಅದನ್ನು ಹಿಡಿದುಕೊಂಡು ಓಡುತ್ತೇನೆ ಎಂದರು.