ಬೆಂಗಳೂರು,
ಏ.2 ,ಇಲ್ಲಿನ ಶಿವಾಜಿನಗರದ ಬಂಬೂ ಬಜಾರ್‌ನಲ್ಲಿನ ಮರದ ಮುಟ್ಟುಗಳ 15
ಅಂಗಡಿಗಳಿಗೆ ಗುರುವಾರ ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ.ಗಳ ಮರದ
ವಸ್ತುಗಳು ಸುಟ್ಟು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.ಅಂಗಡಿಯೊಂದರಲ್ಲಿ ಉಂಟಾದ
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮುಂಜಾನೆ 4 ಗಂಟೆಯ ವೇಳೆ ಬೆಂಕಿ ತಗುಲಿದ್ದು,
ಮರ ಮುಟ್ಟುಗಳಿದ್ದಿದ್ದರಿಂದ ಸ್ವಲ್ಪ ಹೊತ್ತಿನಲ್ಲೇ ಬೆಂಕಿಯು ಸಮೀಪದ 15 ಅಂಗಡಿಗಳಿಗೆ
ಆವರಿಸಿದೆ.ಬೆಂಕಿಯಿಂದ 15 ಅಂಗಡಿಗಳಲ್ಲಿನ ಮರದ ಹಲಗೆ, ರಿಪೀಸ್‌ಗಳು,
ಪೀಠೋಪಕರಣಗಳಿಗೆ ಬಳಸುತ್ತಿದ್ದ ಮರ ಮುಟ್ಟುಗಳು ಸುಟ್ಟು ಕರಕಲಾಗಿದ್ದು, ಅಂಗಡಿಗಳಲ್ಲಿ
ಯಾರು ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ 17 ಅಗ್ನಿಶಾಮಕ ವಾಹನಗಳು ಧಾವಿಸಿ ಬೆಳಿಗ್ಗೆ 11ರವರೆಗೆ ಬೆಂಕಿ ನಂದಿಸಿವೆ. ಬೆಂಕಿಯಿಂದ
ಲಕ್ಷಾಂತರ ರೂ.ಗಳ ಮರದ ವಸ್ತುಗಳು ಸುಟ್ಟು ಹೋಗಿದ್ದು, ಅಂಗಡಿಗಳ ಮಾಲೀಕರಿಗೆ ಅಪಾರ
ನಷ್ಟವುಂಟಾಗಿದೆ. ಭಾರತಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ
ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.