ಚಿತ್ರೋತ್ಸವ‌; ಉಳ್ಳವರಿಗಷ್ಟೇ ಅನುಕೂಲ

ಬೆಂಗಳೂರು, ಫೆ.7, ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರತಿಷ್ಠಿತ ಮಾಲ್‌ನಲ್ಲಿ ನಡೆಯುವುದರಿಂದ ಅಲ್ಲಿ ಕಾಫಿ, ತಿಂಡಿಗಳಿಗೆ ದುಬಾರಿ ದರ ವಿಧಿಸುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಸಿನಿಮಾ ಪ್ರಿಯರು ಆಕ್ಷೇಪ ವ್ಯಕ್ರಪಡಿಸಿದ್ದಾರೆ.ಸಿನೆಮಾ ಪ್ರಿಯರಿಗೆ ಅಂತಾರಾಷ್ಟ್ರೀಯ ಸಿನೆಮೋತ್ಸವ ಹಬ್ಬವೇ ಆಗಿರುತ್ತದೆ. ರಾಜ್ಯ, ಹೊರರಾಜ್ಯಗಳಿಂದಲೂ ಉತ್ತಮ ಸಿನೆಮಾ ನೋಡಲು ಹಂಬಲಿಸಿ‌ ಸಿನಿಪ್ರಿಯರು ಬರುತ್ತಾರೆ. ಬಂದವರಲ್ಲಿ ಹೆಚ್ಚಿನವರು ಸಿನೆಮೋತ್ಸವ ನಡೆಯುವ ಅಷ್ಟೂ ದಿನಗಳಲ್ಲಿಯೂ ಭಾಗವಹಿಸುತ್ತಾರೆ. ಫೆ. 26 ರಿಂದ ಮಾರ್ಚ್ 4ರ ತನಕ ನಡೆಯುವ ಚಿತ್ರೋತ್ಸವದಲ್ಲಿ ಭಾಗವಹಿಸಲು ಅನೇಕರು ಕಾತರಿಸುತ್ತಾರೆ. ಹೀಗೆ ಬಂದವರಲ್ಲಿ ಸಹಜವಾಗಿ ಬೇರೆ ಬೇರೆ ಆರ್ಥಿಕ ಹಿನ್ನೆಲೆಯವರೂ ಇರುತ್ತಾರೆ. ಆದರೆ ಕಡಿಮೆ ಆದಾಯವುಳ್ಳವರು  ಊಟ - ತಿಂಡಿ ಇರಲಿ ಕಾಫಿ - ಚಹಾಕ್ಕೂ ಪರದಾಡುವಂಥ ಪರಿಸ್ಥಿತಿ ಇದೆ ಎಂದು ಸಿನೆಪ್ರಿಯರು ದೂರುತ್ತಿದ್ದಾರೆ.

ಇದಕ್ಕೆ ಕಾರಣ ಮಾಲ್ ಸಂಸ್ಕೃತಿ.  ಹೊರಗಿನಿಂದ‌‌ ಸಣ್ಣದೊಂದು ಬಿಸ್ಕೇಟ್ ಪ್ಯಾಕ್ ಅನ್ನು ತೆಗೆದುಕೊಂಡು‌ ಹೋಗಲು ಅಲ್ಲಿಯ ನಿರ್ವಾಹಕರು ಬಿಡುವುದಿಲ್ಲ. ಏನೇ ಖರೀದಿಸುವುದಿದ್ದರೂ ಅಲ್ಲಿಯ ಸಿನೆಮಾ ಹಾಲ್ ಆವರದಲ್ಲಿರುವ ಪುಡ್ ಸ್ಟಾಲ್‍ನಲ್ಲಿಯೇ ಖರೀದಿಸಬೇಕು. ಇಲ್ಲಿಯ‌ ಲಘು ಉಪಹಾರದ ಬೆಲೆ ಕೇಳಿಯೇ ಬಹುತೇಕ ಸಿನೆಪ್ರಿಯರು ಬೆಚ್ಚಿ ಬೀಳುತ್ತಾರೆ.‌ ಇನ್ನೂ‌ ಮಾಲ್‍ನಲ್ಲಿರುವ ಹೋಟೆಲ್‍ಗಳ ಉಪಹಾರಗಳ ಬೆಲೆ ಕೇಳಿದರೆ ದಿಗಿಲಾಗುತ್ತದೆ ಎಂದು ದೂರುತ್ತಾರೆ. ಹೊರಗೆ ಹೋಗಿ ಉಪಹಾರ ಸೇವಿಸಲೂ‌‌ ಸಾಧ್ಯವಿಲ್ಲ. ಏಕೆಂದರೆ ಚಿತ್ರೋತ್ಸವ ನಡೆಯುವ ಮಾಲ್ ಸಮೀಪ ಹೋಟೆಲ್‍ಗಳಿಲ್ಲ. ಚಿತ್ರೋತ್ಸವ ನಡೆಸಲು ಮಾಲ್‍ನಲ್ಲಿರುವ ಎಲ್ಲ ಸಿನೆಮಾ ಹಾಲ್‍ಗಳನ್ನು ಅಕಾಡೆಮಿ ಬಾಡಿಗೆ ಪಡೆಯುತ್ತದೆ. ದುಬಾರಿ ದರವನ್ನೂ‌ ನೀಡಿರುತ್ತದೆ. ಹೀಗಿದ್ದರೂ ಸಿನೆಮಾ‌ ಹಾಲ್ ಒಳಗೆ ಲಘು ಉಪಹಾರ ತೆಗೆದುಕೊಂಡು ಹೋಗಲು ಬಿಡದಿರುವುದು ಸರಿಯಲ್ಲ ಎಂದು ಕಾಲೇಜು ಉಪನ್ಯಾಸಕ ರೋಹಿತ್ ಅಗಸರಹಳ್ಳಿ ದೂರುತ್ತಾರೆ. 

ಹೀಗೆ ಅವಕಾಶ ನೀಡಲು ಸಾಧ್ಯವಾಗದಿದ್ದರೆ ಮಾಲ್ ಆವರಣದಲ್ಲಿಯೇ ಕೈಗೆಟುಕುವ ಬೆಲೆಯಲ್ಲಿ ಉಪಹಾರ - ಕಾಫಿ - ಚಹಾ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸುತ್ತಾರೆ.ಚಿತ್ರೋತ್ಸವ ನೋಡಲು ಬಹಳ ಆಸೆಪಟ್ಟು ಬಂದಿರುತ್ತೇವೆ. ಆದರೆ ಅಲ್ಲಿಯ ಪುಡ್ ಸ್ಟಾಲ್‍ಗಳಲ್ಲಿನ ಬೆಲೆ ಕೇಳಿದರೆ ಆತಂಕವಾಗುತ್ತದೆ. ಸಿನೆಮೋತ್ಸವ ನಡೆಯುವ ಅಷ್ಟೂ ದಿನವೂ ಅರೆಹೊಟ್ಟೆಯಲ್ಲಿರಬೇಕಾದ ದುಸ್ಥಿತಿ ಎಂದು ಸಿನೆಮಾ ತರಬೇತಿ ಸಂಸ್ಥೆ ವಿದ್ಯಾರ್ಥಿ ಲೋಕೇಶ್ ದೂರುತ್ತಾರೆ. ಬರೀ ಉಪಹಾರದ ವಿಷಯಗಳಿಗಷ್ಟೇ ದೂರು ಸೀಮಿತವಾಗಿಲ್ಲ.‌ ಚಿತ್ರೋತ್ಸವದಲ್ಲಿ ತೀರಾ ಅತಿ ಎನಿಸುವಷ್ಟು ವಿಐಪಿ ಕಲ್ಚರ್ ಇದೆ. ವಿಐಪಿಗಳಿಗಾಗಿ ಹೆಚ್ಚು ಸೀಟುಗಳನ್ನು ಕಾಯ್ದಿರಿಸುತ್ತಾರೆ. ಇದರಿಂದ ಗಂಟೆಗಟ್ಟಲೇ ಸರದಿಯಲ್ಲಿ ನಿಂತ ಸಾಮಾನ್ಯ  ಪ್ರೇಕ್ಷಕರು ಸಿನೆಮಾ ನೋಡುವುದರಿಂದ ವಂಚಿತರಾಗುತ್ತಿದ್ದಾರೆ ಎಂದು ಸಿನೆಪ್ರಿಯ ಫಣಿರಾಜ್ ಹೇಳುತ್ತಾರೆ. ಪಾರ್ಕಿಂಗ್‍ಗೆ ದುಬಾರಿ ಬೆಲೆ ಕೀಳುವುದು ಸರಿಯಲ್ಲ ಎಂದು ಪ್ರಶಾಂತ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಎಲ್ಲ ಅವ್ಯವಸ್ಥೆಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ ಸರಿಪಡಿಸುವ ಅಗತ್ಯವಿದೆ. ಇಲ್ಲದಿದ್ದರೆ ಹಣವುಳ್ಳವರಿಗಷ್ಟೇ ಚಿತ್ರೋತ್ಸವ ಅನುಕೂಲ ಎಂಬ ದೂರು ಮುಂದುವರಿಯುತ್ತಲೇ ಇರುತ್ತದೆ.