ಪಟ್ಟಣದ ರಾಮೇನಹಳ್ಳಿ ಸರಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ

Field Education Officer visited Ramenahalli Government School in the town

ಪಟ್ಟಣದ ರಾಮೇನಹಳ್ಳಿ ಸರಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ  ಭೇಟಿ

ಮುಂಡರಗಿ 16 : ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ ಮಕ್ಕಳ ಮನಸ್ಸನ್ನು ಸೆಳೆದು, ಸ್ವ-ಕಲಿಕೆಗೆ ಸ್ಪೂರ್ತಿ ನೀಡುವಂತೆ ಕೊಠಡಿಗಳು ಹಾಗೂ ಶಾಲಾ ಆವರಣವನ್ನು ನಿರ್ಮಿಸಿರುವ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ ಎಂದು ಬೆಂಗಳೂರ ಆರ್‌ಟಿಇ ವಿಭಾಗದ ನಿರ್ದೇಶಕ ಮಣಿ ಅಭಿಪ್ರಾಯಪಟ್ಟರು. 

ಪಟ್ಟಣದ ರಾಮೇನಹಳ್ಳಿ ಸರಕಾರಿ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿ ಸಮುದಾಯದ ಸಹಕಾರದಲ್ಲಿ ಅಭಿವೃದ್ಧಿಪಡಿಸಿದ ಮಕ್ಕಳ ಸ್ನೇಹಿ ಕಲಿಕಾ ವಾತಾವರಣ, ವಿಷಯಾಧಾರಿತ ಕಲಿಕಾ ತರಗತಿ ಕೋಣೆಗಳು, ತೆರೆದ ವಾಚನಾಲಯ ಹಾಗೂ ಮಕ್ಕಳ ರಂಗವೇದಿಕೆ ಪರೀಶೀಲಿಸಿ ಸಂತಸ ವ್ಯಕ್ತಪಡಿಸಿದರು. ಇದರೊಟ್ಟಿಗೆ ಮಕ್ಕಳು ಕಲಿಕೆಯಲ್ಲಿ ಲವಲವಿಕೆಯಿಂದ ಭಾಗಿಯಾಗಿರುವುದರ ಕುರಿತು ಚರ್ಚಿಸಿದರು.ಜಿಲ್ಲಾ ಉಪನಿರ್ದೇಶಕ ಆರ್‌.ಎಸ್‌.ಬುರಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಂ.ಫಡ್ನೆಸಿ, ಕ್ಷೇತ್ರ ಸಮನ್ವಯಾಧಿಕಾರಿ, ಗಂಗಾಧರ ಅಣ್ಣಿಗೆರಿ, ಡಯಟ್ ಉಪನ್ಯಾಸಕ ಎಚ್‌.ಬಿ.ರಡ್ಡೇರ ಹಾಗೂ ಕುರಿಯವರ ಜೊತೆಗಿದ್ದರು.  

ಜಿಲ್ಲಾ ಉಪನಿರ್ದೇಶಕ ಆರ್‌.ಎಸ್‌.ಬುರಡಿಯವರು, ಶಿಕ್ಷಕರು ಹಾಗೂ ಸಮುದಾಯ ಮನಸ್ಸು ಮಾಡಿದರೆ, ಒಟ್ಟುಗೂಡಿ ಕಾರ್ಯಮಾಡಿದರೆ ಸರ್ಕಾರಿ ಶಾಲೆ ಹೇಗೆ ಅಭಿವೃದ್ಧಿ ಹೊಂದಬಲ್ಲವು ಎಂಬುದಕ್ಕೆ ರಾಮೇನಹಳ್ಳಿ ಶಾಲೆ ಉದಾಹರಣೆಯಾಗಿದೆ. ಬಹಳ ಕಾಳಜಿಯಿಂದ ದಾನಿಗಳ ನೆರವಿನಿಂದ ವಿಭಿನ್ನವಾಗಿ, ಅರ್ಥಪೂರ್ಣವಾಗಿ ಮಕ್ಕಳು ಮತ್ತು ಸಮುದಾಯವನ್ನು ಆಕರ್ಷಿಸುವ ರೀತಿಯಲ್ಲಿ ಶಾಲಾ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.  ಕಳೆದ ಒಂದೂವರೆ ವರ್ಷಗಳಲ್ಲಿ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅದ್ಯಕ್ಷರು, ಸದಸ್ಯರು, ದಾನಿಗಳ ನೆರವು ಪಡೆದು ಕೈಗೊಂಡ ಈ ಉತ್ತಮ ಪ್ರಯತ್ನಕ್ಕೆ ಇಲಾಖೆಯ ಪರವಾಗಿ ಅಭಿನಂದಿಸುವೆ ಎಂದರು.ಶಾಲೆಯ ಮುಖ್ಯ ಶಿಕ್ಷಕ ಡಾ.ನಿಂಗು ಸೊಲಗಿ ಮಾತನಾಡಿ, ಸಾರ್ವಜನಿಕರ ದೇಣಿಗೆಯಿಂದ ಕಂಪೌಂಡ್ ರಿಪೇರಿ ಹಾಗೂ ಬಣ್ಣ ಚಿತ್ರಗಳ ಅಲಂಕಾರ, ಮೈದಾನ ಸಮತಟ್ಟುಗೊಳಿಸಿ ಫೆವರ್ ಹೊಂದಿಸಿ, ಉದ್ಯಾನ ಅಭಿವೃದ್ಧಿಪಡಿಸಿ ಇಂಗು ಗುಂಡಿ ನಿರ್ಮಿಸುವ ಮೂಲಕ  ಪರಿಸರ ಸ್ನೆಹಿ ಶಾಲೆಯನ್ನಾಗಿಸಿರುವುದು; ಮಕ್ಕಳ ರಂಗಚಟುವಟಿಕೆಗೆ ಬೆಂಬಲವಾಗಿ ಆಕರ್ಷಕ ಮಕ್ಕಳ ರಂಗವೆದಿಕೆ ನಿರ್ಮಿಸಿರುವುದು, ಇತ್ತೀಚೆಗೆ ದಾನಿಗಳಾದ ಆನಂದಗೌಡ ಪಾಟೀಲರು ಅವರ ತಂದೆಯ ಹೆಸರಿನಲ್ಲಿ ಒಂದುಲಕ್ಷ ರೂ. ವೆಚ್ಚದಲ್ಲಿ ಎಲ್ಲ ತರಗತಿ ಕೋಣೆಗಳನ್ನು ವಿಷಯಾಧಾರಿತ ಚಿತ್ರಗಳೊಂದಿಗೆ ವರ್ಣಾಲಂಕಾರಗೊಳಿಸಿ ಕಲಿಕಾ ಲ್ಯಾಬ್ ನಿರ್ಮಿಸಲು ನೆರವಾಗಿರುವುದೂ ಸೇರಿ ಸುಮಾರು ಐದೂವರೆ ಲಕ್ಷ ರೂಪಾಯಿಗಳ ನೆರವಿನಿಂದ ಶಾಲೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿರುವುದನ್ನು ಅಧಿಕಾರಿಗಳಿಗೆ ಮನವರಿಕೆಮಾಡಿಕೊಡುತ್ತ ಸಹಕರಿಸಿದ ಶಿಕ್ಷಕಬಳಗ ಹಾಗೂ ರಾಮೇನಹಳ್ಳಿ ಜನತೆ ಸ್ಮರಿಸಿಕೊಳ್ಳುತ್ತ ಸಮುದಾಯದ ಸಹಕಾರವಿಲ್ಲದೇ ಸರಕಾರಿ ಶಾಲೆಗಳು ಸವಾಂರ್ಗೀಣ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಅದು ಜನಸಮುದಾಯದ ಶಾಲೆಯಾದಾಗ ಮಾತ್ರ ಇದು ಸಾಧ್ಯ ಎಂದರು. 

ಎಸ್‌.ಡಿ.ಎಂ.ಸಿ ಅಧ್ಯಕ್ಷ ಮಹೇಶ ಬಾಗಳಿ, ಶಿಕ್ಷಕರಾದ ಪಿ.ಎಂ.ಲಾಂಡೆ, ಎಮ್‌.ಆರ್‌.ಗುಗ್ಗರಿ, ಶ್ರೀಮತಿ ಪಿ.ಆರ್‌. ಗಾಡದ, ಬಿ.ಎಚ್‌. ಹಲವಾಗಲಿ, ಶಿವಲೀಲಾ ಅಬ್ಬಿಗೇರಿ ಉಪಸ್ಥಿದರಿದ್ದರು.