ಹೆಣ್ತನ ಎನ್ನುವದು ಅಂತಃಸತ್ವ ಆಕಾರ

ಮಣ್ಣಿಗೂ ಬೆಲೆ ಇದೆ, ಹೆಣ್ಣಿಗೂ ಬೆಲೆ ಇದೆ. ಮಣ್ಣು ಜೀವನಕ್ಕೆ ಬೇಕಾದರೆ ಹೆಣ್ಣು ಜೀವನದ ಭಾಗವಾಗಿ ಭಾವಕ್ಕೆ ಬೇಕಾದವಳು. ಈ ನೆಲದ ಮಣ್ಣಿಗೆ ಹೆಣ್ತನವನ್ನು ಧಾರೆಯಾಗಿ ಜೋಡಿಸಿದ್ದು ಹೆಣ್ಣಿನ ಜೀವನಾನುಭವವೇ ಮಣ್ಣಿನದ್ದು ಆಗಿದ್ದುದರಿಂದ ಆಗಿರಬಹುದು! ಒಂದು ತುಂಡು  ಜಾಗಕ್ಕೆ ಲಕ್ಷಲಕ್ಷ ಹಣವನ್ನು ನಿಗದಿಪಡಿಸಿದರೆ ಬೆಲೆಯಲ್ಲ. ಇಲ್ಲಿರುವುದು ಭಾವದ ಬೆಲೆ. ಹೆಣ್ಣಿಗೂ ಮಣ್ಣಿಗೂ ಮೌಲ್ಯವನ್ನು ಇಂತಿಷ್ಟೆ ಎಂದು ನಿರ್ಧರಿಸಲು ಸಾಧ್ಯವೇ ಇಲ್ಲ. ನಾಲ್ಕಾರು ಎಕರೆಯ ಜಮೀನನ್ನು ನಾವು ಬೆಲೆ ಕೊಟ್ಟು ಖರೀದಿಸಿದರೆ ಅದು ಬಾಹ್ಯವಾದ ಬೆಲೆಯೇ ಹೊರತು ಆಂತರಿಕ ಬೆಲೆಯಲ್ಲ. ಹೆಣ್ಣು ಕೂಡ ಹಾಗೆ ದೇಹವನ್ನು ನೋಡಿ, ಆಕೆಯ ಮುಖಸೌಂದರ್ಯ ನೋಡಿ ಅದೆಷ್ಟೋ ವಿವಾಹಗಳಲ್ಲಿ ವರದಕ್ಷಿಣೆಯ ರೂಪದಲ್ಲಿ ಬೆಲೆ ಕಟ್ಟುವುದು ಸಾಕಷ್ಟು ನೋಡಿದ್ದೇವೆ. ಕೇವಲ ದೈಹಿಕವಾಗಿ ನೋಡಿ ಬೆಲೆ ಕಟ್ಟುವವರು ಆಕೆಯ ಮನಸ್ಸನ್ನು ಅಳಿಯಲಾರ.  ಹಾಗಾಗಿ ಮಣ್ಣಿನ ಅಂತರಂಗದ ಸುವಾಸನೆಗೂ ಹೆಣ್ಣಿನ ಅಂತರಾತ್ಮದ ಭಾವನೆಗೂ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.  

ಅ.ನ.ಕೃಷ್ಣರಾಯರು ಹೆಣ್ಣಿನ ಬಗ್ಗೆ ಒಂದು ಮಾತನ್ನು ಹೇಳುತ್ತಾರೆ. ಹೆಣ್ಣನ್ನು ತೆಗಳುವವರಿಗೆ ಹೆಣ್ಣಿನ ಅಂತರಾತ್ಮದ ಬಗ್ಗೆ ಪರಿಚಯ ಸಾಕಷ್ಟು ಪ್ರಮಾಣದಲ್ಲಿ ಆಗಿಲ್ಲ. ಹೊಗಳುವವನಿಗಂತೂ ಎಷ್ಟೂ ಆಗಿಯೇ ಇಲ್ಲ ಎಂದು. ಅಂದರೆ ಆಕೆ ಯಾರದ್ದೋ ಒಬ್ಬನ ಮನಸ್ಸಿಗೆ ನಿಲುಕುವವಳಲ್ಲ. ಭೂಮಿ ದುಡಿಯುವವನ ಫಲ. ಆಕೆ ರೈತ ಯಾವ ರೀತಿಯಲ್ಲಿ ಹಸನು ಮಾಡಿ ಯಾವ ಕಾಳನ್ನು ಬಿತ್ತಿ ಆರೈಕೆ ಹೇಗೆ ಮಾಡುತ್ತಾನೆ ಎನ್ನುವುದರ ಫಲ ಮುಂದಿನ ಬೆಳೆಯಾಗುತ್ತದೆ. ಪ್ರಕೃತಿಯನ್ನು ಸಹ ಮೀರಿ ಆಕೆ ಆ ರೈತನಿಗೆ ಒಲಿಯುವ ತಾಕತ್ತು ಪಡೆಯುತ್ತಾಳೆ. ಹಾಗೆ ಹೆಣ್ಣು ಕೂಡ ನೋಡುವ ದೃಷ್ಟಿಯಲ್ಲಿ ಆಕೆ ಪ್ರತಿಯೊಬ್ಬನಿಗೂ ಭಿನ್ನಭಿನ್ನವಾಗಿಯೇ ಕಾಣಿಸಿಕೊಳ್ಳುತ್ತಾಳೆ. ಆಕೆಯೊಬ್ಬಳು ಬಿಳಿ ಮೈಯ್ಯ ಸೌಂದರ್ಯದ ಗಣಿಯಾಗಿ ಕಂಡರೆ, ಮತ್ತೊಬ್ಬನಿಗೆ ಬಿಳಿತೊಗಲಿನ ಹೆಣ್ಣಾಗಿ ಕಾಣಿಸುವಳು. ಮೊಗದೊಬ್ಬನಿಗೆ ಬುದ್ದಿಯೇ ಇಲ್ಲದ ದಡ್ಡಿಯೆನಿಸಿದರೆ, ಇನ್ಯಾರಿಗೋ ತಗ್ಗಿ ಬಗ್ಗಿ ನಡೆಯುವ ಸಾದ್ವಿಯೆನಿಸುವಳು. ಹೀಗೆ ಅವರವರ ಪಾತ್ರಕ್ಕೆ ಆಕೆ ತುಂಬಿಕೊಳ್ಳುತ್ತ ಸಾಗುವಳು. ನೀರಿನಂತೆ ಹೆಣ್ಣು ಮತ್ತು ಮಣ್ಣಿನ ಭಾವಗಳು.  

ಮಣ್ಣಿಗೂ ಹೆಣ್ಣಿಗೂ ಬಹಳ ಸಾಮ್ಯತೆ ಇದೆ ಎನ್ನುವದು ನಿತ್ಯಾನುಭವವೇದ್ಯ. ತಾಳ್ಮೆ, ಸಹನೆ, ಸ್ವೀಕರಿಸುವ ಗುಣ, ಪ್ರತೀಫಲಾಪೇಕ್ಷೆ ಇಲ್ಲದೆ ಕೊಡುವ ಮನಸ್ಸು ಇನ್ನೂ ಅನೇಕ ರೀತಿಯಲ್ಲಿ ಹೋಲಿಕೆಯನ್ನು ಕಾಣಬಹುದು. ಈಗ ನಾವು ಒಂದು ಗಿಡವನ್ನು ಬೆಳೆಸಿದ್ದೆವೆ ಎಂದರೆ ಆ ಬೀಜವನ್ನು ನಾನು ಬಿತ್ತಿದೆ, ಅದಕ್ಕೆ ನೀರು ಉಣಿಸಿದೆ, ಗೊಬ್ಬರವನ್ನು ಹಾಕಿದೆ ಎಂದು ಹೇಳುತ್ತೇವೆ. ಆದರೆ ಆ ನೀರು, ಬೀಜ, ಮಣ್ಣು, ಗೊಬ್ಬರ ಇವೆಲ್ಲದರ ಮೂಲ ಯಾವುದು ಎಂದು ಮರೆಯುತ್ತೇವೆ. ಬೇರೆಬೇರೆಯಾಗಿದ್ದವನ್ನು ಒಟ್ಟು ಗೂಡಿಸುವುದು ನಿಮ್ಮ ಧರ್ಮ ಎಂದೆ ನಮ್ಮನ್ನು ಆ ಸೃಷ್ಟಿ ನಿಯೋಜಿಸಿ ಕಳುಹಿಸಿರುವುದು. ಹಾಗಿರುವಾಗ ಪ್ರಕೃತಿಯಲ್ಲಿರುವುದನ್ನು ಒಂದು ಕಡೆ ಜೋಡಿಸಿ ಅಲ್ಲೊಂದು ಸೃಷ್ಟಿಗೆ ದಾರಿ ಮಾಡುವ ಕರ್ತವ್ಯವನ್ನು ನಾನು ಮಾಡಿದೆ ಎನ್ನುವದು ನಿಜವಾದ ಸ್ವಾರ್ಥವೇ ಸರಿ. ಆದರೆ ಮಣ್ಣು ಎಂದಾದರೂ ನಾನು ಈ ಮನುಷ್ಯನಿಗೆ ಬದುಕಲು ಅವಕಾಶ ಕೊಟ್ಟಿರುವೆ, ನೀರು ಕೊಟ್ಟಿರುವೆ, ಉಸಿರಾಡಲು ಗಾಳಿ ಇಟ್ಟಿರುವೆ, ಆಹಾರ ಬೆಳೆದು ಕೊಡುತ್ತಿರುವೆ ಎಂದು ಹೇಳುವುದಿಲ್ಲ. ಹಾಗೆಯೇ ಹೆಣ್ಣು ಕೂಡ. ನಾನು ಒಂದು ಸಂಸಾರಕ್ಕೆ ಬಂದು ಮಕ್ಕಳನ್ನು ಹೆತ್ತು ಕೊಟ್ಟಿರುವೆ, ನಿತ್ಯ ಅಡುಗೆ ಮಾಡಿ ಹಾಕಿರುವೆ, ಬಟ್ಟೆ ತೊಳೆದೆ ಎಂದು ಲೆಕ್ಕ ಹಚ್ಚಿ ಬೀಗಿಕೊಳ್ಳುವುದಿಲ್ಲ. ಗಂಡ ಅಥವಾ ಕುಟುಂಬದವರು ಪ್ರೀತಿಯಿಂದ ನೋಡಿಕೊಳ್ಳಲಿ ಅಥವಾ ಇಲ್ಲದಿರಲಿ ಆಕೆಯ ಸೇವೆ ಮಾತ್ರ ನಿಸ್ವಾರ್ಥವಾಗಿ ಯತಾವತ್ತಾಗಿ ಸಾಗಿಕೊಂಡು ಹೋಗುತ್ತಿರುತ್ತದೆ. ತನ್ನಿಂದಲೇ ಎಂದು ಯಾವತ್ತು ಹೇಳಿಕೊಳ್ಳದ ಹೆಣ್ಣು ಕಾಮಧೇನುವಾಗಿ ನಿಲ್ಲುತ್ತಾಳೆ ಎಂದು ಹಿರಿಕರು ಹೇಳುತ್ತಾರೆ.  

ಕ್ಷೇತ್ರಫಲ ನ್ಯಾಯದಲ್ಲಿ ಹೇಳುವಂತೆ ಬೀಜಾಂಕುರವಾದ ಮೇಲೆ ಬಿತ್ತಿದ ರೈತನ ಕಾರ್ಯ ಮುಗಿದು ಹೋಗುತ್ತದೆ. ಆ ಮೇಲೆ ಬೆಳೆಸುವ ಪೋಷಿಸುವ ಎಲ್ಲ ಕಾರ್ಯವೂ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಹೀಗಿರುವಾಗ ಮಣ್ಣಿನಲ್ಲಿ ಹುಟ್ಟಿ ಬೆಳೆ ಹಾಗೂ ಹೆಣ್ಣಿನ ಗರ್ಭದಲ್ಲಿ ಹುಟ್ಟಿದ ಶಿಶುವು  ಇವೆರಡರ ಹೊಣೆಯನ್ನು ಹೆಣ್ತನವೇ ಹೋರುತ್ತದೆ. ತನ್ನ ಆದ್ಯ ಕರ್ತವ್ಯ ಎಂದು ವ್ಯವಹರಿಸುತ್ತವೆ. ಆ ಹೆಣ್ತನಕ್ಕೆ ಯಾವ ಬೆಲೆ ಕಟ್ಟಲು ಸಾಧ್ಯ!?  

ಇಂಥ ಹೆಣ್ಣನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಪೂರ್ವಿಕರು ಬೆಲೆ ನಿಗದಿ ಮಾಡಲಾಗದ ಪ್ರತೀಯೊಂದಕ್ಕೂ ಹೆಣ್ಣಿನ ಹೆಸರನ್ನೇ ಇಟ್ಟರು. ಆ ಮೂಲಕ ಹೆಣ್ಣಿಗೂ ಗೌರವ ಕೊಟ್ಟರು. ಹೆಣ್ಣಿನ ಮುಖಾಂತರ ಆ ವಿಷಯಗಳಿಗೂ ಗೌರವ ಕೊಟ್ಟರು. ಹೆಣ್ಣಿಗೆ ತ್ಯಾಗಮಯಿ ಅಥವಾ ವಾತ್ಸಲ್ಯಮಯಿ ಎನ್ನುವುದನ್ನು ಯಾರು ಕೊಟ್ಟಿದ್ದಲ್ಲ. ಆಕೆಯೇ ದಕ್ಕಿಸಿಕೊಂಡಿದ್ದು. ತನ್ನದೇ ಆದ ಗಂಭಿರತೆಯ ಜೊತೆ ಘನತೆಯ ನಡೆಯನ್ನು ಸಮಾಜದ ಮುಂದೆ ಆಕೆ ನಡೆಯುತ್ತ ಬಂದವಳು. ಭೂಮಿ ತಾನು ಬೆಳೆದ ಸಸ್ಯದಿಂದ ಬಂದ ಫಲವನ್ನು ಹಂಚಿಬಿಡುವುದು ಪ್ರಾಣಿ ಪಕ್ಷಿಗಳು ಹುಳ ಹಪ್ಪಡಿಗಳ ಹೊಟ್ಟೆ ತುಂಬಲಿ ಎಂದು. ಹೆಣ್ಣು ಒಂದು ಮಗುವನ್ನು ಪಡೆದರೆ ತನ್ನ ಮಗುವಾಗಿ ತನ್ನನ್ನು ಮಾತ್ರ ನೋಡುತ್ತಿರಲಿ ಎಂದು ಬಯಸುವುದಿಲ್ಲ. ಸಮಾಜದೊಳಗೆ ಬೆರೆತು ಬಾಳಲಿ, ಈ ಮಣ್ಣಿನ ಇನ್ನಿತರ ಜೀವ ಜೀವಿಗಳಿಗೆ ನೆಲೆಯಾಗಲಿ, ರಾಷ್ಟ್ರಕ್ಕೆ  ಮಾದರಿಯಾಗಿ ಮುಂದಿನ ಅದೆಷ್ಟೋ ಜನರಗೆ ಸ್ಪೂರ್ತಿಯಾಗಿರಲಿ ಎಂದು ಬಯಸುತ್ತಾಳೆ.   

ಎಲ್ಲಿಯ ತನಕ ಈ ಮಣ್ಣು ನೀಡುವ ಸಂಸ್ಕಾರಕ್ಕೆ ಹೆಣ್ಣು ಬದ್ಧಳಾಗಿ ಜೀವನ ನಡೆಸುತ್ತಾಳೋ ಅಲ್ಲಿಯತನಕ ಅದೆಷ್ಟೇ ವೈಚಾರಿಕವಾಗಿ ಯುದ್ಧ ನಡೆದರು ಗೆಲ್ಲುವದು ಹೆಣ್ಣೆ. ಪ್ರತೀ ಮೊದಲ ಮಳೆಗೆ ಮಣ್ಣು ಕಂಪನ್ನು ಹೊರಡಿಸುತ್ತದೆ, ಆ ಕಂಪನ್ನು ಹೀರಿದ ಹೆಣ್ಣು ತನ್ನ ತನವನ್ನು ಕಾಪಾಡಿಕೊಂಡು ಭಾರತೀಯ ಸಂಸ್ಕಾರವನ್ನು ಬಿತ್ತುವಲ್ಲಿ ಯಶಸ್ವಿಯಾಗುತ್ತಾಳೆ. ಅಲ್ಲದೇ ತಾನು ಬೆಳೆಯುತ್ತಾಳೆ. ಹಾಗಾಗಿಯೇ ಹೆಣ್ಣು ಮಣ್ಣು ಎರಡು ಹೆಣ್ತನವುಳ್ಳ ಏಕ ಅಂತಸತ್ವವುಳ್ಳ ಏಕರೂಪಿಯ ಭಾವವುಳ್ಳ ವ್ಯವಸ್ಥೆ ಎಂದು ಹೇಳಲಾಗುತ್ತದೆ.  

- * * * -