ಧಾರವಾಡ 12: ನಗರಕ್ಕೆ ಆಗಮಿಸಿದ್ದ ಅಯೋಧ್ಯೆಯ ಬಾಲರಾಮನ ವಿಗ್ರಹ ನಿರ್ಮಾತೃ ಮೈಸೂರಿನ ಅರುಣ ಯೋಗಿರಾಜ ಅವರನ್ನು ಸವಿತಾ ಅಮರಶೆಟ್ಟಿ ಬಳಗ ಹಾಗೂ ಸಂಸ್ಕಾರ ಭಾರತಿ, ಧಾರವಾಡ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಖ್ಯಾತ ಶಿಲ್ಪಿ ಅರುಣ ಯೋಗಿರಾಜ ಅವರು ಒಬ್ಬ ಶಿಲ್ಪಕಲಾವಿದರಿಗೆ ಈ ರೀತಿ ಸಮಾಜ ಗೌರವ ನೀಡುತ್ತಿರುವುದು ಹೆಮ್ಮೆಯ ಸಂಗತಿ, ನಾನೊಬ್ಬ ಮೈಸೂರು ಅರಮನೆಯ 5ನೇ ತಲೆಮಾರಿನ ಶಿಲ್ಪಕಲಾವಿದನಾಗಿ ಒಂದು ಉಪಕರಣವಾಗಿ ಬಾಲ ರಾಮನ ಮೂರ್ತಿ ಕೆತ್ತನೆ ಕಾರ್ಯ ಮಾಡಿದ್ದೇನೆ. ಇಡೀ ದೇಶದ ಜನ ಐದು ಶತಮಾನಗಳಿಂದ ಆ ಕ್ಷಣಕ್ಕಾಗಿ ಕಾಯುತ್ತಿದ್ದರು. ಆ ಕಾರಣದಿಂದ ಶ್ರೀರಾಮನೇ ನನ್ನಿಂದ ಕಾರ್ಯ ಮಾಡಿಸಿಕೊಂಡಿದ್ದಾನೆ. ಪ್ರತಿದಿನ ಕೆಲಸ ಮಾಡುವಾಗ ಮೂರ್ತಿ ಒಂದೊಂದು ರೂಪ ತಾಳುತ್ತಿತ್ತು, ನಾನು ಪ್ರಾರ್ಥನೆ ಮಾಡಿ ಬಹಳಷ್ಟು ಭಾವನಾತ್ಮಕವಾಗಿ, ಶ್ರದ್ಧೆಯಿಂದ, ಏಕಾಗ್ರತೆಯಿಂದ ಸುಮಾರು 9 ತಿಂಗಳು ಕಾಲ ಅಯೋಧ್ಯೆಯಲ್ಲಿದ್ದು ತಪಸ್ಸಿನಂತೆ ಕಾರ್ಯ ಮಾಡಿದ್ದೇನೆ. ಶಿಲ್ಪಶಾಸ್ತ್ರದ ಅಧ್ಯಯನ, ಆಭರಣಗಳ, ಆಯುಧಗಳ ಜ್ಞಾನ ಸಹಕಾರಿಯಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಸವಿತಾ ಅಮರಶೆಟ್ಟಿ, ವಿಶ್ವನಾಥ ಅಮರಶೆಟ್ಟಿ, ಮಹಾಬಳೇಶ್ವರ ಸಿಂದಗಿ, ಅಶೋಕ ಮೊಕಾಶಿ, ಡಾ.ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ.ಶ್ರೀಧರ ಕುಲಕರ್ಣಿ, ಮಾರ್ತಾಂಡಪ್ಪ ಕತ್ತಿ, ವೀರಣ್ಣ ಪತ್ತಾರ, ಪ್ರಕಾಶ ಬಾಳಿಕಾಯಿ, ಅಶೋಕ ಕೋರಿ, ಶಿಲ್ಪಾ ಪಾಂಡೆ, ಎಸ್.ಕೆ.ಪತ್ತಾರ, ಡಾ.ಬಸವರಾಜ ಕುರಿ, ವೈಶಾಲಿ ರಸಾಳಕರ, ಮಹೇಶ ಮೈಸೂರು, ಆರತಿ ಪಾಟೀಲ, ಡಾ.ವೀಣಾ ಬಿರಾದಾರ, ನಡಕಟ್ಟಿ ದಂಪತಿಗಳು, ವಿಜಯ ಸುತಾರ ಮುಂತಾದವರು ಇದ್ದರು.