ಬೆಳಗಾವಿ 29: ಕಣಬರಗಿಯ ಸ್ಕೀಮ್ ನಂ. 61ರ ಅಡಿ ಬಡಾವಣೆ ಅಭಿವೃದ್ಧಿಪಡಿಸಲು ತಮ್ಮ ವಶಕ್ಕೆ ಪಡೆದುಕೊಳ್ಳಲು ಉದ್ದೇಶಿಸಿದ್ದ 160 ಎಕರೆ ಜಮೀನನ್ನು ಬಿಟ್ಟುಕೊಡಲು ರೈತರು ಸಿದ್ಧರಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ ಜಮೀನು ಸ್ವಾಧೀನ ಪ್ರಕ್ರಿಯೆ ಕೈಬಿಟ್ಟು, ರೈತರು ಈ ಜಮೀನಿನಲ್ಲಿ ಸಾಗುವಳಿ ಮಾಡಲು ಅವಕಾಶ ನೀಡಬೇಕು ಎಂದು ಕಣಬರಗಿಯ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಸಿದ್ದೇಶ್ವರ ಶೇತಕರಿ ಸಂಘಟನೆ ಕಾರ್ಯಕರ್ತರು ಬುಡಾ ಕಚೇರಿ ಎದುರು ಪ್ರತಿಭಟನೆ ನಡೆಸಿ ಬುಡಾ ಅಧ್ಯಕ್ಷರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಈ ಕುರಿತು ಇಲ್ಲಿನ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಗೆ ಶನಿವಾರ ಆಗಮಿಸಿದ ಹಲವಾರು ರೈತರು ಈ ಕುರಿತು ಬುಡಾ ಅಧ್ಯಕ್ಷ ಘೋಳಪ್ಪ ಹೊಸಮನಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸ್ಕೀಮ್ ನಂ.61ರ ಅಡಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಬಡಾವಣೆ ಅಭಿವೃದ್ಧಿಪಡಿಸಲು ಕಣಬರಗಿ ಬಳಿ ಸಾಗುವಳಿ ಜಮೀನು ವಶಕ್ಕೆ ತೆಗೆದುಕೊಳ್ಳಲು ಉದ್ದೇಶಿಸಿ 160 ಎಕರೆ ಜಮೀನು ಮಾಲಿಕರಿಗೆ 2007ರಲ್ಲಿ ನೋಟಿಸ್ ನೀಡಿತ್ತು. ಆದರೆ ರೈತರು ಸಾಗುವಳಿ ಜಮೀನು ಬಿಟ್ಟುಕೊಡಲು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ ಜಮೀನು ಸ್ವಾಧೀನ ಪ್ರಕ್ರಿಯೆ ಕೈಬಿಟ್ಟು, ರೈತರು ಈ ಜಮೀನಿನಲ್ಲಿ ಸಾಗುವಳಿ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬುಡಾ ಕಚೇರಿಗೆ ತೆರಳಿದ ಕಣಬರಗಿಯ ರೈತರು, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅವರನ್ನು ಭೇಟಿ ಮಾಡಿ ರೈತರನ್ನು ಬುಡಾ ಬಜೆಟ್ ಸಭೆಗೆ ಕರೆದು ಮಾತನಾಡಲು ಅವಕಾಶ ನೀಡಬೇಕು. ಕಣಬರಗಿ ಜಮೀನು ವಿವಾದ ಬಗೆಹರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಕಣಬರಗಿ ಬಳಿ ಬುಡಾ ವಶಪಡಿಸಿಕೊಳ್ಳಲು ಉದ್ದೇಶಿಸಿದ್ದ 160 ಎಕರೆ ಜಮೀನು ಪೈಕಿ 14 ಎಕರೆಯಲ್ಲಿ ಬಡಜನರು ಮನೆ ನಿರ್ಮಿಸಿಕೊಂಡಿದ್ದಾರೆ. ಈ ಮನೆಗಳಿಗೆ ಪಾಲಿಕೆಯಿಂದ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಭೂ ಮಾಫಿಯಾ ಬಳಿ ಇರುವ 80 ಎಕರೆ ಜಮೀನು ವಶಪಡಿಸಿಕೊಳ್ಳಲು ಇದುವರೆಗೂ ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆ ಅನುಮತಿ ನೀಡಿಲ್ಲ.
25 ಎಕರೆ ಜಮೀನಿನ ವಿವಾದ ಇನ್ನೂ ಧಾರವಾಡ ಕೋರ್ಟನಲ್ಲಿದೆ. ಹಾಗಾಗಿ ಸ್ಕೀಮ್ ನಂ. 61ಕ್ಕೆ ಕಣಬರಗಿ ಬಳಿ 160 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಸ್ಥಗಿತಗೊಳಿಸಿ ರೈತರಿಗೆ ಸಾಗುವಳಿ ಮಾಡಲು ಜಮೀನು ಬಿಟ್ಟುಕೊಡಬೇಕು ಎಂದು ರೈತರು ಆಗ್ರಹಿಸಿದರು. ಇಂದಿನ ಪ್ರತಿಭಟನೆಯಲ್ಲಿ ಕಣಬರಗಿ ಶೇತಕರಿ ಸಂಘಟನೆಯ ಅಧ್ಯಕ್ಷ ಬಬನ್ ಮಲಾಯಿ, ಕೃಷ್ಣಾ ಅಷ್ಟೇಕರ, ರಾಮಾ ಡಿ., ರೈತ ಸಂಘ ಮತ್ತು ಹಸಿರು ಸೇನೆಯ ಪ್ರಕಾಶ ನಾಯ್ಕ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗವಹಸಿದ್ದರು.