ಕಳಪೆ ಕಾಮಗಾರಿ ಮಾಡಿ ವಂಚಿಸುತ್ತಿದ್ದ ಗುತ್ತಿಗೆದಾರ ಬಂದಿಸಲು ರೈತರು ಒತ್ತಾಯ
ರಾಣೇಬೆನ್ನೂರು 8: ಕಳಪೆ ಕಾಮಗಾರಿ ಮಾಡುತ್ತಾ ಮೇಲಾಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡುತ್ತಾ ಹಗಲು ದರೋಡೆ ಮಾಡುತ್ತಿರುವ ಗುತ್ತಿಗೆದಾರ ಹಾವೇರಿ ಮೂಲದ ಚನ್ನಮಲ್ಲಿಕಾರ್ಜುನ ಡಿ. ಹಾವೇರಿಯನ್ನು ಬಂದಿಸಬೇಕೆಂದು ಒತ್ತಾಯಿಸಿ ಇಂದು ರೈತರು ಬಿಗಿಪಟ್ಟು ಹಿಡಿದು ಕುಳಿತ ಘಟನೆ ತಾಲೂಕಿನ ಹಲಗೇರಿ ಪೊಲೀಸ್ ಠಾಣೆಯಲ್ಲಿ ಜರುಗಿದೆ.
ತಾಲೂಕಿನ ಇಟಗಿ ಹಲಗೇರಿ (ಹರಿಹರ-ಸಮ್ಮಸಗಿ) ರಸ್ತೆಯ ಕಾಮಗಾರಿ ಸೇರಿದಂತೆ ರಾಣೇಬೆನ್ನೂರಿನಿಂದ ಗಂಗಾಜಲ ತಾಂಡಾ ರಸ್ತೆ, ಬೇಲೂರು, ಅಂಕಸಾಪುರ ಮುಂತಾದ ರಸ್ತೆಗಳ ನಿರ್ಮಾಣದ ಗುತ್ತಿಗೆ ಪಡೆದ ಈ ಗುತ್ತಿಗೆದಾರ ಮಾಡಿದ ಕಾಮಗಾರಿಗಳೆಲ್ಲಾ ಕಳಪೆಮಟ್ಟದಿಂದ ಕೂಡಿದ್ದು ಸರಕಾರ ಮತ್ತು ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡುತ್ತಿರುವ ಈ ಗುತ್ತಿಗೆದಾರ ಹಲಗೇರಿ ಇಟಗಿ ರಸ್ತೆಯ ನಿರ್ಮಾಣ ಮಾಡುತ್ತಿರುವ ಸಂದರ್ಭದಲ್ಲಿ ರಸ್ತೆಗೆ ನೀರು ಹೊಡೆಯದೆ ಬರೀ ಕೆಂಪುಮಣ್ಣು ಹೇರಿದ್ದರಿಂದ ರಸ್ತೆಯ ಎರಡೂ ಬದಿಯಲ್ಲಿ ರೈತರು ಬೆಳೆದ ಹತ್ತಿ, ಕಡಲೆ, ಬಿಳಿಜೋಳ ಬೆಳೆಗಳು ನಾಶವಾಗಿದ್ದು, ರೈತರು ಬೆಳೆನಷ್ಟ ಪರಿಹಾರ ಮತ್ತು ಕಳಪೆ ಕಾಮಗಾರಿಯ ವಿರುದ್ಧ ಕಳೆದ 22 ರಂದು ಹಲಗೇರಿ ಇಟಗಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಗುತ್ತಿಗೆದಾರನನ್ನು ಸ್ಥಳಕ್ಕೆ ಕರೆಯಿಸಲು ಪ್ರಯತ್ನಿಸಿದರೂ ಊರಲ್ಲಿ ಇಲ್ಲ ಎಂಬ ಸಂದೇಶ ರವಾನಿಸಿ ಬಿಸೋ ದೊಣ್ಣಿಯಿಂದ ತಪ್ಪಿಸಿಕೊಂಡ ಗುತ್ತಿಗೆದಾರ ಮತ್ತೆ ಅಧಿಕಾರಿಗಳು ಗಡುವು ನೀಡಿದ ದಿನಾಂಕಕ್ಕೆ ಬಾರಲೇ ಇಲ್ಲ, ರೊಚ್ಚಿಗೆದ್ದ ರೈತರು ಇಂದು ರಾಷ್ಟ್ರೀಯ ಹೆದ್ದಾರಿ-48 ರ ಕಮದೋಡ ಹತ್ತಿರ ಇಂದು ರಸ್ತೆ ತಡೆ ಪ್ರತಿಭಟನೆಗೆ ಸಿದ್ಧರಾದಾಗ ಪೊಲೀಸ್ ಹಿರಿಯ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಯವರು ಹಲಗೇರಿ ಪೊಲೀಸ್ ಠಾಣೆಗೆ ಬರುವಂತೆ ರೈತರನ್ನು ಒಪ್ಪಿಸಿ ಅಲ್ಲಿಗೆ ಗುತ್ತಿಗೆದಾರನಿಗೆ ಬರಹೇಳಿದರು. 3 ತಾಸು ರೈತರು ಕಾದರೂ ಗುತ್ತಿಗೆದಾರ ಸಿ.ಡಿ. ಹಾವೇರಿ ಅಲ್ಲಿಗೂ ಬಾರೆದೇ ಇದ್ದಾಗ ರೊಚ್ಚಿಗೆದ್ದ ರೈತರು ಅಧಿಕಾರಿಗಳಿಗೆ ಹೋಗಲಿ ರೈತರಿಗಾದರೂ ಬೆಲೆ ಕೊಡದ ಗುತ್ತಿಗೆದಾರನ ವರ್ತನೆ ಖಂಡಿಸಿ ಹಲಗೇರಿ ಠಾಣೆಯಲ್ಲಿ ಆ ಗುತ್ತಿಗೆದಾರನನ್ನು ಬಂಧಿಸುವಂತೆ ಪಟ್ಟು ಹಿಡಿದು ಕುಳಿತರು ಆಗ ಪರಿಸ್ಥಿತಿ ಶಾಂತಗೊಳಿಸಿದ ಹಿರಿಯ ಅಧಿಕಾರಿಗಳು ಹಾವೇರಿಯ ಕಾರ್ಯನಿರ್ವಾಹಕ ಇಂಜೀನೀಯರರಿಗೆ ಪರಿಸ್ಥಿತಿ ವಿವರಿಸಿ ಎರಡು ದಿನಗಳ ಒಳಗಾಗಿ ಗುತ್ತಿಗೆದಾರನನ್ನು ಕರೆ ತರಬೇಕೆಂದು ಬಿಗಿಹಚ್ಚಿದಾಗ ಸ್ವತಃ ಗುತ್ತಿಗೆದಾರನೆ ಎರಡು ದಿನಗಳ ಅವಕಾಶ ಕೇಳಿದ್ದರಿಂದ ರೈತರು ಬಿಗಿಪಟ್ಟು ಸಡಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ರವೀಂದ್ರಗೌಡ ಎಫ್. ಪಾಟೀಲ, ಚಂದ್ರಣ್ಣ ಬೇಡರ, ಮಂಜಪ್ಪ ಶಿವಲಿಂಗಪ್ಪನವರ, ಮೌನೇಶ ಗುತ್ತಲ, ಹಾಲೇಶ ಗುತ್ತಲ್, ಹೆಗ್ಗಪ್ಪ ನಿಂಬಾಳಿ, ಬಸವರಾಜ ಟಿ., ಕರಬಸಪ್ಪ ಕೂಲೇರ, ಗುತ್ತೆಪ್ಪ ಹನುಮರಡ್ಡಿ ಹನುಮರಡ್ಡೇರ, ಸುನೀಲ ಎರೇಶಿಮಿ, ಹಾಲೇಶ ಕೆಂಚನಾಯ್ಕರ, ರಾಜು ಮಾದಮ್ಮನವರ, ರುದ್ರಗೌಡ ಪಾಟೀಲ ಮುಂತಾದ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಪಿಡಬ್ಲೂಡಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಪಿ.ಎಸ್.ಐ. ಪರಶುರಾಮ ನಾಯಕ ರೈತರ ಮನವೊಲಿಸಿ ಘಟನೆಯನ್ನು ಶಾಂತಗೊಳಿಸಿದರು.