ವಿಜಯಪುರ 05: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದ್ದು ಫಸಲ ಬೀಮಾ ಯೋಜನೆಯಲ್ಲಿ ವಿಮಾ ಕಂತು ತುಂಬಿದರು ಕೂಡಾ ಬಿಡಿಗಾಸು ಪರಿಹಾರ ಹಣ ಬಿಡುಗಡೆ ಮಾಡಿಲ್ಲವೆಂದು ಸರ್ಕಾರದ ವಿರುದ್ಧ ಇಂಗಳೇಶ್ವರ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿ ವಿಮಾ ಕಂಪನಿ ವಿರುದ್ಧ ಧಿಕ್ಕಾರ ಕೂಗಿ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಶನಿವಾರದಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಇಂಗಳೇಶ್ವರ ಗ್ರಾಮದ ರೈತರು ಪಸಲ್ ಬೀಮಾ ಯೋಜನೆಯಡಿಯಲ್ಲಿ ಪ್ರತಿ ಎಕರೆಯಂತೆ ಸಾವಿರಾರು ರೂಪಾಯಿ ವಿಮಾ ಕಂಪನಿಗೆ ವಿಮಾ ಕಂತು ಕಟ್ಟಿದರು ಕೂಡಾ ಕಳೆದ 5 ವರ್ಷಗಳಿಂದ ನಯಾ ಪೈಸೆ ಪರಿಹಾರ ಬರದ ಕಾರಣ ಇಂಗಳೇಶ್ವರ ಗ್ರಾಮದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಿಮಾ ಕಂಪನಿ ಒಂದು ರೀತಿ ಮಟ್ಕಾ ಅಡ್ಡೆ ಆಡುವ ಅಡ್ಡೆಯಾಗಿ ಪರಿಣಮಿಸಿದೆ. ಇಂಗಳೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರೆಬಿನಾಳ ಗ್ರಾಮದ ರೈತರಿಗೆ ತೊಗರಿ ಪರಿಹಾರ ಬಂದಿದೆ. ಆದರೆ ಇಂಗಳೇಶ್ವರಕ್ಕೆ ಮಾತ್ರ ಪರಿಹಾರ ಹಣ ಬಿಡುಗಡೆಗೊಳಿಸದೆ ಇರುವುದು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಸವರುವ ಕೆಲಸ ರಾಜ್ಯ ವಿಮಾ ಕಂಪನಿ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ದೂರಿದರು. ಒಂದು ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಎಲ್ಲ ಹಳ್ಳಿಗಳಿಗೆ ಬಂದರೆ ಎಲ್ಲರಿಗೂ ಪರಿಹಾರ ಬರಬೇಕು.
ಒಂದು ವೇಳೆ ಬರದಿದ್ದರೆ ಎಲ್ಲರಿಗೂ ಬರಬಾರದು. ಆದರೆ ಇಲ್ಲಿ ವ್ಯತಿರಿಕ್ತ ಎಂಬಂತೆ ಇಂಗಳೇಶ್ವರ ಗ್ರಾಮ ಪಂಚಾಯತಿಯವರು ತೊಗರಿ ಬೆಳೆ ಈಲ್ಡ್ (ಫಸಲು) ಪರೀಶೀಲನೆ ಮಾಡುವ ಸಂದರ್ಭದಲ್ಲಿ ರಾ್ಯಂಡಮ್ ಆಗಿ ಪರೀಶೀಲನೆ ಮಾಡಿ ವರದಿ ಕಳುಹಿಸಿದ್ದಾರೆ. ಜಮೀನಿಗೆ ತೆರಳಿ ಪರೀಶೀಲನೆ ಮಾಡುವ ಸಂದರ್ಭದಲ್ಲಿ ಆ ಜಮೀನಿನ ರೈತರ ಸಮಕ್ಷಮ ಪರೀಶೀಲನೆ ಮಾಡಬೇಕೆಂದು ನಿಯಮವಿದೆ. ಆ ಜಮೀನಿನ ರೈತನಿಗೆ ಮಾಹಿತಿ ಕೊಡದೆ ತಮ್ಮ ಮನಸ್ಸಿಗೆ ಬಂದಂತೆ ಫಸಲು ಟೆಸ್ಟ್ ಮಾಡಿ ವದರಿ ಕಳುಹಿಸುತ್ತಾರೆ. ಈ ರೀತಿ ರೈತರನ್ನು ಮರೆ ಮಾಚಿ ಪರೀಶೀಲನೆ ಮಾಡಿ ವರದಿ ಕಳುಹಿಸುವುದು ವಿಮಾ ಕಂಪನಿಗೆ ಹಿನ್ನೆಲೆಯಾಗಿದೆ ಸಹಕಾರ ನೀಡಿ ವಿಮಾ ಕಂಪನಿಗೆ ಲಾಭ ಮಾಡಿ ಕೊಡುವ ಉದ್ದೇಶವಿದೆ. ಈ ರೀತಿ ಮಾಡಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಸರ್ಕಾರದ ಹಿಡಿತದಲ್ಲಿರಬೇಕಾದ ವಿಮಾ ಕಂಪನಿ ಅದರ ವ್ಯತಿರಿಕ್ತವೆಂಬಂತೆ ವಿಮಾ ಕಂಪನಿಯ ಹಿಡಿತದಲ್ಲಿ ಸರ್ಕಾರ ಇದೆ ಎಂಬಂತಾಗಿದೆ. ವಿಮಾ ಕಂಪನಿಯವರು ರೈತರಿಂದ ವಿಮೆ ಕಂತು ಕಟ್ಟಿಸಿಕೊಂಡು ಪರಿಹಾರ ಕೊಡದಿದ್ದರೆ ವಿಮಾ ಕಂಪನಿ ಏತಕ್ಕೆ ಬೇಕು ಎಂದು ಅರವಿಂದ ಕುಲಕರ್ಣಿ ಪ್ರಶ್ನಿಸಿದ್ದಾರೆ. ಶೀಘ್ರದಲ್ಲಿ ಇಂಗಳೇಶ್ವರ ಗ್ರಾಮದ ರೈತರಿಗೆ ತೊಗರಿ ಪರಿಹಾರ ಕೊಡದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕುಲಕರ್ಣಿ ಸರ್ಕಾರಕ್ಕೆ ಹಾಗೂ ವಿಮಾ ಕಂಪನಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರುದ್ರಯ್ಯ ಹಿರೇಮಠ, ನಿಂಗಯ್ಯ ಅಚನೂರ, ಈರ್ಪ ಕಡಗೋಲ, ಕಲ್ಲಪ್ಪ ಕಾಳಗಿ, ಶಿವಾನಂದ ಬಾಗೇವಾಡಿ, ಸಿದ್ದಪ್ಪ ಶೇಖಣ್ಣವರ, ರೇವಣಸಿದ್ದ ಶೇಖಣ್ಣವರ, ಸಿದ್ದಪ್ಪ ಜಕ್ಕನ್ನವರ, ದುಂಡಪ್ಪ ಹದಿಮೂರ, ಸಿದ್ಲಿಂಗಪ್ಪ ನಂದಿ, ರಾ್ಯವಯ್ಯ ಹಿರೇಮಠ, ಪರ್ಪ ಬಾಗೇವಾಡಿ, ಭೀಮಪ್ಪ ಬಾಗೇವಾಡಿ, ರುದ್ರಯ್ಯ ಹಿರೇಮಠ, ಸಿದ್ದಪ್ಪ ಪತ್ತಾರ, ಶ್ರೀಶೈಲ ಸಜ್ಜನ, ಮಲ್ಲಿಕಾರ್ಜುನ ಸಜ್ಜನ, ಸಂಗಪ್ಪ ಚೌಕಿಮಠ, ಶರಣಪ್ಪ ಉಕ್ಕಲಿ, ಕಲ್ಯಾಣಿ ಕಾಳಗಿ ಸೇರಿದಂತೆ ಇತರರು ಇದ್ದರು.