ಲೋಕದರ್ಶನ ವರದಿ
ಕುಮಟಾ: ತಾಲೂಕಿನ ಸಾಂತಗಲ್ದ ಶ್ರೀ ಶಾಂತಿಕಾ ಪರಮೇಶ್ವರಿ ದೇವರ ಸನ್ನಿಧಿಯಲ್ಲಿ 10 ದಿನಗಳ ವರೆಗೆ ವಾಸ್ತವ್ಯ ಹೋಡಿದ್ದ ರಾಜ್ಯದ ಸುಪ್ರಸಿದ್ಧ ಚಂದಾವರ ಸೀಮೆಯ ಶ್ರೀ ಹನುಮಂತ ದೇವರ ಪಲ್ಲಕ್ಕಿ ಸವಾರಿಯು ನೂರಾರು ಭಕ್ತರ ನಡುವೆ ಕಾಲ್ನಡಿಗೆಯ ಮೂಲಕ ಶುಕ್ರವಾರ ದಿವಳ್ಳಿಗೆ ಬೀಳ್ಕೊಡಲಾಯಿತು.
ಸಾಂಪ್ರದಾಯಿಕವಾಗಿ ಸವಾರಿ ಹೊರಟಿರುವ ಚಂದಾವರ ಸೀಮೆಯ ಶ್ರೀ ಹನುಮಂತ ದೇವರ ಪಲ್ಲಕ್ಕಿ ಸವಾರಿಯು ಸಾಂತಗಲ್ ಗ್ರಾಮಕ್ಕೆ ಭೇಟಿ ನೀಡಿ 10 ದಿನ ಪೂರೈಸಿದ್ದು, ಶುಕ್ರವಾರ ಸಮೀಪದ ದಿವಳ್ಳಿ ಗ್ರಾಮಕ್ಕೆ ಬೀಳ್ಕೊಡಲಾಯಿತು. ನಿರಂತರವಾಗಿ 10 ದಿನಗಳ ಕಾಲ ಸಾಂತಗಲ್ ಗ್ರಾಮದ ಅನೇಕ ಭಕ್ತರು ಪ್ರತಿನಿತ್ಯ ದಂಡಾವಳಿ ಪೂಜೆ, ಬಾಳೆಗೊನೆ ಸೇವೆ, ಹಣ್ಣು-ಕಾಯಿ ಸೇರಿದಂತೆ ವಿವಿಧ ಸೇವೆ ಸಲ್ಲಿಸಿ ಮಳೆ-ಬೆಳೆ ಚೆನ್ನಾಗಿ ಆಗಲೆಂದು ಶ್ರೀ ದೇವರಲ್ಲಿ ಸಂಕಲ್ಪ ಮಾಡಿಕೊಂಡರು. 10 ದಿನಗಳ ಕಾಲ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆಯನ್ನು ಕಲ್ಪಿಸಿದ್ದರು.
ಸವಾರಿಯ ವಿಶೇಷ: ಗ್ರಾಮ ಸುಭಿಕ್ಷೆಯಾಗಲು, ಮಳೆ, ಬೆಳೆ, ಉತ್ತಮವಾಗಲು ಮತ್ತು ಎಲ್ಲಾ ಸದ್ಭಕ್ತರು ಸುಖ ಶಾಂತಿಯಿಂದ ನೆಲೆಸಲೆಂದು ಶ್ರೀ ಹನುಮಂತ ದೇವರು ಚಂದಾವರ ಸೀಮೆಯ 108 ಗ್ರಾಮಗಳಿಗೆ ಸವಾರಿಯ ಮೂಲಕ ಮೆರವಣಿಗೆ ಹೋಗುತ್ತದೆ. ಈ ಪದ್ದತಿಯು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದ್ದು, ಗ್ರಾಮಕ್ಕೆ ಭೇಟಿ ನೀಡಿದರೆ ಒಳಿತಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಸರಿಸುಮಾರು 6-7 ತಿಂಗಳುಗಳ ಕಾಲ ಸವಾರಿಯು ವಿವಿಧ ಭಾಗಗಳಿಗೆ ಭೇಟಿ ನೀಡುತ್ತದೆ. ಒಂದು ಗ್ರಾಮದಲ್ಲಿ 10 ದಿನಗಳ ಕಾಲ ನೆಲೆಸಿ ಅಲ್ಲಿ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಸವಾರಿಯ ಮೂಲಕ ಭಕ್ತರ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಜೊತೆಗೆ ಮುಕ್ತಿ ದೊರಕುತ್ತದೆ. ಮನೆ ನಿರ್ಮಾಣಕ್ಕೆ ಜಾಗದ ಸಿದ್ಧತೆ, ಬಾವಿಯ ಜಲ ಮೂಲ, ದನಕರುಗಳಿಗೆ ಬರುವ ಕಾಯಿಲೆಗಳ ನಿವಾರಣೆ ಹೀಗೆ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವ ಅಗಾಧ ಶಕ್ತಿ ಚಂದಾವರ ಸೀಮೆಯ ಶ್ರೀ ಹನುಮಂತ ದೇವರಲ್ಲಿದೆ ಎಂಬ ಪ್ರತೀತಿ ಇದೆ.
ಸವಾರಿ ಮೆರವಣಿಗೆಯಲ್ಲಿ ಯುಕರು ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಭಕ್ತರು ಮಳೆಯನ್ನೂ ಲೆಕ್ಕಿಸದೆ ಹಾಡು, ನೃತ್ಯ, ಭಜನೆಯೊಂದಿಗೆ ಸುಮಾರು 6 ಕಿ.ಮೀ ದೂರದ ದಿವಳ್ಳಿಗೆ ಕಾಲ್ನಡಿಗೆಯ ಮೂಲಕ ಕ್ರಮಿಸಿ ಭಕ್ತಿ ಮೆರೆದರು.