ಬೆಂಗಳೂರು, ಏ 4,ಜಾಗತಿಕ ಮಹಾಮಾರಿ ಕೋವಿಡ್ 19 ವಿರುದ್ದ ಇಡೀ ಜಗತ್ತು ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ತಮ್ಮ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ನಡುವೆ ಕಂದಕ ಹುಟ್ಟು ಹಾಕಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಕೋರಾನಾಗಿಂತಲೂ ಅಪಾಯಕಾರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ, ಸುಧಾಕರ್ ಕಿಡಿ ಕಾರಿದ್ದಾರೆ. ಕೆಲವರು ನಮ್ಮಿಬ್ಬರ ನಡುವೆ ಕಂದಕ ಹುಟ್ಟು ಹಾಕಿ ಜನ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮನಸ್ಥಿತಿ ಹೊಂದಿರುವುದು ಸರಿಯಲ್ಲ, ಈ ಬೆಳವಣಿಗೆ ಕೊರೊನಾ ವೈರಸ್ ಗಿಂತಲೂ ಅಪಾಯಕಾರಿ ಎಂದಿದ್ದಾರೆ.
ಯಾವುದೇ ವ್ಯಕ್ತಿಗಳ ವೈಯುಕ್ತಿಕ ಆಶಯಕ್ಕೆ ಮೀರಿದ ಸಂಕಷ್ಟದಲ್ಲಿ ಇಂದು ಜಗತ್ತು ನಿಂತಿದೆ. ನಾನಾಗಲಿ ಮತ್ತು ನನ್ನ ಸಹೋದರನಂತಿರುವ ಶ್ರೀ ರಾಮುಲು ಆಗಲಿ, ನಾವೆಲ್ಲರೂ ಕೊರೊನ ಮಹಾ ಮಾರಿಯನ್ನು ಬಗ್ಗು ಬಡಿಯಲು ಟೊಂಕ ಕಟ್ಟಿ ನಿಂತಿದ್ದೇವೆ. ಜನಹಿತ ಕಾಯುವುದೇ ನಮ್ಮ ಧ್ಯೇಯ. ಇದರಲ್ಲಿ ಪ್ರಚಾರ ಪಡೆಯುವ ಅಗತ್ಯ ಏನಿದೆ ? ಎಂದಿದ್ದಾರೆ.
ಇನ್ನು ನಾವಿಬ್ಬರು ಜನರ ಮಧ್ಯೆ ಇದ್ದು ಜನ ಸೇವೆ ಮಾಡಿಕೊಂಡು ಜನ ಪ್ರತಿನಿಧಿಗಳಾದವರು. ನಮ್ಮ ಜನರಿಂದ ಬರುವ ಶಹಬಾಷ್ ಗಿರಿಯೇ ನಮಗೆ ಶ್ರೀ ರಕ್ಷೆ ಇದರಲ್ಲಿ ಪ್ರಚಾರದ ಮಾತೆಲ್ಲಿ ? ಎಂದು ಡಾ. ಸುಧಾಕರ್ ಪ್ರಶ್ನಿಸಿದ್ದಾರೆ.ನಾನೊಬ್ಬ ವೈದ್ಯ. ಅದಕ್ಕಿಂತ ಹೆಚ್ಚಾಗಿ ಜನಸೇವೆಗೆ ತೊಡಗಿಸಿಕೊಂಡವನು. ಈ ರೀತಿಯ ಕೊಂಕು ಮಾತುಗಳಿಗೆ ಧೃತಿಗೆಟ್ಟು ಕರ್ತವ್ಯ ವಿಮುಖನಾಗುವವನು ನಾನಲ್ಲ. ಪ್ರತಿಯೊಂದು ಟೀಕೆ ಪ್ರತಿ ಬಾರಿ ನನ್ನನ್ನು ಇನ್ನಷ್ಟು ಬಲಶಾಲಿಯಾಗಿ ಮಾಡಿದ್ದು, ನನಗೆ ಆತ್ಮ ಸ್ಥೈರ್ಯ ತುಂಬುತ್ತದೆ. “ನಿಂದಕರಿರಬೇಕಯ್ಯ “ ಅನ್ನುವ ಬಸವಣ್ಣನ ಮಾತಿನಂತೆ ಮುನ್ನುಗಿ ಇನ್ನಷ್ಟು ಜನತಾ ಜನಾರ್ಧನ ಸೇವೆ ಮಾಡಲು ಈ ಟೀಕೆಗಳು ತಮ್ಮನ್ನು ಪ್ರೇರೇಪಿಸುತ್ತವೆ ಎಂದಿದ್ದಾರೆ. ನಮ್ಮ ಒಗ್ಗಟ್ಟು ಕೊರೊನ ಮಹಾಮಾರಿಯನ್ನು ಓಡಿಸುವಲ್ಲಿ ತೋರಿಸೋಣ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಅವರವರ ದೇವರು ಒಳ್ಳೆ ಬುದ್ದಿ ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.