ನವದೆಹಲಿ, ನವೆಂಬರ್ 4: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಹತ್ವದ ರಾಜಕೀಯ ವಿಚಾರ ಕುರಿತು ಮಾತುಕತೆ ಮಾಡಿದ್ದಾರೆ. ಫಲಿತಾಂಶ ಪ್ರಕಟವಾಗಿ ಹತ್ತು ದಿನ ಕಳೆದರೂ ರಾಜ್ಯದಲ್ಲಿ ಸರ್ಕಾರ ರಚನೆಯಲ್ಲಿನ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ಸಭೆ ನಡೆಸಲಾಗಿದೆ ಎಂದೂ ಹೇಳಲಾಗಿದೆ ಬಿಜೆಪಿ 105 ಸ್ಥಾನಗಳನ್ನು ಗಳಿಸಿದ್ದು - ಹಿಂದಿನ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಬಿಜೆಪಿ ಗೆ 17 ಸ್ಥಾನಗಳು ನಷ್ಟವಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಧಾರಕಾರವಾಗಿ ಮಳೆಯಾಗಿ ಹಾನಿಗೊಳಗಾದ ರೈತರಿಗೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವು ಪಡೆಯಲು ಮುಖ್ಯಮಂತ್ರಿ ಅವರು ಷಾ ಅವರನ್ನು ಭೇಟಿ ಮಾಡಿದ್ದಾರೆ ಎಂದೂ ಅಧಿಕೃತ ಮೂಲಗಳು ಹೇಳಿವೆ. ಕಳೆದ ತಿಂಗಳ ಚುನಾವಣೆಯಲ್ಲಿ 56 ಸ್ಥಾನ ಪಡೆದ ಬಿಜೆಪಿಯ ಮಿತ್ರ ಶಿವಸೇನೆ ತನಗೆ ಸಮಪಾಲು ಅಧಿಕಾರ ಕೊಡಬೇಕು ಎಂದೂ ಒತ್ತಡ ಹೇರುತ್ತಲೇ ಇದೆ. ಈ ನಡುವೆ ಸೇನಾ ನಾಯಕ ಸಂಜಯ್ ರಾವತ್ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರ ಬೇಟಿಗೆ ಅನುಮತಿ ಕೋರಿದ್ದು, ಇದನ್ನು ಕೇವಲ ಸೌಜನ್ಯ ಭೇಟಿ ಎಂದೂ ಹೇಳಲಾಗುತ್ತಿದೆ.