ಳಗಾವಿ, ಮಾ 31 ,ಜಿಲ್ಲೆಯಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರ ಪಟ್ಟಿ ಮಾಡಿ ಸ್ವಯಂಸೇವಾ ಸಂಘ-ಸಂಸ್ಥೆಗಳ ನೆರವಿನಿಂದ ಅವರಿಗೆ ಊಟ. ಉಪಹಾರದ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ, ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೂಚಿಸಿದ್ದಾರೆ. ಇಟ್ಟಿಗೆ ಭಟ್ಟಿ ಕಾರ್ಮಿಕರು, ಸವಿತಾ ಸಮಾಜ, ಕಟ್ಟಡ, ವಲಸೆ ಕಾರ್ಮಿಕರು, ನಿರ್ಗತಿಕರನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು ಎಂದಿದ್ದಾರೆ. ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ಸಾಧ್ಯವಾದರೆ ಮನೆಮನೆಗೆ ದಿನಸಿ ಹಾಗೂ ತರಕಾರಿ ತಲುಪಿಸಲು ಕ್ರಮ ಕೈಗೊಳ್ಳಬೇಕು. ಆಹಾರದ ಪಾರ್ಸೆಲ್ ಒದಗಿಸಲು ಹೋಟೆಲ್ ನವರಿಗೆ ಅವಕಾಶ ಕಲ್ಪಿಸಬೇಕು ಎಂದರು. ಸರಕು ಸಾಗಾಣಿಕೆಗೆ ಸಂಬಂಧಿಸಿದಂತೆ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆ ಕರೆದು ಸರಕು ಸಾಗಾಣಿಕೆಗೆ ಮುಕ್ತ ಅವಕಾಶ ನೀಡಿರುವ ಬಗ್ಗೆ ಮನವರಿಕೆ ಮಾಟ್ಟು, ಆಸಕ್ತರಿಗೆ ಪಾಸ್ ಒದಗಿಸಬೇಕು ಎಂದು ಸಚಿವ ಶೆಟ್ಟರ್ ತಿಳಿಸಿದರು.ಬೆಳಿಗ್ಗೆ ಹಾಗೂ ಸಂಜೆ ಒಂದೆರಡು ಗಂಟೆಗಳ ಕಾಲ ಖಾಸಗಿ ಕ್ಲಿನಿಕ್ ಆರಂಭಿಸಲು ಕ್ರಮ ವಹಿಸುವಂತೆ ವೈದ್ಯಕೀಯ ಸಮುದಾಯಕ್ಕೆ ಮನವಿ ಮಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಉತ್ತಮ ನಿರ್ವಹಣೆ ಮಾಡಲಾಗಿದೆ. ಆದರೂ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಉದ್ಭವಿಸದಂತೆ ಜಿಲ್ಲಾಡಳಿತ ಹಾಗೂ ಉಳಿದ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಸ್ಯಾನಿಟೈಸರ್, ಮಾಸ್ಕ್, ಕೈಗವಸುಗಳು ಸಮರ್ಪಕವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ವಲಸೆ ಕಾರ್ಮಿಕರ ಸಂಚಾರ ತಡೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸಾಮಗ್ರಿಗಳ ಸಾಗಾಣಿಕೆಗೆ ತೊಂದರೆಯಿಲ್ಲ. ಸವಿತಾ ಸಮಾಜದ ಜನರ ಸಮಸ್ಯೆಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದರು.ಪಾಲಿಕೆ ಆಯುಕ್ತರಾದ ಜಗದೀಶ್ ಮಾತನಾಡಿ, ಪೌರ ಕಾರ್ಮಿಕರಿಗೆ ಮಾಸ್ಕ್, ಸೋಪ್ ವಿತರಿಸಲಾಗಿದ್ದು, ಇಂದಿನಿಂದ ಉಪಾಹಾರ ಕೂಡ ಪೂರೈಸಲಾಗುತ್ತಿದೆ ಎಂದರು.ಇದುವರೆಗೆ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ೩೮೩ ಜನರ ನಿಗಾ ವಹಿಸಲಾಗಿದೆ. ೨೧೭ ಜನರು ೧೪ ದಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದು, ೮ ಜನರಿಗೆ ಬಿಮ್ಸ್ ನಲ್ಲಿ ಐಸೋಲೇಷನ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗಿದೆ. ಒಟ್ಟಾರೆ ೩೨ ಜನರು ೨೮ ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ ಎಂದು ವಿವರಿಸಿದರು.ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ ಮಾತನಾಡಿ, ಬೆಂಗಳೂರು ಹಾಗೂ ನೆರೆಯ ರಾಜ್ಯಗಳಿಂದ ರಾಜಸ್ತಾನ ಹಾಗೂ ಮಧ್ಯಪ್ರದೇಶದಿಂದ ಸುಮಾರು ಒಂದು ಸಾವಿರ ಕಾರ್ಮಿಕರು ಆಗಮಿಸಿದ್ದು, ಆರೋಗ್ಯ ತಪಾಸಣೆ ನಡೆಸಿ ಊಟೋಪಹಾರ ವ್ಯವಸ್ಥೆ ಮಾಡಲಾಗಿದೆ. ಬೈಲಹೊಂಗಲ, ಹುಕ್ಕೇರಿ ಮತ್ತು ಕಿತ್ತೂರು ತಾಲ್ಲೂಕುಗಳಲ್ಲಿ ಸಾಮೂಹಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಆಗಮಿಸುತ್ತಿರುವುದರಿಂದ ಬೆಂಗಳೂರು ಸೇರಿದಂತೆ ಆಯಾ ಜಿಲ್ಲೆಗಳಲ್ಲಿ ಅವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡುವ ಮೂಲಕ ಕಾರ್ಮಿಕರ ಸಂಚಾರ ತಡೆಗಟ್ಟಬಹುದು ಎಂದರು.ಗೋವಾ ರಾಜ್ಯಕ್ಕೆ ಹೋಗುವ ಹಾಲು, ತರಕಾರಿ ಮತ್ತಿತರ ಸಾಮಗ್ರಿಗಳ ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಗೋವಾ ಮುಖ್ಯಮಂತ್ರಿ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ವಿವರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ನೆರೆ ರಾಜ್ಯಗಳ ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಗಡಿಯಲ್ಲಿ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.\\ಶಾಸಕರಾದ ಅನಿಲ್ ಬೆನಕೆ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.