ಕೋವಿಡ್-19: ಫಾರ್ಮುಲಾ 1 ಆಸ್ಟ್ರೇಲಿಯನ್ ಗ್ರ್ಯಾನ್ ಪ್ರಿ ರದ್ದು


ಸಿಡ್ನಿ, ಮಾ13, ಮೆಕ್ ಲಾರೆನ್ ರೇಸಿಂಗ್ ತಂಡದ ಸದಸ್ಯರೊಬ್ಬರಿಗೆ ಕೋವಿಡ್-19 ಇರುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಇಡೀ ತಂಡ ಟೂರ್ನಿಯಿಂದ ಹಿಂದೆ ಸರಿದಿದೆ.  ಹೀಗಾಗಿ ಶುಕ್ರವಾರ ಆರಂಭವಾಗಬೇಕಿದ್ದ ಆ ಸ್ಟ್ರೇಲಿಯನ್ ಫಾರ್ಮುಲಾ 1 ಗ್ರ್ಯಾನ್ ಪ್ರಿ ರೇಸನ್ನು ಶುಕ್ರವಾರ ಅಧಿಕೃತವಾಗಿ ರದ್ದುಪಡಿಸಲಾಗಿದೆ.ಆನ್ ಲೈನ್ ನಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆಸ್ಟ್ರೇಲಿಯನ್ ಗ್ರ್ಯಾನ್ ಪ್ರಿ ಕಾರ್ಪೊರೇಷನ್ (ಎಜಿಪಿಸಿ), ಮೆಲ್ಬೋರ್ನ್ ಅಲ್ಬರ್ಟ್ ಪಾರ್ಕ್ ನಲ್ಲಿ ನಡೆಯಬೇಕಿದ್ದ ಫಾರ್ಮುಲಾ 1 ರೇಸ್ ನ ಎಲ್ಲ ಚಟುವಟಿಕೆಗಳನ್ನು ರದ್ದುಪಡಿಸಿರುವ ಕುರಿತು ವರದಿಯಾಗಿದೆ.ವಿಕ್ಟೋರಿಯನ್ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಆರೋಗ್ಯ ಇಲಾಖೆಯ ಮುಖ್ಯ ಆರೋಗ್ಯ ಅಧಿಕಾರಿಯ ಸಲಹೆ ಮೇರೆಗೆ ಆಸ್ಟ್ರೇಲಿಯನ್ ಗ್ರ್ಯಾನ್ ಪ್ರಿ ಕಾರ್ಪೊರೇಷನ್ ಆಸ್ಟ್ರೇಲಿಯನ್ ಗ್ರ್ಯಾನ್ ಪ್ರಿ ರೇಸನ್ನು ತಕ್ಷಣವೇ ರದ್ದು ಪಡಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಸೋಂಕು ಇರುವ ಕುರಿತಂತೆ ಇತರ ತಂಡಗಳ ಏಳು ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅವರಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಆದರೆ ಯಾವುದೇ ರೇಸಿಂಗ್ ತಂಡದ ಸದಸ್ಯರಲ್ಲದ ಒಬ್ಬರಲ್ಲಿ ಸೋಂಕು ಇರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಎಲ್ಲರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಜಿಪಿಸಿ ಹೇಳಿದೆ.ಭಾನುವಾರ ರೇಸ್ ನಿಗದಿಯಾಗಿತ್ತು.   ಶುಕ್ರವಾರ ಮತ್ತು ಶನಿವಾರ ಟೂರ್ನಿಯ ಅರ್ಹತಾ ಮತ್ತು ಅಭ್ಯಾಸ ಸುತ್ತಗಳು ನಡೆಯಬೇಕಿತ್ತು.