ಮೆಲ್ಬೋರ್ನ್, ಫೆ 20, ಬಲ ಪಾದದ ಒತ್ತಡದ ಗಾಯಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾ ವೇಗದ ಬೌಲರ್ ಟೇಲಾ ವ್ಲೇಮಿಂಕ್ ಅವರು ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ಆಫ್ ಸ್ಪಿನ್ನರ್ ಮೊಲ್ಲಿ ಸ್ಟ್ರಾನೊ ಅವರನ್ನು ಆಯ್ಕೆ ಮಾಡಲಾಗಿದೆ. "ಟೂರ್ನಿಯ ಸನಿಹದಲ್ಲಿ ವ್ಲೇಮಿಂಕ್ ಅವರನ್ನು ಕಳೆದುಕೊಂಡಿದ್ದರಿಂದ ಇಡೀ ತಂಡವು ನಿರಾಶೆಗೊಂಡಿದೆ. ಆದರೆ, ಸ್ಟ್ರಾನೊ ಗುಂಪಿಗೆ ಬಲವಾದ ಕೊಡುಗೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ," ಎಂದು ಆಸ್ಟ್ರೇಲಿಯಾ ಮುಖ್ಯ ತರಬೇತುದಾರ ಮ್ಯಾಥ್ಯೂ ಮೋಟ್ ತಿಳಿಸಿದ್ದಾರೆ.
"ಟೇಲಾ ತಡವಾಗಿ ಅದ್ಭುತ ಲಯಕ್ಕೆ ಮರಳಿದ್ದರು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪ್ರಮುಖ ವೇಗದ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ," ಎಂದು ಮೋಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕಳೆದ ತ್ರಿಕೋನ ಟಿ-20 ಸರಣಿಯಲ್ಲಿ ಟೇಲಾ ಅತಿ ಹೆಚ್ಚು ವಿಕೆಟ್ ಪಡೆದ ಜಂಟಿಯಾಗಿ ಅಗ್ರ ಸ್ಥಾನ ಪಡೆದಿದ್ದರು. ಇವರು 9.00 ಸರಾಸರಿ ಹಾಗೂ 5.25 ಎಕಾನಮಿಯಲ್ಲಿ ಮೂರು ಪಂದ್ಯಗಳಿಂದ ಏಳು ವಿಕೆಟ್ ಕಬಳಿಸಿದ್ದರು.2017 ರಲ್ಲಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಸ್ಟ್ರಾನೊ ಐದು ಟಿ-20 ಪಂದ್ಯಗಳನ್ನು ಆಡಿದ್ದಾರೆ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಅತ್ಯಂತ ಬಲಿಷ್ಠ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ. ಮಹಿಳಾ ಬಿಗ್ಬ್ಯಾಷ್ ಲೀಗ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿದ್ದಾರೆ.ಆಸ್ಟ್ರೇಲಿಯಾ ತಂಡ ನಾಳೆ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಸಿಡ್ನಿಯಲ್ಲಿ ಭಾರತವನ್ನು ಎದುರಿಸಲಿದೆ.