ಬೆಂಗಳೂರು, ಫೆ.14 , ಫರ್ನೀಚರ್ ತುಂಬಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಗೋದಾಮು ಏಕಾಏಕೀ ಹೊತ್ತಿ ಉರಿದಿರುವ ಘಟನೆ ಇಲ್ಲಿನ ಹೆಗಡೆ ನಗರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.ದಾಮೋದರ್ ಎಂಬುವವರಿಗೆ ಸೇರಿದ ಶ್ರೀರಂಗ ಫರ್ನೀಚರ್ಸ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, 12 ಮಂದಿ ಕೆಲಸಗಾರರು ಗೋದಾಮಿನಲ್ಲಿ ಮಲಗಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.ಕಾರ್ಮಿಕ ಮುಹಮ್ಮದ್ ರಫೀಕ್ ಸುದ್ದಿಗಾರರೊಂದಿಗೆ ಮಾತನಾಡಿ,"ರಾತ್ರಿ ಗೋದಾಮಿನ ಒಳಗೆ 12 ಜನ ಮಲಗಿದ್ದೆವು. ತಡ ರಾತ್ರಿ 2 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಪಕ್ಕದಲ್ಲಿದ್ದ ಕಸಕ್ಕೆ ಮೊದಲು ಬೆಂಕಿ ತಗುಲಿದ್ದು, ಬಳಿಕ ಗೋದಾಮಿನ ಒಳಗೆ ಆವರಿಸಿದೆ. ತಕ್ಷಣವೇ ನಾನು ಎಲ್ಲರನ್ನೂ ಹೊರಗಡೆ ಕರೆದುಕೊಂಡು ಬಂದೆ. ಅಷ್ಟರಲ್ಲೇ ದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿತ್ತು. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ ಎಂದರು.ಶ್ರೀರಂಗ ಫರ್ನೀಚರ್ ಮ್ಯಾನೇಜರ್ ಕಬೀರ್ ಈ ಕುರಿತು ಮಾತನಾಡಿ, "ಗೋದಾಮಿಗೆ ಬೆಂಕಿ ಬಿದ್ದಿದೆ ಎಂದು ಯುವಕರು ಕರೆ ಮಾಡಿ ಹೇಳಿದರು. ತಕ್ಷಣವೇ ಸ್ಥಳಕ್ಕೆ ಬಂದೆ. ಯಾರೋ ಕಸಕ್ಕೆ ಬೆಂಕಿ ಹಾಕಿದ್ದರಿಂದಲೇ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ ಎಂದ ಅವರು, ಗೋದಾಮಿನ ಖಾಲಿ ಜಾಗದಲ್ಲಿ ಚಿಕ್ಕ ಹುಡುಗರು ಬಂದು ಗಾಂಜಾ, ಸಿಗರೇಟ್ ಸೇದುತ್ತಾರೆ. ಇದರಿಂದಲೇ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದರು.ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಸುಮಾರು 2 ಲಕ್ಷ ಮೌಲ್ಯದ ಫರ್ನಿಚರ್ ಸುಟ್ಟು ಹೋಗಿವೆ ಎಂದು ಅವರು ಹೇಳಿದರು.ಘಟನೆಗೆ ಸಂಬಂಧಿಸಿದಂತೆ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.