ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಗೋವಿಂದ ಕಾರಜೋಳ

ಬೆಂಗಳೂರು, ಫೆ.15  ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮಾರ್ಚ್ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಯಾವುದೇ ಅನುದಾನ ಲ್ಯಾಪ್ಸ್ ಆಗಬಾರದು. ನ್ಯೂನತೆಗಳಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರನ್ನಾಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿಂದು ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜನವರಿ ಅಂತ್ಯಕ್ಕೆ 6594 ಕೋಟಿ ರೂ.ಬಿಡುಗಡೆ ಮಾಡಿದ್ದು, ಅದರಲ್ಲಿ 4675 ಕೋಟಿ. ರೂ ವೆಚ್ಚ ಮಾಡಲಾಗಿದೆ. ಪ್ರಗತಿಯು ಡಿಎಸ್ ಎಸ್ ತಂತ್ರಾಂಶಗಳನ್ವಯ ಕೆಡಿಪಿ ಸಭೆಯ ಆರ್ಥಿಕ ಪ್ರಗತಿಯ ವಿಷಯ ಸೂಚಿಯಲ್ಲಿ ಎ (ಶೇ.,93%) ಪ್ರವರ್ಗದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಘಟಕಕ್ಕೆ   341  ಕೋಟಿ ಬಿಡುಗಡೆ ಮಾಡಿದ್ದು, 317  ಕೋಟಿ ವೆಚ್ಚ ಮಾಡಲಾಗಿದೆ. 

ಕೆಆರ್ ಡಿಸಿಎಲ್ ಗೆ 300 ಕೋಟಿ ಬಿಡುಗಡೆ ಮಾಡಲಾಗಿದ್ದು, ಶೇ.100 ರಷ್ಟು ವೆಚ್ಚ ಮಾಡಲಾಗಿದೆ.  ರಾಜ್ಯ ಹೆದ್ದಾರಿ ಘಟಕದಲ್ಲಿ 333 ಕೋಟಿ ರೂ ಬಿಡುಗಡೆಯಾಗಿದ್ದು, 333 ಕೋಟಿ ಮಾಡಲಾಗಿದೆ ಎಂದರು. ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆ, ವಿಶೇಷ ಅಭಿವೃದ್ದಿ ಯೋಜನೆಯಡಿ ಯಾವುದೇ ಅನುದಾನ ಉಳಿಕೆಯಾದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು. ಮುಖ್ಯ ಇಂಜಿನಿಯರಿಂಗ್ ಗಳು ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ  ನಿಯಮಿತವಾಗಿ ಸಭೆ ನಡೆಸಿ, ಸಮಗ್ರವಾಗಿ ಚರ್ಚಿಸಬೇಕು. ಮುಖ್ಯ ಇಂಜಿನಿಯರ್ ಗಳು  ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿ ಪ್ರಗತಿ ಪರಿಶೀಲನೆ ನಡೆಸಬೇಕು. ಯಾವುದೇ ಲೋಪವಾದರೆ ಕಾರ್ಯನಿರ್ವಹಣೆ ವರದಿಯಲ್ಲಿ  ನಮೂದಿಸಲಾಗುವುದು ಎಂದು ಸೂಚಿಸಿದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಬಿ. ಗುರುಪ್ರಸಾದ್, ಮುಖ್ಯ ಇಂಜಿನಿಯರ್ ಗಳು, ಅಧೀಕ್ಷಕ ಇಂಜಿನಿಯರ್ಗಳು ಹಾಜರಿದ್ದರು.