ಲಂಡನ್ 06: ಲಂಡನ್‌ಗೆ ತೆರಳಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಕುಳಿತಿದ್ದ ಕಾರಿನ ಮೇಲೆ ಖಾಲಿಸ್ತಾನಿ ಪರ ಬೆಂಬಲಿಗನೊಬ್ಬ ದಾಳಿ ನಡೆಸಲು ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಕುರಿತಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ವಿಡಿಯೊದಲ್ಲಿ, ಜೈಶಂಕರ್ ಅವರು ಕಾರನ್ನು ಹತ್ತಿ ಕುಳಿತ ತಕ್ಷಣ ಬದಿಯಲ್ಲಿದ್ದ ವ್ಯಕ್ತಿಯೊಬ್ಬ ಭಾರತದ ಧ್ವಜ ಹಿಡಿದು ಕಾರಿನತ್ತ ನುಗ್ಗುತ್ತಾನೆ, ತಕ್ಷಣ ಅಲ್ಲಿದ್ದ ಪೊಲೀಸರು ಆತನನ್ನು ತಡೆಯುತ್ತಾರೆ. ಸುತ್ತಲೂ ನೂರಾರು ಮಂದಿ ಖಲಿಸ್ತಾನಿಗಳು ಧ್ವಜ ಹಿಡಿದು ಘೋಷಣೆ ಕೂಗುತ್ತಿರುವ ದೃಶ್ಯಗಳಿವೆ.
ಭಾರತ ಮತ್ತು ಲಂಡನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ), ಕಾರ್ಯತಂತ್ರದ ಸಮನ್ವಯ ಮತ್ತು ರಾಜಕೀಯ ಸಹಕಾರದ ಕುರಿತು ಮಾತುಕತೆ ನಡೆಸಲು ಜೈಶಂಕರ್ ಲಂಡನ್‌ಗೆ ತೆರಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ, ಯುಕೆ, ಯುಎಸ್ ಮತ್ತು ಕೆನಡಾದಲ್ಲಿರುವ ಖಲಿಸ್ತಾನ್ ಉಗ್ರಗಾಮಿಗಳಿಂದ ಭಾರತೀಯ ರಾಜತಾಂತ್ರಿಕರು ಮತ್ತು ವಲಸಿಗರಿಗೆ ಬೆದರಿಕೆ ಹೆಚ್ಚಾಗಿದೆ. ಈ ವಿವಾದವು ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಲು ಕಾರಣವಾಗಿದ್ದರೂ, ಅಮೆರಿಕ ಮತ್ತು ಯುಕೆಯಲ್ಲಿ ಹೆಚ್ಚಿದ ಚಟುವಟಿಕೆಗಳ ಬಗ್ಗೆ ಭಾರತ ತನ್ನ ಕಳವಳ ವ್ಯಕ್ತಪಡಿಸುತ್ತಲೇ ಇದೆ.
ಈ ವಿಡಿಯೊ ಲಂಡನ್ ಪೊಲೀಸರ ಭದ್ರತಾ ಕ್ರಮದ ಕುರಿತು ಪ್ರಶ್ನೆ ಹುಟ್ಟುಹಾಕಿದೆ. ಅಲ್ಲದೆ ಈ ಕುರಿತು ಭಾರತ ಅಥವಾ ಲಂಡನ್ ಸರ್ಕಾರಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.