ಶ್ರೀನಗರದಲ್ಲಿ ಸ್ಫೋಟ: ಓರ್ವ ಸೈನಿಕನಿಗೆ ಗಾಯ

ಶ್ರೀನಗರ, ಫೆ 6 ,ಜಮ್ಮು-ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದ ಹೊರವಲಯದಲ್ಲಿನ ಪೊಲೀಸ್ ಠಾಣೆ ಬಳಿ ನಿಗೂಢವಾಗಿ ಸಂಭವಿಸಿದ ಸ್ಫೋಟದಲ್ಲಿ ಭದ್ರತಾ ಪಡೆಯ ಯೋಧ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.‘ನಗರದ ಹೊರವಲಯದಲ್ಲಿ ಲಾಲ್ ಬಜಾರ್ ಪೊಲೀಸ್ ಠಾಣೆ ಬಳಿ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಭದ್ರತಾ ಪಡೆ ಯೋಧ ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.’ ಎಂದು ಮೂಲಗಳು ತಿಳಿಸಿವೆ.  ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆಯಾದರೂ  ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸ್, ಸಿಆರ್‌ಪಿಎಫ್ ಮತ್ತು ಇತರ ಭದ್ರತಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ  ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಈ ಮಧ್ಯೆ, ಈ ಮಧ್ಯೆ ಶ್ರೀನಗರದಲ್ಲಿ ಭಾನುವಾರ ಗ್ರೆನೇಡ್ ದಾಳಿ ನಡೆಸಿದ್ದ ಉಗ್ರನೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಗ್ರೆನೇಡ್ ದಾಳಿಯಿಂದ ಇಬ್ಬರು ಸಿಆರ್ ಪಿಎಫ್ ಯೋಧರು ಮತ್ತು ನಾಲ್ವರು ನಾಗರಿಕರು ಗಾಯಗೊಂಡಿದ್ದರು. ಗುಪ್ತಚರ ಮಾಹಿತಿ ಆಧರಿಸಿ ನಗರದ ರಾಜ್ ಬಾಗ್ ನಲ್ಲಿ ಉಗ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.