ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಆಸ್ತಿ ತೆರಿಗೆ ರಿಯಾಯಿತಿ ಅವಧಿ ಮೇ 31 ರವರೆಗೆ ವಿಸ್ತರಣೆ

ಬೆಂಗಳೂರು, ಏ 8,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಶೇ 5 ರಷ್ಟು ರಿಯಾಯಿತಿ ಅವಧಿಯನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ. ಕೊರೊನಾ ಸೋಂಕು ನಿಯಂತ್ರಣ ಸಂಬಂಧ ದೇಶಾದ್ಯಂತ ಏಪ್ರಿಲ್ 14 ರವರೆಗೆ ಲಾಕ್ ಡೌನ್  ಜಾರಿಯಲ್ಲಿರುವ ಕಾರಣ ಸಾರ್ವಜನಿಕರು ಕಚೇರಿ, ಬ್ಯಾಂಕ್ ಗೆ ತೆರಳಿ ಆಸ್ತಿ ತೆರಿಗೆ ಪಾವತಿಸುವುದು ಕಷ್ಟಕರವಾಗಿದ್ದು ರಿಯಾಯಿತಿಯ ಅವಕಾಶ ಪಡೆಯಲು ಇನ್ನು ಉಳಿದ ಹದಿನಾರು ದಿನಗಳಲ್ಲಿ ದಟ್ಟಣೆ ಹೆಚ್ಚುವುದರಿಂದ ಸಮಸ್ಯೆಯಾಗಲಿದ್ದು ರಿಯಾಯಿತಿ ಕಾಲಾವಧಿಯಲ್ಲಿ ಮೇ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಆರ್ಥಿಕ ವರ್ಷದ ಆರಂಭದಲ್ಲೇ ಸಾರ್ವಜನಿಕರು ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಭರಿಸಬೇಕಿದೆ. ಏಪ್ರಿಲ್ 30 ರೊಳಗೆ ತೆರಿಗೆ ಪಾವತಿಸುವವರಿಗೆ ಶೇ 5 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿ ಮೇಲಿನ ರಿಯಾಯಿತಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.