ಹಗಲು ರಾತ್ರಿ ಟೆಸ್ಟ್ ಆಡಲು ಉತ್ಸುಕನಾಗಿದ್ದೇನೆ: ರೋಹಿತ್

 ನವದೆಹಲಿ, ಅ.31: ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೊದಲ ಹಗಲು ರಾತ್ರಿ ಟೆಸ್ಟ್ ಬಗ್ಗೆ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕಾತುರವಾಗಿದ್ದು, ಈ ಪಂದ್ಯದಲ್ಲೂ ಟೀಮ್ ಇಂಡಿಯಾ 60 ಅಂಕಗಳನ್ನು ಗಳಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

 ನವೆಂಬರ್ 22 ರಿಂದ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಬಗ್ಗೆ ಕೇಳಿದ ಪ್ರಶ್ನೆಗೆ ರೋಹಿತ್ ಗುರುವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ನಾವು ಹಗಲು ರಾತ್ರಿ ಟೆಸ್ಟ್ ಆಡುವುದು ಇದೇ ಮೊದಲು. ತಂಡದ ಉಳಿದ ಆಟಗಾರರು ಈ ಬಗ್ಗೆ ತಿಳಿದಿಲ್ಲ, ಆದರೆ ಈ ಪಂದ್ಯದ ಬಗ್ಗೆ ನಾನೇ ತುಂಬಾ ಉತ್ಸುಕನಾಗಿದ್ದೇನೆ. ದುಲೀಪ್ ಟ್ರೋಫಿಯಲ್ಲಿ ನಾನು ಗುಲಾಬಿ ಚೆಂಡಿನೊಂದಿಗೆ ಪಂದ್ಯವನ್ನು ಆಡಿದ್ದೇನೆ ಮತ್ತು ನನ್ನ ಅನುಭವವು ತುಂಬಾ ಚೆನ್ನಾಗಿತ್ತು" ಎಂದಿದ್ದಾರೆ.

 ಭರ್ಜರಿ ಫಾರ್ಮ್‌ನಲ್ಲಿರುವ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಮೂರು ಶತಕಗಳನ್ನು ಬಾರಿಸಿ ಅಬ್ಬರಿಸಿದ್ದರು. “ನಾವು ಸ್ವಲ್ಪ ಹಗಲು-ರಾತ್ರಿ ಟೆಸ್ಟ್ ಗಾಗಿ ಕಾಯುತ್ತಿದ್ದೇವೆ. ನಮ್ಮ ಕಾಯುವಿಕೆ ಈಗ ಮುಗಿಯಲಿದೆ. ಈ ಪಂದ್ಯದಲ್ಲಿ ನಾವು ಸಹ ಉತ್ತಮ ಪ್ರದರ್ಶನ ನೀಡುತ್ತೇವೆ ಮತ್ತು ಪೂರ್ಣ 60 ಅಂಕಗಳನ್ನು ಗಳಿಸುತ್ತೇವೆ ಎಂದು ಆಶಿಸುತ್ತೇವೆ” ಎಂದು ಮುಂಬೈಕರ್ ತಿಳಿಸಿದ್ದಾರೆ.

 ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ಈಡನ್ ಗಾರ್ಡನ್‌ನಲ್ಲಿ ಹಗಲು ರಾತ್ರಿ ಟೆಸ್ಟ್ ಆಡಲು ಪ್ರಸ್ತಾಪಿಸಿತ್ತು, ಇದಕ್ಕೆ ಬಿಸಿಬಿ ಒಪ್ಪಿದೆ. ಉಭಯ ತಂಡಗಳಿಗೆ ಇದು ಮೊದಲ ಹಗಲು ರಾತ್ರೊ ಟೆಸ್ಟ್ ಆಗಿರುತ್ತದೆ.