ಬೆಳಗಾವಿ, ಏ 27, ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿರುವ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿ 1.10 ಕೋಟಿ ಮೌಲ್ಯದ ಮದ್ಯ ವಶಪಡಸಿಕೊಳ್ಳಲಾಗಿದೆ.ಕಳ್ಳಬಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು ಅಬಕಾರಿ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಹಗಲು ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ,ವಾಹನಗಳನ್ನು ತಪಾಸಣೆ ನಡೆಸಿ ಅಕ್ರಮ ಮದ್ಯ ಪತ್ತೆ ಮಾಡಿದೆ. ಒಟ್ಟಾರೆಯಾಗಿ ಬೆಳಗಾವಿ ಜಿಲ್ಲಾದ್ಯಂತ ಈ ತಂಡಗಳು ಇಲ್ಲಿಯವರೆಗೆ ಒಟ್ಟು 794 ದಾಳಿಗಳನ್ನು ನಡೆಸಿ, 108 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. 64 ಆರೋಪಿಗಳನ್ನು ಬಂಧಿಸಿ 4662.695 ಲೀಟರ್ ಮದ್ಯ, 95.900 ಲೀಟರ್ ಗೋವಾ ಮದ್ಯ, 10.170 ಲೀಟರ್ ಮಹಾರಾಷ್ಟ್ರ ಮದ್ಯ, 1207.200 ಲೀಟರ್ ಬೀಯರ್, 53 ಲೀಟರ್ ಸೇಂಧಿ, 170 ಲೀಟರ್ ಬೆಲ್ಲದ ಕೊಳೆ, 79.610 ಲೀಟರ್ ಸಂತ್ರಾ, 93 ಲೀಟರ್ ಕಾಜು, 1714,400 ಲೀಟರ್ ಕಳ್ಳಭಟ್ಟಿ ಸಾರಾಯಿ, 50ಕೆ.ಜಿ.ಬೆಲ್ಲ ಹಾಗೂ 7.400 ಲೀಟರ್ ವೈನ್ ವಶಪಡಿಸಿಕೊಂಡಿವೆ. 79 ದ್ವಿಚಕ್ರ ವಾಹನ, 2 ಆಟೋ ರಿಕ್ಷಾ, 2 ಕಾರ್, 4 ಗೂಡ್ಸ್ ವಾಹನ, 1 ಮಹೇಂದ್ರ ಪಿಕಪ್ ಮತ್ತು ಮದ್ಯ, ಬೀಯರ್ ಹಾಗೂ ಇತರೆ ಒಟ್ಟಾರೆ ಅಂದಾಜು ಮೌಲ್ಯ ರೂ. 58 ಲಕ್ಷಗಳು ಆಗುತ್ತದೆ. ಹೀಗೆ ಒಟ್ಟು 1.10 ಕೋಟಿ ರೂ ಮೌಲ್ಯದ ಮದ್ಯ ಮತ್ತು ಅಕ್ರಮ ಸಾಗಾಣಿಕೆಗೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.