ಮಿತಿಮೀರಿದ ತ್ಯಾಜ್ಯ ಸಮಸ್ಯೆ: ನಿರ್ವಹಣೆ ಮಾಡದ ಅಧಿಕಾರಿಗಳು

Excessive waste problem: Authorities not managing it

ಲೋಕದರ್ಶನ ವರದಿ 

ಮಿತಿಮೀರಿದ ತ್ಯಾಜ್ಯ ಸಮಸ್ಯೆ: ನಿರ್ವಹಣೆ ಮಾಡದ ಅಧಿಕಾರಿಗಳು 

ಸೊಳ್ಳೆಗಳ ಹಾವಳಿ* ಸ್ವಚ್ಛತೆ ಎಂಬುದು ಮರೀಚಿಕೆ* ಮೂಗು ಮುಚ್ಚಿಕೊಂಡು ಜನರ ಓಡಾಟ* ಪುರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಹಿಡಿಶಾಪ : 

ಸಿ ಮಹಾದೇವ ಅರಕೇರಿ 

ಹಾರೂಗೇರಿ : ಸ್ವಚ್ಛ ಭಾರತ ಯೋಜನೆಗೆ ವ್ಯತಿರಿಕ್ತ ವಿದ್ಯಮಾನ ಹಾರೂಗೇರಿ ಪಟ್ಟಣದ ಎಲ್ಲೆಡೆ ಗೋಚರಿಸುತ್ತಿದೆ. ಟೇಕಾಫ್ ಆಗದ ಸ್ವಚ್ಛ ಭಾರತ್ ಮಿಷನ್‌. ಇಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿ, ಎಲ್ಲೆಂದರಲ್ಲಿ ಸೊಳ್ಳೆಗಳ ಹಾವಳಿ ಮಿತಿ ಮೀರಿದೆ. ಖಾಲಿ ನಿವೇಶನಗಳಲ್ಲಿ ಬಿದ್ದ ತ್ಯಾಜ್ಯ ವಿಲೇವಾರಿ ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.  

   ಜತ್‌-ಜಾಂಬೋಟಿ ರಾಜ್ಯಹೆದ್ದಾರಿ, ಬಸ್ ನಿಲ್ದಾಣ, ಖಾಲಿ ನಿವೇಶನ, ಹಳ್ಳ, ಸೇತುವೆ, ಕಾಲುವೆ, ಚರಂಡಿ ಸುತ್ತ ಕೊಳೆತ ತ್ಯಾಜ್ಯ ಹಾಗೂ ಕಸದ ರಾಶಿ ತುಂಬಿಕೊಂಡಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ಎಲ್ಲೆಡೆ ತ್ಯಾಜ್ಯದಿಂದಾಗಿ ಪಟ್ಟಣದ ಅಂದಗೆಟ್ಟಿದೆ. ಕಸ ವಿಲೇವಾರಿಗೂ ಅಧಿಕಾರಿಗಳು ಮನಸ್ಸು ಮಾಡದಿರುವುದು ದುರಂತ. 

   ಹಾರೂಗೇರಿಯಲ್ಲಿ ಖಾಸಗಿ ಮಾಲೀಕತ್ವದ ಖಾಲಿ ಜಾಗದಲ್ಲಿ ಕಸ, ತ್ಯಾಜ್ಯದ ಸಮಸ್ಯೆ ಹೆಚ್ಚಾಗಿದೆ. ಪಟ್ಟಣದ ಜನವಸತಿ ಪ್ರದೇಶಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಖಾಲಿ ಜಾಗಗಳಿದ್ದು, ಆ ಪ್ರದೇಶವೆಲ್ಲಾ ಈಗ ಕಸ, ಪ್ಲಾಸ್ಟಿಕ್ ರಾಶಿಯಿಂದಾಗಿ ತಿಪ್ಪೆಗಳಾಗಿ ಮಾರ​‍್ಪಟಟಿವೆ. ಆ ಜಾಗದ ಮಾಲೀಕರು ತಮಗೆ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ. ವರ್ಷಾನುಗಟ್ಟಲೇ ಕಸದ ರಾಶಿ ತುಂಬಿಕೊಂಡರೂ ಸ್ವಚ್ಛಗೊಳಿಸೋರು ಯಾರೂ ಇಲ್ಲಾ. ಇದರಿಂದಾಗಿ ಖಾಲಿ ಜಾಗಗಳ ಸುತ್ತಮುತ್ತ ವಾಸಿಸುವ ನಿವಾಸಿಗಳಿಗೆ ನಿತ್ಯ ದುರ್ನಾತ, ಸೊಳ್ಳೆ, ನೊಣಗಳ ಕಾಟ ಮತ್ತು ರೋಗ ಭೀತಿ ಜೊತೆಗೆ ಹಂದಿ, ನಾಯಿಗಳ ಕಾಟವು ಜನರಿಗೆ ತಲೆನೋವು ತಂದಿದೆ. 

   ಬಸ್ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ಹೊರಗೆ ಹೋಗುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಸ್ ನಿಲ್ದಾಣದ ಪಕ್ಕದಲ್ಲೇ ಸುರಿಯುವ ಹೋಟೆಲ್‌ಗಳ ತ್ಯಾಜ್ಯದಿಂದ ಬೇಸತ್ತು ಹೋಗಿದ್ದಾರೆ. ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲೂ ಹಾಕಲಾದ ಕಸ, ತ್ಯಾಜ್ಯದ ಸಮಸ್ಯೆ ಸಾರ್ವಜನಿಕರು ಮತ್ತು ಪ್ರಯಾಣಿಕರ ಸಂಚಾರಕ್ಕೆ ಕಿರಿಕಿರಿಯಾಗಿದೆ. ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿಯಿದೆ. ರಸ್ತೆ ಪಕ್ಕದ ಹೋಟೇಲ್, ದಾಬಾ, ಖಾನಾವಳಿಗಳ ತ್ಯಾಜ್ಯವೆಲ್ಲಾ ರಸ್ತೆಯ ಪಕ್ಕದಲ್ಲೇ ಸುರಿಯುತ್ತಿದ್ದರಿಂದ ದುರ್ನಾತ ಹೊಡೆಯುತ್ತಿದೆ. 

  ಕಾಲುವೆ, ಹಳ್ಳ ಮತ್ತು ಚರಂಡಿಗಳು ತ್ಯಾಜ್ಯ ಗುಂಡಿಗಳಾಗಿ ಮಾರ​‍್ಪಟಟಿವೆ. ಪಟ್ಟಣದ ಬಸವಬ್ಯಾಕೂಡ ರಸ್ತೆಯ ಹಳ್ಳಕ್ಕೆ ನಿರ್ಮಿಸಲಾದ ಸೇತುವೆಯಂತೂ ತ್ಯಾಜ್ಯ, ಸತ್ತ ಪ್ರಾಣಿಗಳಿಂದ ದುರ್ನಾತ ಹೊಡೆಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರು, ಪ್ರಯಾಣಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. 

  ಮುಖ್ಯವಾಗಿ ಪಟ್ಟಣವನ್ನು ಸ್ವಚ್ಛತೆ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಯಾವುದೇ ರಸ್ತೆಯಲ್ಲಿ ನೋಡಿದರೂ ಇಕ್ಕೆಲಗಳಲ್ಲಿ ಕಸದ ರಾಶಿ ಕಾಣಸಿಗುವುದು ಸಾಮಾನ್ಯ ಎಂಬಂತಿದೆ.  ಪಟ್ಟಣದ ಬಹುತೇಕ ಕಡೆಗಳಲ್ಲಿ ಮನೆಮನೆಗೆ ವಾಹನ ತೆರಳಿ ತ್ಯಾಜ್ಯಗಳನ್ನು ಒಯ್ಯುತ್ತಿದ್ದರೂ ಅದು ಪೂರ್ಣಪ್ರಮಾಣದಲ್ಲಿ ಸಫಲತೆ ಕಾಣುತ್ತಿಲ್ಲ. ಬಹುತೇಕ ರಸ್ತೆಗಳ ಚರಂಡಿ ಸುತ್ತಮುತ್ತಲೂ ತ್ಯಾಜ್ಯ ತುಂಬಿಕೊಳ್ಳುತ್ತಲೇ ಇದೆ. ಕಸ ವಿಲೇವಾರಿಗೆ ಪುರಸಭೆಯ ವಾಹನಗಳಿದ್ದರೂ ಜನರು ರಸ್ತೆ ಬದಿ, ಖಾಲಿ ಜಾಗಗಳಲ್ಲೇ ಕಸ, ತ್ಯಾಜ್ಯ ತಂದು ಹಾಕುತ್ತಿರುವುದು ಸಮಸ್ಯೆ ಉಲ್ಬಣಿಸಲು ಪ್ರಮುಖ ಕಾರಣವಾಗಿದೆ. 

   ಕಸ ನಿರ್ವಹಣೆ ಪ್ರಕ್ರಿಯೆ ಎಲ್ಲೆಡೆ ನಡೆಯುತ್ತಿದ್ದರೂ ಹಾದಿ ಬೀದಿಗಳಲ್ಲಿ ಹೆಚ್ಚುತ್ತಿರುವ ಕಸದ ತ್ಯಾಜ್ಯಕ್ಕೆ ನಿರ್ಬಂಧವೇ ಇಲ್ಲದಂತಾಗಿದೆ. ಬೀದಿ ಬದಿಯಲ್ಲಿನ ತ್ಯಾಜ್ಯ ಎಸೆಯುವಿಕೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಅಸಹನೀಯ ತ್ಯಾಜ್ಯ ಸಾಂಕ್ರಾಮಿಕ ರೋಗ ಭೀತಿ ಸೃಷ್ಠಿಸಿದೆ. ಪುರಸಭೆ ಆಡಳಿತ ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಪ್ಲಾಸ್ಟಿಕ್ ಬಳಕೆ ನಿರ್ಭೀತವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.  

  ಹಾರೂಗೇರಿ ಪುರಸಭೆ ವ್ಯಾಪ್ತಿಯ ಕಾಲೇಜು ರಸ್ತೆ, ಎಸ್ಸಿ ಸ್ಮಶಾನದ ಹತ್ತಿರ, ಯಬರಟ್ಟಿ ರಸ್ತೆ, ಮುಗುಳಖೋಡ ಸಂಪರ್ಕ ರಸ್ತೆ, ಜನತಾ ಪ್ಲಾಟ್, ಪತ್ತಾರ ಗಲ್ಲಿ, ನಾವಿ ಗಲ್ಲಿ, ತೇರದಾಳ ಸಂಪರ್ಕ ರಸ್ತೆ ಸೇರಿದಂತೆ ಪಟ್ಟಣದ ಎಲ್ಲೆಂದರಲ್ಲಿ ರಸ್ತೆ ಪಕ್ಕದ ಖಾಲಿ ಜಾಗ ಮತ್ತು ಖಾಲಿ ನಿವೇಶಗಳಲ್ಲಿ ಕಸದ ರಾಶಿ ರಾಶಿಯೇ ಬಿದ್ದಿದೆ.  

(ಹಾರೂಗೇರಿ ಶಿಕ್ಷಣ ಕಾಸಿ. ರಸ್ತೆಯ ಮೇಲೆ ತ್ಯಾಜ್ಯ ಎಸೆಯುವುದರಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳುವಷ್ಟು, ಗಬ್ಬೆದ್ದು ನಾರುತ್ತಿದೆ. ಕಸ ವಿಲೇವಾರಿ, ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರ ಸಮಸ್ಯೆಗಳಿಗೆ ಪುರಸಭೆ ಅಧಿಕಾರಿಗಳು ಸ್ಪಂದಿಸಬೇಕಿದೆ. ಹಿ ಸೌಮ್ಯಾ ಎ., ಪದವಿ ವಿದ್ಯಾರ್ಥಿನಿ)  

(ಸಾರ್ವಜನಿಕ ಸ್ಥಳದಲ್ಲಿ ಕಸ, ತ್ಯಾಜ್ಯ ಹಾಕುವವರ ವಿರುದ್ಧ ಪುರಸಭೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಖಾಲಿ ನಿವೇಶನಗಳ ಮಾಲೀಕರಿಗೆ ಸ್ವಚ್ಛತೆ ಕಾಯ್ದುಕೊಳ್ಳುವಂತೆ ನೋಟೀಸ್ ನೀಡಿ, ದಂಡ ವಿಧಿಸಬೇಕು.- ಶ್ರೀಶೈಲಗೌಡ ಪಾಟೀಲ, ನಿವಾಸಿ)