ಐಸಿಎಂಆರ್‍ ನಿಂದ ಕೊವಿಡ್‍ನ 46,66,386 ಮಾದರಿಗಳ ಪರೀಕ್ಷೆ

ನವದೆಹಲಿ, ಜೂನ್ 7, ದೇಶಾದ್ಯಂತ ಕೊವಿಡ್‍-19ರ ಒಟ್ಟು 46,66,386 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಭಾನುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ತಿಳಿಸಿದೆ.ಕಳೆದ 24 ಗಂಟೆಗಳ ಅವಧಿಯಲ್ಲಿ 1,42,069 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕ್ರಮೇಣ ಸುಧಾರಣೆ ಮತ್ತು ಇತ್ತೀಚಿನ ಪ್ರಗತಿಯೊಂದಿಗೆ  ರಾಷ್ಟ್ರದ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳು ಮತ್ತಷ್ಟು ನಿಖರತೆ ಮತ್ತು ಕಡಿಮೆ ಅವಧಿಯೊಂದಿಗೆ ನಡೆಯುತ್ತಿವೆ ಎಂದು ಸಂಸ್ಥೆ ಹೇಳಿದೆ.

ಕೊವಿಡ್‍-19ರ ಪರೀಕ್ಷೆಯ ದೃಷ್ಟಿಯಿಂದ ಐಸಿಎಂಆರ್ ಪ್ರಯೋಗಾಲಯಗಳು, ಕೇಂದ್ರಗಳು ಮತ್ತು ಆಸ್ಪತ್ರೆಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಎಲ್ಲವನ್ನೂ ಹೇಗೆ ಕಾರ್ಯಗತ ಗೊಳಿಸಲಾಗುತ್ತಿದೆ ಎಂಬುದರ ಕುರಿತು ಸಂಸ್ಥೆ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ.ಈ ಮಧ್ಯೆ, ದೇಶದಲ್ಲಿ ಸಾರ್ಸ್‍-ಕೊವಿಡ್-2ರ ಸೋಂಕಿನ ಪ್ರಕರಣಗಳ ಸಂಖ್ಯೆ 2,46,628ಕ್ಕೆ ಏರಿದ್ದು, ಸ್ಪೇನ್‌ನ ಸಂಖ್ಯೆ ಮೀರಿದೆ.ಭಾನುವಾರ ಬೆಳಿಗ್ಗೆವರೆಗೆ 9,971 ಪ್ರಕರಣಗಳು ದೃಢಪಟ್ಟ ನಂತರ ಭಾರತ, ವಿಶ್ವದ ಐದನೇ ಅತಿ ಹೆಚ್ಚು ಕೊರೊನಾವೈರಸ್ ಬಾಧಿತ ದೇಶವಾಗಿದೆ.ಸಾಂಕ್ರಾಮಿಕ ರೋಗದ ಸಕ್ರಿಯ ಪ್ರಕರಣಗಳ ಸಂಖ್ಯೆ 1,20,406ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.