ಕ್ಷಯರೋಗ ಮುಕ್ತ ಜಿಲ್ಲೆಗೆ ಎಲ್ಲರೂ ಶ್ರಮಿಸಬೇಕು -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

Everyone should work towards a tuberculosis-free district - District Magistrate Dr. Vijayamahantesh

ಕ್ಷಯರೋಗ ಮುಕ್ತ ಜಿಲ್ಲೆಗೆ ಎಲ್ಲರೂ ಶ್ರಮಿಸಬೇಕು -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ 

ಹಾವೇರಿ  24: ಕ್ಷಯರೋಗದ ಬಗ್ಗೆ ಇರುವ ಮೂಢನಂಬಿಕೆ ಹೋಗಲಾಡಿಸಬೇಕು, ಕ್ಷಯರೋಗ ತಡೆಗೆ ಜಾಗೃತಿ ಮೂಡಿಸಬೇಕು ಹಾಗೂ ಕ್ಷಯರೋಗ ಮುಕ್ತ ಹಾವೇರಿ ಜಿಲ್ಲೆಗೆ ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು  ಹೇಳಿದರು.  

ಹಾವೇರಿ ನಗರದ ಜಿ.ಎಚ್‌.ಕಾಲೇಜು ಸಭಾಭವನದಲ್ಲಿ ಸೋಮವಾರ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಕ್ಷಯರೋಗದ ಕುರಿತು  ಆರಂಭದ ಹಂತದಲ್ಲೇ ಗುರಿತಿಸಿ, ಚಿಕಿತ್ಸೆ ನೀಡಿದರೆ ಕ್ಷಯರೋಗ ಗುಣಪಡಿಸಿಬಹುದು. ಈ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಸರ್ಕಾರ ಕ್ಷಯರೋಗಿಗಳಿಗೆ ಉಚಿತ  ಚಿಕಿತ್ಸೆ  ಹಾಗೂ ಓಷಧೋಪಚಾರ ಹಾಗೂ ನಿಕ್ಷಯ ಪೋಷಣ ಅಭಿಯಾನ ಯೋಜನೆಯಡಿ ರೂ. ಒಂದು ಸಾವಿರ ಸಹಾಯಧನ ನೀಡುತ್ತಿದೆ.  ಇದರ ಸದುಪಯೋಗ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಂಡು ಗುಣ ಮುಖರಾಗಬೇಕು. ಕ್ಷಯರೋಗ ತಡೆಗೆ ಆರೋಗ್ಯ ಇಲಾಖೆ  ವಿವಿಧ ಚಟುವಟಿಕೆಗಳ  ಆಯೋಜನೆ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.  

ಕ್ಷಯರೋಗ ಸಾವಿರಾರು ವರ್ಷಗಳಿಂದ ಇರುವ ರೋಗವಾಗಿದೆ.  ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 25 ರಷ್ಟು ಕ್ಷಯರೋಗದಿಂದ ಮರಣ ಸಂಭವಿಸುತ್ತಿರುವ ಉಲ್ಲೇಖವಿದೆ.  ಮೊದಲಿಗಿಂತ ಈಗ ಕ್ಷಯರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯ 27 ಪಂಚಾಯತಿಗಳು ಟಿಬಿ ಮುಕ್ತ ಪಂಚಾಯತಿಗಳಾಗಿದ್ದು,  ಈ ಹಿನ್ನಲೆಯಲ್ಲಿ ಆ ಪಂಚಾಯತಿಗಳ ಮುಖ್ಯಸ್ಥರನ್ನು ಸನ್ಮಾನಿಸಲಾಗುತ್ತಿದೆ.  ಎಂದರು. 

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಲೇಶ್ ಅವರು   ಕ್ಷಯರೋಗದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಸನ್ಮಾನ: ಇದೇ ಸಂದರ್ಭದಲ್ಲಿ ವೈದ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ.ವಿರಕ್ತಮಠ, ಕ್ಷಯರೋಗಿಗಳಿಗೆ ಫುಡ್ ಕಿಟ್  ನೀಡಿದ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುರೇಶ ಮಂತಟ್ಟಿ ಹಾಗೂ ಹಾವೇರಿ ಟಿಬಿ ಸೆಂಟರ್‌ಗೆ  ಟ್ರೈನೇಟ್  ಮಿಷನ್ ನೀಡಿದ  ಪ್ರಭು ಅವರನ್ನು ಸನ್ಮಾನಿಸಲಾಯಿತು.  

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್‌.ಹಾವನೂರ,  ಡಾ.ಜಗದೀಶ ಪಾಟೀಲ, ಡಾ.ಸರಿತಾ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಪ್ರಾಂಶುಪಾಲರಾದ ಶ್ರೀಮತಿ ಸಂಧ್ಯಾ ಕುಲಕರ್ಣಿ ಇತರರು ಉಪಸ್ಥಿತರಿದ್ದರು.