ಕಾನೂನಿನಡಿ ಎಲ್ಲರೂ ಸಮಾನರು ಎಂಬ ಪರಿಕಲ್ಪನೆ ಹೊಂದಬೇಕು: ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ
ಬಳ್ಳಾರಿ 20: ಕಾನೂನಿನಡಿ ಎಲ್ಲ ಮಾನವರು ಸಮಾನರು ಎಂಬ ಪರಿಕಲ್ಪನೆಯಲ್ಲಿ ನಡೆದಾಗ ಸಾಮಾಜಿಕ ನ್ಯಾಯ ದೊರೆಯುತ್ತದೆ. ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾದಲ್ಲಿ ನ್ಯಾಯಾಲಯವು ನ್ಯಾಯ ಒದಗಿಸಿಕೊಡುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಂ.2 ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಮಾನತೆ ಮತ್ತು ಸ್ವಾತಂತ್ರ್ಯ ಇವೆರಡು ದೇಶದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದಾಗ ನಿಜವಾದ ಸಾಮಾಜಿಕ ಸಮಾನತೆ ದೊರೆಯುತ್ತದೆ. ಅಸಮಾನತೆಯನ್ನು ತೊಲಗಿಸಬೇಕೆಂದರೆ ಸಮಾನತೆಯ ಹಂಚಿಕೆಯನ್ನು ಕ್ರಮವಾಗಿ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ನಿಂದನೆ, ಅವಮಾನ-ಅಪಮಾನಗಳಂತಹ ಕಷ್ಟ-ಕಾರ್ಾಣ್ಯಗಳನ್ನು ಸಹಿಸಿಕೊಂಡು ಕೇವಲ ವಿದ್ಯಾರ್ಜನೆಯಿಂದ ಬದಲಾವಣೆ ಎಂಬುದು ಅರಿತುಕೊಂಡು ಶ್ರೇಷ್ಠ ವ್ಯಕ್ತಿಯಾದರು. ಪ್ರಸ್ತುತ ಜಗತ್ತಿನಲ್ಲಿ ಬಡವ ಮತ್ತು ಶ್ರೀಮಂತ ಎಂಬ ಎರಡು ಜಾತಿ ಇವೆ. ಜ್ಞಾನಾರ್ಜನೆಯಿಂದ ಆರ್ಥಿಕವಾಗಿ ಸಬಲರಾದರೆ ಎಲ್ಲಾರೂ ನಿಮ್ಮ ಹಿಂದೆ ಬರುತ್ತಾರೆ ಎಂದು ಕಿವಿ ಮಾತು ಹೇಳಿದರು.ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಯ್ಯನಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ.ಬಿ., ಸಹಾಯಕ ನಿರ್ದೇಶಕರಾದ ಮಮತ, ನಿಲಯ ಪಾಲಕ ಶಿವಪ್ಪ, ಸರಳಾದೇವಿ ಕಾಲೇಜಿನ ಉಪನ್ಯಾಸಕರಾದ ಮಲ್ಲನ ಗೌಡ, ವಿಜಯ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ನಿಲಯದ ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು. ನಂತರ ಹಾಸ್ಟೆಲ್‌ನ ಗ್ರಂಥಾಲಯ, ಅಡುಗೆ ಕೋಣೆ ಹಾಗೂ ಅಲ್ಲಿನ ಸ್ವಚ್ಚತೆ ವೀಕ್ಷಣೆ ಮಾಡಿದರು.