ಇವರನ್ನು ನೆನೆಸಿಕೊಂಡಾಗಲೆಲ್ಲ ಸ್ವಾಭಿಮಾನದ ಶಕ್ತಿ ಪುಟಿದೇಳುತ್ತದೆ!

ಅದು 1863ರ ಕಾಲಘಟ್ಟದಲ್ಲಿ, ಭಾರತ ಅಂಧಕಾರ, ಅಜ್ಞಾನದಲ್ಲಿ ಮುಳುಗಿ ಹೋಗಿತ್ತು. ಒಂದೆಡೆ ದಾಸ್ಯ, ಮೌಡ್ಯ, ಲಾಲಶೆಗಳು, ಜಾತೀಯತೆ, ಅಹಂಕಾರ, ಕೀಳರಿಮೆ ಹಾಗೂ ಶ್ರೇಷ್ಠತೆಯ ರೋಗಗಳು ಹೀಗೆ ಒಟ್ಟಾರೆಯಾಗಿ ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಸ್ತಿತ್ವದ ಮೇಲೆ ಬಹಳ ದೊಡ್ಡ ಹೊಡೆತ ಬಿದ್ದ ಸಂದರ್ಭವದು. ಹೀಗೆ ವಿವೇಕ ಹೀನವಾಗಿ ಮೌಡ್ಯದಲ್ಲಿ ಮುಳುಗಿ ಸ್ವಾಭಿಮಾನ ಹಾಗೂ ಆತ್ಮಾಭಿಮಾನವನ್ನು ಮರೆತಿದ್ದ ಈ ದೇಶದ ಜನರಿಗೆ ವಿವೇಕವನ್ನು ತುಂಬುವುದಕ್ಕಾಗಿಯೇ ಭಾರತದಂತಹ ಪುಣ್ಯ ಭೂಮಿಯಲ್ಲಿ ಅವತರಿಸಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು. ಇಡೀ ವಿಶ್ವಕ್ಕೆ ಜ್ಞಾನದ ಬೆಳಕು ನೀಡಿ ಭಾರತದ ಆಧ್ಯಾತ್ಮಿಕ ಓನತ್ಯವನ್ನು ಇಡೀ ವಿಶ್ವಕ್ಕೆ ಸಾರಿದ್ದರು. ‘ಅಭ್ಯುಥ್ಥಾನಂ ಅಧರ್ಮಸ್ಯ, ತದಾತ್ಮಾನಂ ಸೃಜಾಮ್ಯಹಂ’ ಧರ್ಮದ ಕತ್ತಲು ಆವರಿಸಿದ ಸಂದರ್ಭದಲ್ಲಿ ನಾನು ಅವತರಿಸಿ ಬರುತ್ತೇನೆ ಅಂತ ಭಗವತ್ ಗೀತೆಯಲ್ಲಿ ಹೇಳಿದಂತೆ, ಅವತ್ತು ಅಧರ್ಮದಿಂದ ಆವರಿಸಿದ್ದ ಅಜ್ಞಾನವನ್ನು ಹೋಗಲಾಡಿಸುವುದಕ್ಕೆ ಆ ಬೆಳಕಿನ ಪುಂಜ ವಿವೇಕಾನಂದರ ರೂಪದಲ್ಲಿ ಹುಟ್ಟಿ ಬಂದಿತ್ತು.  

ನರೇಂದ್ರನಲ್ಲಿ, ಶಿಕ್ಷಣಕ್ಕಿಂತ ಹೆಚ್ಚಾಗಿ ಸಾಧು-ಸಂತರ ಸಂಪರ್ಕ ಹಾಗೂ ಸಾತ್ವಿಕ ಗುಣಗಳಿಂದಾಗಿ ವೈರಾಗ್ಯವೇ ಮನೆಮಾಡಿತ್ತು. ಆ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ದರ್ಶನವಾಯಿತು. ವಿವೇಕಾನಂದ ರಾಮಕೃಷ್ಣರ ಸಂಬಂಧ, ಆ ಗುರು ಶಿಷ್ಯರ ಪರಂಪರೆ ಅದೊಂದು ಅಪೂರ್ವ ಸಂಗಮವೇ ಆಯಿತು. ನರೇಂದ್ರ ವಿವೇಕಾನಂದ ಆಗುವುದಕ್ಕೆ ಆ ಗಳಿಗೆಯೆ ಮುನ್ನುಡಿ ಬರೆದಿತ್ತು. ಆ ಗುರು ಕೂಡ ಇಂತಹ ಪರಮಾದ್ಭುತ ಶಿಷ್ಯನ ಆಗಮನಕ್ಕಾಗಿಯೇ ಕಾಯುತ್ತಿದ್ದರು! ಈರ್ವರ ಮಧ್ಯೆ ನಿರಂತರವಾಗಿ ಬಹಳ ಗಹಣವಾದ ವಿಚಾರಗಳು ಚರ್ಚೆ ಆಗುತ್ತಿದ್ದವು. ಒಮ್ಮೆ ಶ್ರೀರಾಮಕೃಷ್ಣರು ಒಂದು ಹಾಳೆಯ ತುಂಡಿನ ಮೇಲೆ ‘ಈ ನರೇಂದ್ರ ಲೋಕ ಶಿಕ್ಷಣದ ಕಾರ್ಯವನ್ನು ಮಾಡುತ್ತಾನೆ’ ಅಂತ ಬರೆಯುತ್ತಾರೆ. ಅದನ್ನು ಬಹಳ ಲಘುವಾಗಿ ತೆಗೆದುಕೊಂಡ ನರೇಂದ್ರ ಈ ಎಲ್ಲಾ ಕೆಲಸಗಳು ನನ್ನಿಂದ ಆಗೋದಿಲ್ಲ ಅಂತ ಹೇಳಿಬಿಟ್ಟರು. ರಾಮಕೃಷ್ಣರು ದೃಢವಾಗಿ ಹೇಳುತ್ತಾರೆ, ಆಗೋದಿಲ್ಲ ಅಲ್ಲ! ನಿನ್ನ ಎಲುಬುಗಳು ಕೂಡ ಇದೇ ಕೆಲಸವನ್ನು ಮಾಡುತ್ತವೆ ಅಂತ ಹೇಳುತ್ತಾರೆ. ಮುಂದೆ ಪರಮಹಸರು ನರೇಂದ್ರನಿಗೆ ಸನ್ಯಾಸ ದೀಕ್ಷೆ ಕೊಟ್ಟು, ನಿರಮ್ಮಳರಾಗಿ ಕಾಳಿಮಾತೆಯಲ್ಲಿ ಲೀನರಾಗುತ್ತಾರೆ.  

ಅದೊಂದು ದಿನ ರಾತ್ರಿ ಸ್ವಾಮಿ ವಿವೇಕಾನಂದರು ಅದ್ಭುತವಾದ ಕನಸನ್ನು ಕಂಡಿದ್ದರು. ರಾಮಕೃಷ್ಣ ಪರಮಹಂಸರು ಜ್ಯೋತಿರ್ಮಯ ದೇಹವನ್ನು ಧರಿಸಿ ಸಮುದ್ರದಿಂದ ಮುಂದೆ ಮುಂದೆ ಹೋಗುತ್ತಿದ್ದರು. ಮತ್ತು ಸ್ವಾಮಿ ವಿವೇಕಾನಂದರನ್ನ ತಮ್ಮ ಹಿಂದೆ ಬರುವಂತೆ ಸನ್ನೆ ಮಾಡುತ್ತಿದ್ದರು, ಅದು ವಿವೇಕಾನಂದರ ಕಣ್ತೆರೆಸಿದ ಕನಸು. ಅವರ ಹೃದಯದಲ್ಲಿ ಅವರ್ಣನೀಯ ಆನಂದ ತುಂಬಿತ್ತು. ಅದರೊಂದಿಗೆ ನೀನಿನ್ನು ಹೊರಡು ಎನ್ನುವ ದೇವವಾಣಿ ಸ್ಪಷ್ಟವಾಗಿ ಕೇಳಿಸಿದ ಹಾಗಾಗುತ್ತದೆ. ಅದು ಹೊರದೇಶಕ್ಕೆ ಹೋಗುವ ಬಗೆಗಿನ ಆದೇಶವಾಗಿತ್ತು. ಆಗ ವಿವೇಕಾನಂದರಲ್ಲಿ ಹೊರದೇಶಕ್ಕೆ ಹೋಗುವ ಸಂಕಲ್ಪ ದೃಢವಾಗುತ್ತದೆ. ಅದರಂತೆ ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕಾದ ಚಿಕಾಗೋನತ್ತ ಪ್ರಯಾಣ ಬೆಳೆಸುತ್ತಾರೆ.  

ಅಮೆರಿಕಾದಲ್ಲಿ, ಜೋಸೆಫ್ ಕ್ಯಾಥರೀನ್ ಮೂಲಕ ವಿವೇಕಾನಂದರಿಗೆ ಪರಿಚಯವಾಗಿದ್ದ, ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ಸ್‌, ವಿವೇಕಾನಂದರೊಂದಿಗೆ ಮಾತನಾಡುತ್ತ ಇಡೀ ದಿನವನ್ನೇ ಅವರೊಂದಿಗೆ ಕಳೆಯುತ್ತಾರೆ. ವಾಪಾಸ್ ಹೋಗುವ ಕೊನೆಯಲ್ಲಿ ಆ ಪ್ರೊಫೆಸರ್, ಜೋಸೆಫ್ ಕ್ಯಾಥರೀನಳಿಗೆ ಹೀಗೆ ಹೇಳುತ್ತಾರೆ. “Since 400 years on the land of America we could not saw a person like swami Vivekananda. His intellect is greater than all our intellectuals of America. If you will put all our american professors, great intellectuals on one side and swami Vivekananda on other side his intellect is far greater than all others". ಕಳೆದ ನಾಲ್ಕುನೂರು ವರ್ಷಗಳ ಅಮೇರಿಕಾದ ಇತಿಹಾಸದಲ್ಲಿ ಇಂತಹ ಅದ್ಭುತ ಜ್ಞಾನ ಇರುವ ವ್ಯಕ್ತಿಯೊಬ್ಬ ಅಮೇರಿಕಾದ ಭೂಮಿಯ ಮೇಲೆ ತಿರುಗಾಡಿರಲಿಲ್ಲ. ಅಮೇರಿಕಾದಲ್ಲಿ ಬೌದ್ಧಿಕ ಸಾಮರ್ಥ್ಯ ವಿರುವ ಎಲ್ಲಾ ವ್ಯಕ್ತಿಗಳನ್ನು ಒಂದು ತಕ್ಕಡಿಯಲ್ಲಿ ಹಾಕಿ, ಇನ್ನೊಂದು ತಕ್ಕಡಿಯಲ್ಲಿ ವಿವೇಕಾನಂದರನ್ನು ಹಾಕಿದರೆ, ವಿವೇಕಾನಂದರ ಬೌದ್ಧಿಕ ಮಟ್ಟದ ತೂಕವೇ ಹೆಚ್ಚಾಗುತ್ತದೆ". ಎಂದಿದ್ದರು. 1893ರರ ಸಪ್ಟೆಂಬರ್ 11 ರಂದು ಸರ್ವಧರ್ಮ ಸಮ್ಮೇಳನ ಆರಂಭವಾಗುತ್ತದೆ. ಕಿಕ್ಕಿರಿದು ತುಂಬಿದ ಜನರ ಆ ಬೃಹತ್ ಸಭೆಯಲ್ಲಿ ಏಳು ಸಾವಿರಕ್ಕೂ ಅಧಿಕ ವಿವಿಧ ದೇಶಗಳ ಪಂಡಿತರಿದ್ದರು. ಮೂರನೆಯ ಹಾಗೂ ನಾಲ್ಕನೆಯ ಅವಧಿಯ ಕೊನೆಗೆ ಕಾರ್ಯಕ್ರಮದ ಸಭಿಕರು, ಸ್ವಾಮೀಜಿ ಇದು ಕೊನೆಯ ಅವಧಿ, ಈಗ ನೀವು ಮಾತನಾಡದಿದ್ದರೆ ನಿಮಗೆ ಅವಕಾಶವೇ ಇಲ್ಲ ಎನ್ನುತ್ತಾರೆ. ಆಗ ಎದ್ದು ನಿಂತ ಸ್ವಾಮಿ ವಿವೇಕಾನಂದರು ಕೇವಲ ಐದೇ ಐದು ಪದಗಳಿಂದ ವಿಶ್ವದ ಅಸಂಖ್ಯ ಮನಸ್ಸುಗಳನ್ನು ಗೆದ್ದುಬಿಟ್ಟರು. ‘Sisters and brothers of America’  ಎಂದು ಉದ್ಗರಿಸುತ್ತಿದ್ದಂತೆ ಕಿವಿಗಡಚಿಕ್ಕುವಂತ ಚಪ್ಪಾಳೆಯ ಕರತಾಡನ...!! ಅಲ್ಲಿ ನೆರದಿದ್ದ ಹೆಣ್ಣುಮಕ್ಕಳ ಕಣುಗಳಲ್ಲಿ ಆನಂದಾಶ್ರು! ಅವರನ್ನು ಹತ್ತಿರದಿಂದ ನೋಡಬೇಕೆಂದು ಕುರ್ಚಿ, ಬೆಂಚುಗಳನ್ನು ಹಾರಿಕೊಂಡು ಬಂದ ಸಾವಿರಾರು ಮನಸ್ಸುಗಳು ಕ್ಷಣಾರ್ಧದಲ್ಲಿ ಸ್ವಚ್ಚಂದವಾಗಿಬಿಟ್ಟವು.! ಅಮೇರಿಕಾದ ಜನರಿಗೆ ‘ಸೋದರ-ಸೋದರಿ’ ಎಂಬ ಶಬ್ದ ಪರಿಚಯವಿಲ್ಲವೆಂದೇನಲ್ಲ. ವಿವೇಕಾನಂದರು ಅದನ್ನು ಹೇಳುವಾಗ ಅವರಲ್ಲಿದ್ದ ಭಾವುಕತೆ, ಅವರ ಹೃದಯಾಂತರಾಳದಿಂದ ಹೊರಡುತ್ತಿದ್ದ ಮಾನವೀಯ ಪ್ರೇಮ, ಅವರ ಕಣ್ಣುಗಳಲ್ಲಿದ್ದ ಕಾಂತಿ, ತೇಜಸ್ಸು, ಮುಖದಲ್ಲಿನ ಗಂಭಿರ ಭಾವದ ಜತೆಗೆ ಮಂದಹಾಸ, ಈ ಎಲ್ಲಾ ಗುಣಗಳಿಂದಲೇ ಆ ಜನರ ಮನಸ್ಸುಗಳನ್ನು ಸೆಳೆಯಲು ಸಾಧ್ಯವಾಯಿತು. ಭಾಷಣದಲ್ಲಿ ಅವರು ಭಾರತದ ಅಂತಃಸತ್ವವನ್ನು ಪರಿಚಯಿಸಿ ಕೊಟ್ಟ ಬಗೆ, ಸನಾತನ ಧರ್ಮದ ಮಹಿಮೆಯನ್ನು, ಮಾನವೀಯ ಮೌಲ್ಯದ ಅಂಶಗಳನ್ನು ಸ್ಥೂಲವಾಗಿ ಪರಿಚಯಿಸಿದರ ಪರಿಣಾಮವೇ ಭಾರತದ ಭಾಗ್ಯೋದಯಕ್ಕೆ ನಾಂದಿ ಯಾಯಿತು. ಜಗತ್ತು ನಮ್ಮನ್ನು ನೋಡುವ ದೃಷ್ಟಿಕೋನಗಳೇ ಬದಲಾದವು. ಅದು ಕೇವಲ ಒಂದು ಭಾಷಣ ಮಾತ್ರವಾಗಿರಲಿಲ್ಲ, ಬದಲಾಗಿ ಅದರಲ್ಲಿ ಇಡೀ ಜಗತ್ತಿನ ಕಲ್ಯಾಣದ ಸಂದೇಶಗಳಿದ್ದವು. ಭಾರತದ ವಿಶ್ವ ಭ್ರಾತೃತ್ವವನ್ನು ಜಗತ್ತಿಗೆ ಸಾರಿದ್ದು, ಭಾರತದ ಆಧ್ಯಾತ್ಮಿಕ ಸಾಂಸ್ಕೃತಿಕ ಮತ್ತು ತಾತ್ವಿಕ ಚಿಂತನೆಗಳ ಬಗ್ಗೆ ಹಾಗೂ ಈ ಮಣ್ಣಿನ ಜ್ಞಾನ ಪರಂಪರೆಯ ಬಗ್ಗೆ ವಿಶ್ವ ಸೌಭ್ರಾತೃತ್ವದ ಬಗ್ಗೆ ಅರಿವು ಮೂಡಿಸಿದರು. ಭಾರತವೆಂಬ ಸುವರ್ಣ ಭೂಮಿಯ ಪರಿಚಯವನ್ನು ಜಗತ್ತಿಗೆ ಮಾಡಿ ಕೊಡುವುದು ಒಂದು ಧೈವಿ ಯೋಗವೇ ಆಗಿತ್ತು.  

ವಿವೇಕಾನಂದರು ಅಮೇರಿಕಾಕ್ಕೆ ಬಂದಿದ್ದು ಖ್ಯಾತಿ ಗಳಿಸಲಿಕ್ಕೆ ಅಲ್ಲ. ಯಾವ ಭಾರತವನ್ನು ಯುರೋಪಿಯನ್ನರು ಅಜ್ಞಾನದ, ಬಡತನದ, ಮೂಢನಂಬಿಕೆಗಳ ದೇಶ ಎಂದು ಕರೆಯುತ್ತಿದ್ದರೋ, ಅದೇ ಯುರೋಪಿಯನ್ನರು, ಸ್ವಾಮೀಜಿ ಭಾಷಣಗಳ ಬಳಿಕ ಭಾರತದಿಂದ ನಾವು ಕಲಿಯುವುದು ತುಂಬ ಇದೆ, ಅಲ್ಲಿನ ಸತ್ಯ ಸಾಮರ್ಥ್ಯಗಳು ನಮ್ಮನ್ನು ದೃಢಗೊಳಿಸಬಲ್ಲವು ಎಂಬುದನ್ನು ನಂಬಿದರು. ನಂತರ ಸ್ವಾಮಿಯ ಅಮೇರಿಕಾದಲ್ಲಿ ಅಸಂಖ್ಯಾತ ಅನುಯಾಯಿಗಳನ್ನು ಹೊಂದಿದರು. ಪ್ರಖರ ವಾಗ್ಮಿಗಳೆಂದು ಕರೆಯಿಸಿ ಕೊಂಡವರೆಲ್ಲರೂ ಸ್ವಾಮೀಜಿಗೆ ತಲೆಬಾಗಿದರು. ಧರ್ಮಗಳ ಹೆಸರಲ್ಲಿ ಸಿಕ್ಕಸಿಕ್ಕವರು ಏನೇನೋ ಹೇಳಿ ಮನಸ್ಸುಗಳನ್ನು ವಿಭಜಿಸಿ, ಜನರ ದಿಕ್ಕನ್ನು ತಪ್ಪಿಸುತ್ತಿದ್ದರಲ್ಲ ಅಂಥ ಸಂದರ್ಭದಲ್ಲಿ ಸ್ವಾಮೀಜಿ ವಿಶ್ವಧರ್ಮದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಮೂಡಿಸಿ, ‘ನಾವೆಲ್ಲ ಒಂದೇ’ ಎಂಬ ಸಾಮರಸ್ಯದ ಭಾವನೆಯನ್ನು ನಿರ್ಮಿಸಿದರು. ಇದು ಸ್ವಾಮಿ ವಿವೇಕಾನಂದರ ಖ್ಯಾತಿಯನ್ನು ಆಗಸದ ಎತ್ತರಕ್ಕೆ ಏರಿಸಿತ್ತು. ವಿದೇಶಗಳಲ್ಲಿ ವೇದಾಂತದ ವಾಣಿಯನ್ನು ಪ್ರಚಾರ ಮಾಡುವ ಮೂಲಕ ಭಾರತದ ಹೆಸರನ್ನು ಉಜ್ವಲ ಗೊಳಿಸಿದರು. ‘Presence of mind’ ಅಂತ ಹೇಳ್ತಾರಲ್ಲ, ಅದಂತು ಸ್ವಾಮೀಜಿಯಲ್ಲಿ ಅದ್ಭುತವಾಗಿತ್ತು. ಯಾರಿಂದಾದರೂ ಅತ್ಯಂತ ಅವಹೇಳನಕಾರಿಯಾದ ಪ್ರಶ್ನೆಗಳು, ಟೀಕೆಗಳು ಬಂದಾಗಲೂ ಕಿಂಚಿತ್ತೂ ಕೊಪಗೊಳ್ಳದೆ ಸಂತೋಷದಿಂದ ಉತ್ತರಿಸುತ್ತಿದ್ದರು.  

1947ರಲ್ಲಿ ನಮಗೆ ಸಿಕ್ಕಿದ್ದು ಅದು ಕೇವಲ ರಾಜಕೀಯ ಸ್ವಾತಂತ್ರ್ಯ ಮಾತ್ರ. ಆದರೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಗುಲಾಮಿತನದಲ್ಲಿದ್ದಂತಹ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1893 ಸಪ್ಟೆಂಬರ್ 11 ರಂದು. ಅದು ಚಿಕಾಗೋದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದ ವೇದಿಕೆಯ ಮೇಲೆ. ಅದನ್ನು ತಂದು ಕೊಟ್ಟವರೇ ಸ್ವಾಮಿ ವಿವೇಕಾನಂದರು. ಹಾಗಾಗಿ ವಿವೇಕಾನಂದರು ‘ನವಯುಗಾಚಾರ್ಯ’. ಇಡೀ ವಿಶ್ವವೇ ಸಂಚಲನಗೊಂಡು ಸರ್ವಶ್ರೇಷ್ಠ ಪರಿವರ್ತನೆ ಆಗಬಲ್ಲಂತಹ ಸಂದರ್ಭಗಳಿಗೆ ಆ ದೇವರು ಹೇಗೆಲ್ಲ ವೇದಿಕೆಯನ್ನು ಸಜ್ಜುಗೊಳಿಸಿ ಸ್ವಾಮಿ ವಿವೇಕಾನಂದರಂತಹ ಮಹಾತ್ಮರಲ್ಲಿ ಸಮ್ಮಿಲನಗೊಳ್ಳುತ್ತಾನೆ ನೋಡಿ! ನಾವೆಲ್ಲ ನಮ್ಮ ಕನಸುಗಳಿಗೆ ಒಂದಿಷ್ಟು ಅಡೆತಡೆಗಳು ಬಂದೊದಗಿಬಿಟ್ಟರೆ ಆ ಗುರಿಯನ್ನೇ ತ್ಯಜಿಸಿಬಿಡುತ್ತೇವೆ. ಆದರೆ ಸ್ವಾಮಿ ವಿವೇಕಾನಂದರು ಅಂದು ಹಾಗೆ ಮಾಡಲಿಲ್ಲ. ಸಾಕಷ್ಟು ಕಷ್ಟ ನೋವುಗಳನ್ನು ಮೆಟ್ಟಿನಿಂತು ಜಗತ್ತಿನೆದುರು ಸನಾತನ ಧರ್ಮದ ವೈಭವವನ್ನು ಸಾರಿಹೇಳುತ್ತ, ಅಜ್ಞಾನದ ಕತ್ತಲೆಯಿಂದ ತುಂಬಿದ ಜಗತ್ತಿಗೆ ವಿವೇಕದ ಬೆಳಕನ್ನು ನೀಡಿದರು.  

1888ರಲ್ಲಿ ವಿವೇಕಾನಂದರು ಭಾರತದಾದ್ಯಂತ ಪರಿವ್ರಾಜಕ ಪರ್ಯಟನೆಗೆ ಹೊರಡುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದಂತಹ ಮೌಡ್ಯಗಳನ್ನು ಖಂಡಿಸುತ್ತಾರೆ. ಸನಾತನ ಧರ್ಮದ ಹಿರಿಮೆಯನ್ನು ಸಾರುತ್ತ ಮನುಷ್ಯ ನಿರ್ಮಿತ ಜಾತಿ ಪಂಥಗಳ ಗೋಡೆಗಳನ್ನು ಒಡೆಯುವುದಕ್ಕೆ ಕರೆ ಕೊಡುತ್ತಾರೆ. ಆತ್ಮ ಹಾಗೂ ಅನುಸಂಧಾನಗಳ ಬಗ್ಗೆ ಬೋಧಿಸುತ್ತಾ ಯುವಶಕ್ತಿಯನ್ನು ಜಾಗೃತಗೊಳಿಸುತ್ತಾ ಭವ್ಯ ಭಾರತದ ಏಕತೆಗೆ ನಾಂದಿ ಹಾಡುತ್ತಾರೆ. ಬಡವರನ್ನು ಕಂಡಾಗಲೆಲ್ಲ ಸ್ವಾಮೀಜಿಯವರ ಹೃದಯ ಮಿಡಿಯುತ್ತಿತ್ತು. ಬಡವರ ಉದ್ಧಾರಕ್ಕಾಗಿ ಪಣತೊಟ್ಟ ಆ ವೀರ ಸನ್ಯಾಸಿ, ಬಡವರ ಊರುಗಳಿಗೆ ತೆರಳಿ, ಅವರೊಂದಿಗೆ ಕಾಲ ಕಳೆಯುತ್ತ, ಅವರ ಕಷ್ಟ ನೋವುಗಳನ್ನು ಆಲಿಸಿದರು. ಹಸಿದವರಿಗೆ ಅನ್ನ ಸಿಗಬೇಕೆ ಹೊರತು ಧರ್ಮದ ಮಾತುಗಳಲ್ಲ ಅಂತ ಬಹಳಷ್ಟು ನಿಖರವಾಗಿ ಹೇಳುತ್ತಾ ಭಾರತದ ಸನಾತನ ಧರ್ಮದ ನಿಜವಾದ ತಿರುಳನ್ನು ಜನರಿಗೆ ಮುಟ್ಟಿಸಿದರು. ಇದು ಸ್ವಾಮೀಜಿ ಪರಿವ್ರಾಜಕರಾಗಿ ಮಾಡಿದ ಮಹಾನ್ ಕಾರ್ಯ. ಬಡವರ, ದೀನ ದಲಿತರ ನೋವುಗಳನ್ನು ಆಲಿಸುತ್ತಿದ್ದ ಆ ಸಂದರ್ಭದಲ್ಲಿ ಅವರ ಎದೆಯಲ್ಲಿ ಎದ್ದಂತಹ ಅಲೆಗಳು ಹಿಂದೂ ಮಹಾ ಸಾಗರದ ಅಲೆಗಳಿಗಿಂತಲೂ ಪ್ರಬಲವಾಗಿದ್ದವು. ಸಾಗರದಲ್ಲಿ ಎದ್ದ ಅಲೆಗಳು ಕೇವಲ ಸಮುದ್ರದ ದಡದಲ್ಲಿ ಅಪ್ಪಳಿಸಬಹುದು, ಆದರೆ ವಿವೇಕಾನಂದರ ಎದೆಯಲ್ಲಿ ಎದ್ದ ಆ ಅಲೆಗಳು ಇಡೀ ಜಗತ್ತಲ್ಲೆಲ್ಲ ಅಪ್ಪಳಿಸಿ ಅಲ್ಲಿನ ಪಾಪವನ್ನು ತೊಳೆದಿವೆ, ಅವರ ಅಧರ್ಮವನ್ನು ತೊಳೆದಿವೆ ಮತ್ತು ವಿಶ್ವದ ಜನರಲ್ಲಿ ಸ್ವಾಭಿಮಾನದ ಶಕ್ತಿಯನ್ನು ತುಂಬಿವೆ. ಹಾಗಾಗಿ ಅವರೊಬ್ಬ ‘ವೀರ ವೇದಾಂತಿ’. ಸ್ವಾಮೀಜಿಯ ಗಟ್ಟಿತನ ಹೇಗಿತ್ತೆಂದರೆ, ಧರ್ಮದ ಹೆಸರಲ್ಲಿ ತಪ್ಪು ಮಾಡಿದ ಯಾರೊಬ್ಬರನ್ನೂ ಸ್ವಾಮೀಜಿ ಬಿಡುತ್ತಿರಲಿಲ್ಲ, ಸ್ವತಃ ತಪ್ಪಿತಸ್ಥ ಸನ್ಯಾಸಿಗಳ ಬಗ್ಗೆ ಅವರು ಹೇಳುತ್ತಾರೆ. “ಸನ್ಯಾಸಿಗಳಾದ ನಾವು ಏನು ಮಾಡುತ್ತಿದ್ದೇವೆ! ಮೂರ್ಖ ಜನರ ತಾಮಸ ಆತಿಥ್ಯದಿಂದ ಉದರ ಪೋಷಣೆ ಮಾಡಿಕೊಳ್ಳುತ್ತಾ ಅಲೆಯುತ್ತಿರುವ ಲಕ್ಷಾಂತರ ಸನ್ಯಾಸಿಗಳು ನಾವೇನು ಮಾಡಿದ್ದೇವೆ! ತತ್ವ ಬೋಧನೆ, ತತ್ವ ಬೋಧನೆ ಛೀ ಛೀ ವೈರಾಗಿಗಳೇ, ನಿಮ್ಮ ತತ್ವ ಬೋಧನೆಗೆ ಬೆಂಕಿ ಬೀಳಲಿ. ಹೊಟ್ಟೆಗಿಲ್ಲದೆ ಕಂಗೆಟ್ಟಿರುವ ದೇಶದಲ್ಲಿ ನಿಮ್ಮ ಧರ್ಮ ಬೋಧನೆ ಯಾರಿಗೆ ಬೇಕಿದೆ...!! ಆಹಾ ವೇದ ಮಾತೇ ನಿನ್ನ ಈ ಸನ್ಯಾಸಿಗಳ ಲೀಲೆಯನ್ನು ನೋಡು, ಕಾಲಡಿ ಭೂಮಿಯನ್ನು ಹಿಡಿಯಲಾಗದ ಅಶಕ್ತರಿಗೆ ಅನಂತ ಆಕಾಶವನ್ನು ತೋರಿಸಿಬಿಡುತ್ತಿದ್ದೇವೆ”. ಎಂದು ಉದ್ಘರಿಸಿದ ಸ್ವಾಮೀಜಿಯ ಆ ದಿಟ್ಟತನವನ್ನು ಮೆಚ್ಚಲೇಬೇಕು.  

ಧರ್ಮದ ಜೊತೆಗೆ ಬಹು ಮುಖ್ಯವಾಗಿ ಶಕ್ತಿ ಬೇಕು, ಹಣ ಬೇಕು, ತಂತ್ರಜ್ಞಾನ ಬೇಕು. ಪಾಶ್ಚಿಮಾತ್ಯದ ತಂತ್ರಜ್ಞಾನ ಹಾಗೂ ಭಾರತದ ಆಧ್ಯಾತ್ಮ ಎರಡನ್ನೂ ಕೂಡಿಸಿ ಹೊಸ ಜಗತ್ತನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದಿದ್ದ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿದ್ದಾಗಲೇ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ರಿಗೊಂದು ಪತ್ರ ಬರೆದು ಅದರಲ್ಲಿ ‘ನೀವು ಬಡವರ ಕಲ್ಯಾಣಕ್ಕಾಗಿ, ಅವರ ಉದ್ದಾರಕ್ಕಾಗಿ ಏನನ್ನಾದರೂ ಮಾಡಿ ಆಗ ಅದನ್ನು ನೋಡಲು ನಾನು ಬರುತ್ತೇನೆ’. ಸ್ವಾಮೀಜಿಯ ಆ ಪತ್ರದ ಪರಿಣಾಮವಾಗಿ ಅರಸರು, ಕೆ.ಆರ್‌.ಎಸ್, ಮೈಸೂರು ವಿಶ್ವವಿದ್ಯಾಲಯ, ಭದ್ರಾವತಿಯಲ್ಲಿ ಉಕ್ಕಿನ ಕಾರ್ಖಾನೆ, ಜೋಗದಲ್ಲಿ ವಿದ್ಯುತ್ ಸ್ಥಾವರವನ್ನು ಪ್ರಾರಂಭಿಸಿದರು. ಜೇಮಸೇಠ್‌’ಜೀ ಟಾಟಾರಿಗೆ ವಿವೇಕಾನಂದರು ಹೇಳಿದ ಒಂದು ಮಾತಿನ ಮಹತ್ವದ ಪರಿಣಾಮವಾಗಿ ಬೆಂಗಳೂರಿನಲ್ಲಿ ‘Indian institute of science’ ಪ್ರಾರಂಭವಾಯಿತು. ವಿವೇಕಾನಂದರಿಂದ ಪ್ರೇರಿತರಾದ ಅದೆಷ್ಟೋ ಸಂಘ ಸೇವಾ ಸಂಸ್ಥೆಗಳು, ವಿವೇಕಾನಂದರ ಹೆಸರಿನ ಮೂಲಕ ಬಡವರ ಸೇವೆಯಲ್ಲಿ ಸನ್ನದ್ಧವಾಗಿವೆ. ಯುವಕರ ಪಡೆಗಳಂತೂ ದೇಶದ ಮೂಲೆ ಮೂಲೆಗಳಿಗೆ ತೆರಳಿ ಬಡವರ ಕಣ್ಣಿರು ಒರೆಸುತ್ತಿದ್ದಾರೆ. ಅನೇಕರು ವಿವೇಕಾನಂದರಿಂದ ಸ್ಪೂರ್ತಿ ಗೊಂಡಿದ್ದಾರೆ. ಫ್ರೆಂಚ್ ದೇಶದ ನೊಬೆಲ್ ಪುರಸ್ಕೃತ, ಖ್ಯಾತ ನಾಟಕ ಕಾದಂಬರಿಕಾರ ರೋಮಿ ರೊಲ್ಯಾಂಡ್ ಹಾಗೂ ಭಾರತದ ನೋಬೆಲ್ ಪುರಸ್ಕೃತರು ಆದಂತಹ ರವೀಂದ್ರನಾಥ ಟ್ಯಾಗೋರ್ ಈ ಈರ್ವ ದಿಗ್ಗಜರ ಆಕಸ್ಮಿಕ ಭೇಟಿಯ ಸಂದರ್ಭವೊಂದು ಚರ್ಚೆಯತ್ತ ಸಾಗುತ್ತದೆ, ಆಗ ರೋಮಿ ರೊಲ್ಯಾಂಡ್ ಟ್ಯಾಗೋರ್ ಅವರಿಗೆ ಕೇಳುತ್ತಾರೆ, ನಾನು ಭಾರತದ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಶಯ ಇದೆ. ಅದಕ್ಕೆ ಯಾವ ಪುಸ್ತ ಅಧ್ಯಯನ ಮಾಡಬೇಕು? ಅದಕ್ಕೆ ಟ್ಯಾಗೋರರು “If you want to know India, study swami Vivekananda. In him everything’s positive nothing negative”. ಎನ್ನುತ್ತಾರೆ. ಅಂತಹ ನೊಬೆಲ್ ಪುರಸ್ಕೃತರೇ ಸ್ವಾಮಿ ವಿವೇಕಾನಂದರ ಬಗ್ಗೆ ಎಷ್ಟೊಂದು ಸಮ್ಮೋಹಿತರಾಗುತ್ತಾರೆ.“The life of Vivekananda and the universal gospel”  ಎಂಬ ಪುಸ್ತಕ ಬರೆಯುತ್ತಾರೆ. “I look upon Swami Vivekananda as a fire of spiritual energy” ಎಂದು ತನ್ನ ಮೇಲಾದ ಪ್ರಭಾವವನ್ನು ಅದರಲ್ಲಿ ಹೇಳಿಕೊಳ್ಳುತ್ತಾರೆ.  

ಹಾಗಾಗಿ ಯುವಶಕ್ತಿಗೆ ಸ್ಪೂರ್ತಿ, ಮಾರ್ಗದರ್ಶಕ ವ್ಯಕ್ತಿತ್ವ ವಿವೇಕಾನಂದರಿಗಿಂತ ಮತ್ತೊಂದಿಲ್ಲ. ಭಾರತದ ಭವಿಷ್ಯ ಇರುವುದು ಯುವಶಕ್ತಿಯಲ್ಲಿ. ಯುವಶಕ್ತಿ ಮನಸ್ಸು ಮಾಡಿದರೆ ಎಲ್ಲವನ್ನು ಮಾಡಬಲ್ಲರು ಎಂಬುದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು. ಹಾಗಾಗಿ ಯುವ ಜನತೆಗೆ ತಮ್ಮ ದೇಹ ಹಾಗೂ ಮನಸ್ಸುಗಳನ್ನು ದೃಢವಾಗಿಟ್ಟುಕೊಂಡು ಗುರಿ ತಲುಪುವುದಕ್ಕೆ ನಿರಂತರ ಪ್ರಯತ್ನ ಮಾಡಬೇಕು ಅಂತ ಹೇಳಿದ ವಿವೇಕಾನಂದರು ಏಳಿ, ಎದ್ದೇಳಿ! ಗುರಿ ಮುಟ್ಟುವವರೆಗೂ ನಿಲ್ಲದಿರಿ ಅಂತ ಹೇಳುವ ಮೂಲಕ ಪ್ರತಿಯೊಬ್ಬರಲ್ಲೂ ಉತ್ಸಾಹದ ಚೆಲುವೆ ಪುಟಿದೇಳುಂತೆ ಮಾಡಿದ್ದ ಮಹಾನ್ ಚೇತನ 1902ರಂದು ಕಾಳಿಮಾತೆಯಲ್ಲಿ ಲೀನವಾಯಿತು. ಕೇವಲ 39 ವರ್ಷಗಳಲ್ಲಿ ಅವರು ಮಾಡಿದ ಸಾಧನೆ ಅಪ್ರತಿಮ, ಅಮೋಘ, ಅಪರಿಮಿತ ಹಾಗೂ ಅನನ್ಯ. ಯಾವಾಗೆಲ್ಲ ನಮ್ಮನ್ನು ನಿರಾಶೆ ಆವರಿಸಿಕೊಳ್ಳುತ್ತದೆಯೋ, ಯಾವಾಗ ನಮ್ಮನ್ನು ಅಜ್ಞಾನದ ಕತ್ತಲು ಕಾಡುತ್ತದೆಯೋ, ಆಗ ವಿವೇಕಾನಂದರ ವಿಚಾರಗಳೇ ನಮಗೆ ದಾರೀದೀಪವಾಗುತ್ತವೆ. ನಮ್ಮಲಿನ ನಿರಾಶೆಯನ್ನು ಹೊಡೆದೋಡಿಸಿ ಮತ್ತೆ ಶಕ್ತಿಯನ್ನು ತುಂಬುತ್ತವೆ.  

- * * * -