ಹೆಣ್ಣು ಅನುಭವಿಸುವ ಯಾತನೆಯನ್ನು ಕಣ್ಣಾರೆ ಕಂಡೂ ಕಾಡುವ ಮನಸ್ಸುಗಳೇ ಇನ್ನಾದರೂ ಬದಲಾಗಿ...!

ನಾವು ಅವರಿಗಾಗಿ ಏನೂ ಮಾಡುವುದು ಬೇಡ. ಅವರೂ ನಮ್ಮ ಹಾಗೆಯೇ ಎನ್ನುವುದನ್ನು ಅರಿತರೆ ಸಾಕು ಎಲ್ಲ ಬದಲಾಗುವುದು  


ಆ ದಿನ ನಾನು ಆಸ್ಪತ್ರೆಯ ಕೆಲಸದಲ್ಲಿ ಬ್ಯೂಸಿ ಆಗಿದ್ದೆ. ಕಂಪ್ಯೂಟರ್ ಮುಂದೆ ಕುಳಿತು ಏನೋ ಬರೆಯುವುದಕ್ಕೆ ಶುರುವಿಟ್ಟುಕೊಂಡಿದ್ದೆ. ಅಷ್ಟರಲ್ಲಿ ಕರೆ ಮಾಡಿದ ಹಿರಿಯ ವೈದ್ಯರು ಮಾತಿಗಳಿದರು. “ನೀವು ಮೊದಲು ಹೋಗಿ ಪ್ರಸೂತಿ ಹಾಗೂ ಸ್ತ್ರೀ ವಿಭಾಗಕ್ಕೆ ಭೇಟಿ ಕೊಟ್ಟು ಅಲ್ಲಿ ನಡೆದ ಒಂದು ಶಸ್ತ್ರಕ್ರೀಯೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಸುದ್ದಿ ಬರೆಯಿರಿ” ಎಂದು ಹೇಳಿ ಫೋನಿಟ್ಟರು. ಮೊದಲಿಗೆ ನಾನೂ ಏನೋ ಇರಬಹುದು ಬಿಡು ಆಮೇಲೆ ಹೋದರಾಯಿತು ಎಂದು ಅಲಕ್ಷ ಮಾಡಿದೆ. ನಂತರ ಬಿಡುವಾದಾಗ ವೈದ್ಯರನ್ನು ಭೇಟಿ ಮಾಡಿ ಶಸ್ತ್ರಚಿಕಿತ್ಸೆಯ ಕುರಿತಾದ ಮಾಹಿತಿ ಕೇಳಿದೆ. ಅದಕ್ಕೆ ಉತ್ತರ ನೀಡಲು ಮುಂದಾದ ವೈದ್ಯರ ನುಡಿಗಳನ್ನು ಕೇಳಿದಾಗ ಅಕ್ಷರಶಃ ನಾನೇ ಒಂದು ಕ್ಷಣ ದಂಗಾದೆ. ಈ ರೀತಿಯೂ ಆಗಬಹುದೇ? ಎಂದು ಪ್ರಶ್ನೆ ಮಾಡಿಕೊಂಡೆ. ಅಷ್ಟಕ್ಕೂ ಆಗಿದ್ದಾದರೂ ಏನು? ಋತುಶ್ರಾವಕ್ಕೆ ಒಳಗಾದ ಮಹಿಳೆಯರ್ವಳು ಸುರಕ್ಷತೆಯನ್ನು ಪಾಲಿಸದ ಕಾರಣಕ್ಕೆ ಅನುಭವಿಸಿದ ಯಾತನೆಯ ಪರಿಯನ್ನು ವಿವರಿಸುವಾಗ ಹೆಣ್ಣಾಗಿ ಹುಟ್ಟುವುದೇ ಶಾಪವಾ? ಎನಿಸಿತು. ತಿಂಗಳಿಗೊಮ್ಮೆ ಕಷ್ಟ ಅನುಭವಿಸುವ ಅವಳನ್ನು ನೋಡಿ ಮರುಕ ಪಡಬೇಕಾದವರೇ ಅವಳ ಕುರಿತು ಅಸಹ್ಯ ಪಟ್ಟುಕೊಳ್ಳುವ ಸಮಾಜದ ಮಧ್ಯದಲ್ಲಿ ಈ ರೀತಿ ತೊಂದರೆ ಅನುಭವಿಸಿದರೆ ಕೇಳುವವರಾರು ಎನ್ನುವುದನ್ನು ನೆನೆಸಿಕೊಂಡರೆ ಎದೆಯಲ್ಲಿ ಕ್ಷಣ ಹೊತ್ತು ಬೆಂಕಿ ಹೊತ್ತಿದ ಅನುಭವವಾಯಿತು. ಋತುಶ್ರಾವದ ಸಂದರ್ಭದಲ್ಲಿ ತೋರಿದ ಒಂದು ಸಣ್ಣ ನಿರ್ಲಕ್ಷ್ಯ ಇಂದು ಆಕೆಯ ಜೀವವನ್ನೇ ತೆಗೆದುಕೊಳ್ಳುವುದಕ್ಕೆ ಸಿದ್ಧವಾಗಿತ್ತು. ಹೆಣ್ತದ ಸ್ಥಳದಿಂದ ಆವರಿಸಿ ನಂಜು ಇಡೀ ಗರ್ಭಾಶಯವನ್ನೇ ಆವರಿಸಿಕೊಂಡು ಕೀವು ತುಂಬಿಕೊಂಡು ನರಗಳೆಲ್ಲ ಸುರುಳಿಗಳಾಗಿ ಸಾವಿಗೆ ಉರುಳಾಗುವ ತಯಾರಿಯಲ್ಲಿದ್ದವು. ಇಡೀ ಗರ್ಭದಿಂದ ಒಂದು ಲೀಟರ್ ಕೀವು ತೆಗೆದು ಅವಳನ್ನು ಬದುಕಿಸಿಕೊಳ್ಳುವಲ್ಲಿ ಯಶಸ್ವಿಯಾದ ವೈದ್ಯರ ಯಶೋಗಾಥೆಯ ನಂತರ ನನ್ನ ಮನಸ್ಸು ಮಾತ್ರ ಯಾಕೋ ನನ್ನ ಮಾತನ್ನೇ ಕೇಳದೇ ಕೇವಲ ಅದರೆಡೆಗೆ ಗಿರಕಿ ಹೊಡೆಯುತ್ತಿತ್ತು. ಋತುಶ್ರಾವದ ಸಮಯದಲ್ಲಿ ತನಗಾದ ವೇದನೆಯನ್ನು ಪತಿರಾಯನಿಗೆ ತಿಳಿಸಿದರೆ ಸಿಗರೇಟು ಸೇದುತ್ತ ಮೈಲಿಗೆ ಮುಡಚಟ್ಟಿನ ಕಥೆ ಕೇಳಿ ಕೈ ತೊಳೆದುಕೊಂಡು ಹೊರ ನಡೆದ, ಸ್ವಚ್ಛತೆ ಎನ್ನುವುದನ್ನು ಬಿಟ್ಟು ಬಿಟ್ಟವಳಿಂದು ಅನುಭವಿಸುವ ಯಾತನೆಯನ್ನು ಕಂಡಾಗ ನನಗೆ ಆ ಒಂದು ಚಿತ್ರ ಯಾಕೋ ಗೊತ್ತಿಲ್ಲ ಇನಿಲ್ಲದ ಹಾಗೆ ನನ್ನನ್ನು ಕಾಡಲುಪ್ರಾರಂಭಿಸಿತು. ನೋಡು ನೋಡುತ್ತಲೇ ಮತ್ತೊಮ್ಮೆ ಆ ಚಿತ್ರವನ್ನು ಮತ್ತೊಮ್ಮೆ ನೋಡಲು ಮುಂದಾಗಿದ್ದೆ. ಅಲ್ಲಿಂದ ಹೊರ ಬಂದಾಗ ಬರವಣಿಗೆಯ ಮೆರವಣಿಗೆಯಲ್ಲಿ ಕುಣಿಯಲು ನನ್ನೆದೆಯ ಭಾವನೆಗಳು ಅಕ್ಷರ ರೂಪಗಳನ್ನು ತೊಟ್ಟುಕೊಂಡು ಸಜ್ಜಾದವು. ಅಲ್ಲಿಗೆ ಮೆಲ್ಲಗೆ ಗೀಚುತ್ತ ತಮ್ಮೆದುರು ಇಂದು ಈ ಚಿತ್ರದ ಕುರಿತು ಬರೆಯುತ್ತಲೇ ಸಮಾಜದ ಕರಾಳ ಮುಖವನ್ನು ತಮ್ಮೆದುರು ಬಿಚ್ಚುತ್ತೇನೆ.   

ಸಾಮಾನ್ಯವಾಗಿ ನಾನು ಚಲನಚಿತ್ರಗಳನ್ನು ನೋಡುವುದಿಲ್ಲ. ನೋಡಿದರು ಕೂಡ ಅವುಗಳನ್ನು ವಿಮರ್ಶೆ ಮಾಡುವ ಕಾರ್ಯವನ್ನಂತೂ ಮಾಡುವುದೇ ಇಲ್ಲ. ಅಷ್ಟಕ್ಕೂ ಈಗ ನಿರ್ಮಾಣಗೊಳ್ಳುತ್ತಿರುವ ಯಾವ ಚಿತ್ರಗಳು ಕೂಡ ವಿಮರ್ಶೆಗೆ ಒಳಪಡುವಷ್ಟರ ಮಟ್ಟಿಗೆ  ಅದ್ಭುತವಾದ ಕಥಾ ಹಂದರವನ್ನು ಹೊಂದಿರುವುದೇ ಇಲ್ಲ. ಹೀಗಾಗಿಯೇ ಸುಮ್ಮನೆ ಯಾಂತ್ರಿಕವಾಗಿ ಚಿತ್ರವನ್ನು ನೋಡಲಾಗುತ್ತಿದೆಯೇ ಹೊರತು ಅದರಿಂದ ಕಲಿತುಕೊಳ್ಳುವಂತದ್ದಾಗಲಿ ಅಥವಾ ಬದುಕಿನಲ್ಲಿ ಅಳವಡಿಸಿಕೊಳ್ಳುವಂತದ್ದಾಗಲಿ ಏನು ಉಳಿದಿಲ್ಲ. ಇನ್ನು ಬೆರಳೆಣಿಕೆಯಷ್ಟು ಚಿತ್ರಗಳು ಕೆಲವೊಮ್ಮೆ ವಿಭಿನ್ನವಾದ ಕಥೆಗಳಿಂದ ನಮ್ಮನ್ನು ಕಾಡುತ್ತವೆ. ಆದರೆ ಹಾಗೆ ಕಾಡಿದ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೋತು ಮುಗ್ಗರಿಸಿರುತ್ತವೆ. ಗಲ್ಲಾ ಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿದ ಕೆಲವು ಚಿತ್ರಗಳು ನಮ್ಮನ್ನು ಕಾಡುವುದಿರಲಿ ಕನಿಷ್ಟ ಪಕ್ಷ ಕೆಲವು ದಿನಗಳ ಮಟ್ಟಿಗಾದರೂ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುತ್ತವೆಯೇ? ಊಹೂಂ ಅದು ಇಲ್ಲ. ಹೀಗಾಗಿ ಯಾವ ಚಿತ್ರಗಳು ಕೂಡ ನನ್ನನ್ನು ಆಕರ್ಷಿಸುವುದಿಲ್ಲ. ಆದರೂ ಕೂಡ ಕೆಲವು ಚಿತ್ರಗಳು ನಮ್ಮನ್ನು ಕಾಡುತ್ತವೆ ಎಂದು ಆದಾಗಲೇ ಹೇಳಿದ್ದೇನಲ್ಲವೇ? ಹಾಗೆಯೇ ಇತ್ತೀಚೆಗೆ ಆ ಒಂದು ಚಿತ್ರ ನನ್ನನ್ನು ಕಾಡಿಸಿದ್ದು ಮಾತ್ರವಲ್ಲದೇ ನನ್ನನ್ನು ಚಂತನೆ ಎಡೆಗೆ ಎಳೆದುಕೊಂಡು ಹೋಯಿತು. ಅದರಲ್ಲೂ ಮಡಿ ಮೈಲಿಗೆಯಂತ ಕಲ್ಪನೆಯಲ್ಲಿ ಬದುಕುತ್ತಿರುವ ನಮ್ಮ ಸಮಾಜ ಇನ್ನೂ ಬದಲಾಗದ ರೀತಿಯನ್ನು ಕುರಿತು ನನ್ನನ್ನು ಆಲೋಚಿಸುವಂತೆ ಮಾಡಿತು. ನಮ್ಮ ಸಮಾಜ ಹೀಗಿರುವುದಕ್ಕೆ ಕಾರಣವೇನು? ಜಗತ್ತು ಆಧುನಿಕತೆ ಎಡೆಗೆ ಮುಖ ಮಾಡಿ ನಿಂತರೂ ಕೂಡ ನಮ್ಮವರ ಮಾನಸಿಕ ಸ್ಥಿತಿ ಮಾತ್ರ ಇನ್ನೂ ಇದ್ದಲ್ಲೇ ಇದೆಯಲ್ಲ ಅದಕ್ಕೆ ಕಾರಣವಾದರು ಏನು? ಬದಲಾವಣೆ ಬದಲಾವಣೆ ಎಂದು ಬೊಬ್ಬೆ ಇಡುವ ನಾವುಗಳೇ ಸ್ವಯಂ ಬದಲಾವಣೆಗೆ ತೆರೆದುಕೊಳ್ಳದೇ ಇರುವುದಕ್ಕೆ ಕಾರಣವೇನು? ಎಲ್ಲದಕ್ಕೂ ಮಾತನಾಡುವ ಬುದ್ದಿವಂತರು ಸಹ ಕೆಲವು ಸಂದರ್ಭಗಳಲ್ಲಿ ಸುಮ್ಮನಿರುವುದು ಏಕೆ? ಹೀಗೆ ಹತ್ತು ಹಲವು ಪ್ರಶ್ನೆಗಳು ನನ್ನೆದರು ಬಂದು ಉತ್ತರಕ್ಕಾಗಿ ತಡಕಾಡುವಾಗ ಈ ಚಿತ್ರದಲ್ಲಿನ ಘಟನೆಗಳು ಹಾಗೂ ಬದುಕಿನಲ್ಲಿ ನಡೆಯುವ ವಿವಿಧ ಬಗೆಯ ಅಚಾತುರ್ಯಗಳು ಒಂದಕ್ಕೊಂದು ತಾಳ ಮೇಳ ಕುಡಿದಂತೆ ಸರಿದೂಗಿದವು. ಆಗ ವಾಸ್ತವದ ಸಮಸ್ಯೆಗಳ ಜೊತೆಗೆ ಬದುಕಿನ ನೈಜತೆಯ ಅರಿವು ಮೆಲ್ಲ ಮೆಲ್ಲನೆ ಮೂಡುತ್ತ ಸಾಗಿತು. 

ಇಂದು ನಾನು ಹೇಳಲು ಹೊರಟ ವಿಷಯದ ಕುರಿತು ಬಹಳ ದಿನಗಳ ಹಿಂದೆಯೇ ಬರೆಯಬೇಕು ಎಂದುಕೊಂಡು ಸುಮ್ಮನಾಗುತ್ತಿದ್ದೆ. ಏನು ಹೇಳಬೇಕು? ಹೇಗೆ ಹೇಳಬೇಕು? ಎನ್ನುವುದೇ ನನಗೆ ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿ ಹೇಳುವುದಕ್ಕೆ ತಡವರಿಸುತ್ತ, ಬರೆಯುವುದರಲ್ಲಿ ಕನವರಿಸುತ್ತ ಅದನ್ನು ಅಲ್ಲಿಯೇ ನಿಲ್ಲಿಸಿ ಸುಮ್ಮನಾಗುತ್ತಿದ್ದೆ. ಹೀಗೆ ಹೇಳಿದರೆ ಓದುಗರು ಅದನ್ನು ಹೇಗೆ ಸ್ವೀಕರಿಸುತ್ತಾರೋ, ಎನ್ನುವ ಗೊಂದಲದ ಮಧ್ಯದಲ್ಲಿ ಆ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳದೆ ಸುಮ್ಮನಾಗಿದ್ದೆ. ಆದರೆ ಯಾವಾಗ ನಾನು ಹಿಂದಿಯಲ್ಲಿ ಬಂದ ಆ ಒಂದು ಚಿತ್ರವನ್ನು ನೋಡಿದೆನೋ ಆಗ ಈ ವಿಚಾರವನ್ನು ಮುಕ್ತವಾಗಿ ಚರ್ಚೆ ಮಾಡುವುದಕ್ಕೆ ಮುಂದಾಗಿ ಈ ಲೇಖನ ತಮ್ಮ ಕೈಗಿಡಬೇಕೆಂದು ಬರವಣಿಗೆ ಆರಂಭಿಸಿದ್ದೇನೆ. ಮೊದಲೇ ಹೇಳುತ್ತೇನೆ ಇದು ಮಡಿವಂತಿಕೆಯನ್ನು ಮೀರಿ ನಿಂತಿರುವ ಭಾವನೆಗಳಿಂದ ಕೂಡಿದ ಲೇಖನ. ಇಲ್ಲಿ ಬರುವ ಸಮಸ್ಯೆಯನ್ನು ಸ್ವೀಕರಿಸುವ ವ್ಯಕ್ತಿಯೇ ಮುಂದೆ ಅದಕ್ಕೆ ಪರಿಹಾರವಾಗಬೇಕಾಗುತ್ತದೆ. ಇದಾಗಲೇ ಬದಲಾವಣೆಯ ಗಾಳಿಗೆ ಮೈಯೊಡ್ಡಿ ನಿಂತಿದ್ದರೆ ಈ ಲೇಖನ ಅವರಿಗಾಗಿ ಅಲ್ಲ. ಆದರೆ ಬದಲಾವಣೆಯಿಂದ ದೂರ ಉಳಿದವರು ಇದನ್ನು ಅಳವಡಿಸಿಕೊಳ್ಳದೇ ಹೋದಲ್ಲಿ ಮುಂದೆ ಇನ್ನೇನು ಅರ್ಥ ಮಾಡಿಕೊಳ್ಳುತ್ತಾನೋ ಅದು ಓದುಗ ಪ್ರಭುವಿಗೆ ಬಿಟ್ಟಿದ್ದು. ನಾನು ಆ ಚಿತ್ರದ ಕುರಿತು ತಮ್ಮೆದುರು ಮಾತನಾಡುವುದಕ್ಕಿಂತ ಮುಂಚೆ ಕೆಲವೊಂದಿಷ್ಟು ಘಟನೆಯನ್ನು ತಮ್ಮೆದುರು ಹೇಳುತ್ತೇನೆ. ಇವು ನಿನ್ನೆ ಮೊನ್ನೆ ನಡೆದ ಘಟನೆ ಎನ್ನುವುದಕ್ಕಿಂತ ಪ್ರತಿ ನಿತ್ಯವು ನಡೆಯುತ್ತಿರುವ ಘಟನೆ ಇದು. ನಾನು ಮಾತ್ರೆಗಳನ್ನು ತರುವುದಕ್ಕೆಂದು ಮೆಡಿಕಲ್ ಶಾಪ್ ಮುಂದೆ ನಿಂತಿದ್ದೆ. ಅಲ್ಲಿ ಒಬ್ಬ ವ್ಯಕ್ತಿ ಬಂದು ಸುಮಾರು ಅರ್ಧ ಗಂಟೆಗಳ ಕಾಲ ನಿಂತ. ಆದರೂ ಏನು ತೆಗೆದುಕೊಳ್ಳಲಿಲ್ಲ. ಯಾವುದೋ ಒಂದು ವಸ್ತುವನ್ನು ಖರಿದಿಸಬೇಕೆಂದು ಆತ ನಿಂತಿದ್ದಾನೆ ಎನ್ನುವುದು ಆತನ ಹಾವಭಾವದ ಮೇಲೆ ನಮಗೆ ಘೋಚರವಾಗುತ್ತಿತ್ತು. ಆದರೂ ಏನನ್ನು ತೆಗೆದುಕೊಳ್ಳದೆ ಬೇರೆ ಗ್ರಾಹಕರನ್ನು ನೋಡುತ್ತ ನಿಲ್ಲುತ್ತಿದ್ದ. ಕೊನೆಗೆ ಕೊಂಚ ಧೈರ್ಯ ಮಾಡಿ ಒಂದು ಚೀಟಿಯಲ್ಲಿ ಏನನ್ನೋ ಗೀಚಿ ಅಂಗಡಿಯವನ ಕೈಗಿಟ್ಟ. ಅಂಗಡಿಯ ಕೆಲಸಗಾರನೋ ಆ ಚೀಟಿಯನ್ನು ಓದಿದ್ದೇ ತಡ ಕಪ್ಪಾದ ಪಾಲಿತಿನ್ ಚೀಲದಲ್ಲಿ ಕಳುವಿನಿಂದ ಕಟ್ಟಿಕೊಡುವಂತೆ ಪೊಟ್ಟಣವನ್ನು ಕಟ್ಟಿ ಆತನ ಕೈಗಿಟ್ಟ. ಅದನ್ನು ಆ ವ್ಯಕ್ತಿ ಅತ್ತಿತ್ತ ನೋಡಿ ತನ್ನ ಬ್ಯಾಗಿನಲ್ಲಿ ತುರುಕಿ ಯುದ್ಧ ಗೆದ್ದವನ ಹಾಗೆ ನಿಟ್ಟುಸಿರು ಬಿಟ್ಟ. ನನಗೊ ಕುತುಹಲ ತಡೆಯಲಾಗದೇ ಅದೇನು ಚೀಟಿಯಲ್ಲಿ ಬರೆದು ನೀಡಿರಬಹುದು ಎಂದು ಸುಮ್ಮನೆ ಇಣುಕಿದೆ. ಆತ ಅದರಲ್ಲಿ ಸ್ಯಾನಿಟರಿ ಪ್ಯಾಡ್‌ನ ಕಂಪನಿ ಹೆಸರನ್ನು ಉಲ್ಲೇಖಿಸಿದ್ದ. ಇದನ್ನು ಓದಿದ ಮೇಲೆ ನನಗೆ ನಗು ಬಂತು. ಆ ಸಂದರ್ಭದಲ್ಲಿ ಆತನ ಹಾಗೂ ಅಂಗಡಿಕಾರನ ಹಾವ ಭಾವ ಕಂಡು ಬೇಸರವು ಮೂಡಿತು.  

ಇನ್ನೊಂದು ಸಂದರ್ಭದಲ್ಲಿ ಮನೆಯಲ್ಲಿ ಮಡದಿ ಮುಟ್ಟಾಗಿದ್ದಾಳೆ ಎನ್ನುವ ಕಾರಣಕ್ಕೆ ಅವಳಿಗೆ ನೆರವಾಗಲು ಪತಿರಾಯ ಸ್ಯಾನಿಟರಿ ಪ್ಯಾಡ್ ತೆಗೆದುಕೊಂಡು ಹೋಗಿ ನೀಡಿದ್ದನ್ನು ಕಂಡ ತಾಯಿ ಕೆಂಡಾಮಂಡಲವಾಗಿ ಕೂಗಾಡುತ್ತಾಳೆ. ಯಾರೋ ಪಕ್ಕದ ಮನೆಯ ಹೆಣ್ಣುಮಗಳಿಗೆ ಪ್ರೇಮ ಪತ್ರ ನೀಡಿದರು ಕ್ಷಮಿಸಿ ಬಿಡಬಹುದು ಆದರೆ ಮುಟ್ಟಾದ ಮಡದಿಗೆ ಸ್ಯಾನಿಟರಿ ಪ್ಯಾಡ್ ನೀಡಿದ್ದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ಆ ಮಹಾತಾಯಿಯ ಮನಸ್ಥಿತಿಯು ಅದೆಷ್ಟು ಮಡಿವಂತಿಕೆಯಲ್ಲಿ ಮುಳುಗಿರಬೇಕು ನೀವೇ ಹೇಳಿ? ಇದನ್ನು ಕೇಳಿ ನಿಜಕ್ಕೂ ಇಲ್ಲಿ ಪರಿವರ್ತನೆ ಆಗಬೇಕಿರುವುದು ಯಾರ ಮನಸ್ಥಿತಿ ಎನ್ನುವ ಗೊಂದಲ ಕೆಲವು ಕ್ಷಣ ನನ್ನಲ್ಲೂ ಉಂಟಾಯಿತು. ಏಕೆಂದರೆ  ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆಯ ಕುರಿತು ಮಾತನಾಡುವ ನಾವುಗಳು ಅವಳ ಸಮಸ್ಯೆಯನ್ನು ಅರಿಯದಷ್ಟು ಸಣ್ಣವರಾಗಿ ಬಿಟ್ಟಿದ್ದೀವಾ? ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಹೆಣಗಾಡುವಂತ ಸ್ಥಿತಿ ನನ್ನದಾಯಿತು. ಅದ್ಯಾಕೆ ಸ್ವಾತಂತ್ರ್ಯ ಬಂದು ಇಷ್ಟು ದಿನವಾದರೂ ಇಷ್ಟೇಲ್ಲ ಪ್ರಗತಿಯನ್ನು ಸಾಧಿಸಿದರು ಕೂಡ ಈ ಮಡಿ ಮೈಲಿಗೆ ಕಲ್ಪನೆ ಅತಿಯಾದ ಮಡಿವಂತಿಕೆಯ ಆಚರಣೆ ದೂರವಾಗಿಲ್ಲ ಎನ್ನುವುದು ತಿಳಿಯುತ್ತಿಲ್ಲ. ಮಹಿಳೆಯೊಬ್ಬಳು ಮುಟ್ಟಾಗುವುದು ಸೈಸರ್ಗಿಕ ಪ್ರಕ್ರೀಯೆ. ಅದನ್ನು ಅಷ್ಟು ಗುಟ್ಟಾಗಿ ಮಾತನಾಡುವುದು, ಅವಳನ್ನು ಮುಟ್ಟಿಸಿಕೊಳ್ಳದೆ ದೂರ ಇಡುವುದು, ಅವಳ ಸುರಕ್ಷತೆಗಾಗಿ ತಯಾರಿಸಲಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಕದ್ದು ಮುಚ್ಚಿ ನೀಡುವುದು, ಗಂಡಸರು ಪ್ಯಾಡ್‌ಗಳನ್ನು ತಂದು ಕೊಡುವುದು ಒಂದು ಅಪರಾಧ ಎಂಬಂತೆ ಬಿಂಬಿಸುವುದು ಅದ್ಯಾವ ನ್ಯಾಯ ಎನ್ನುವುದೇ ನನ್ನಲ್ಲಿ ಗೊಂದಲ ಉಂಟು ಮಾಡಿದೆ. 

ಮೇಲೆ ಹೇಳುವಾಗ ನಾನೊಂದು ಚಿತ್ರದ ಕುರಿತು ಉಲ್ಲೇಖ ಮಾಡಿದ್ದೇ ಅದರಲ್ಲೂ ಕೂಡ ಈ ಸ್ಯಾನಿಟರಿ ಪ್ಯಾಡ್‌ನ ಕುರಿತಾದ ಕಥೆಯನ್ನೇ ಹೆಣೆಯಲಾಗಿತ್ತು. ಆಗಿನಿಂದಲೂ ನನ್ನಲ್ಲಿ ಹಲವು ಪ್ರಶ್ನೆಗಳು ಕಾಡಿದ್ದವು. ಅಕ್ಷಯ್‌ಕುಮಾರ ಅಭಿನಯದ ಪ್ಯಾಡ್‌ಮ್ಯಾನ್ ಚಿತ್ರದಲ್ಲಿ ಮನೆಯಲ್ಲಿ ಮಡದಿ ಋತುಶ್ರಾವಕ್ಕೆ ಒಳಗಾದಾಗ ಸ್ವಚ್ಚತೆಗೆಂದು ಬಟ್ಟೆಯನ್ನು ಬಳಸಿ ಅನಾರೋಗ್ಯಕ್ಕೆ ತುತ್ತಾಗುವುದನ್ನು ಕಂಡು ಅದನ್ನು ತಪ್ಪಿಸಲು ಹೆಣಗಾಡುವ ಪತಿರಾಯ ಇಡೀ ಸಮಾಜಕ್ಕೆ ಒಂದು ತಲೆನೋವಾಗಿ ಕಾಡುತ್ತಾನೆ. ಒಳ್ಳೆಯ ಕಾರ್ಯಕ್ಕೆಂದು ಹೊರಟರೆ ಬೆಕ್ಕುಗಳಿಗಿಂತ ಹೆಚ್ಚಾಗಿ ಮನುಷ್ಯರೇ ಅಡ್ಡ ಬರುತ್ತಾರೆ ಎನ್ನುವಂತೆ ಕಥಾನಾಯಕನ ಉದ್ದೇಶವನ್ನು ಅರ್ಥ ಮಾಡಿಕೊಳ್ಳದ ಜನರು ಆತನನ್ನೇ ತಪ್ಪಿತಸ್ಥನನ್ನಾಗಿ ಮಾಡುತ್ತಾರೆ. ಮಹಿಳೆಯರ ಸುರಕ್ಷತೆಯ ದೃಷ್ಠಿಯನ್ನು ಗಮನದಲ್ಲಿರಿಸಿಕೊಂಡು ನೆರವಾಗಲು ಹೊರಟ ಆ ವ್ಯಕ್ತಿ ಕೊನೆಗೆ ಮಡದಿ ಸಂಸಾರ ಊರನ್ನು ಬಿಟ್ಟು ಹೋಗಬೇಕಾಗುತ್ತದೆ. ಆದರೂ ಆತನ ನಿರ್ಧಾರ ಮಾತ್ರ ಬದಲಾಗುವುದಿಲ್ಲ. ಋತುಶ್ರಾವದ ಸಂದರ್ಭದಲ್ಲಿ ಸಮಸ್ಯೆ ಅನುಭವಿಸುವುದು ಕೇವಲ ತನ್ನ ಮಡದಿ ಮಾತ್ರವಲ್ಲ. ಬದಲಿಗೆ ಎಲ್ಲ ಮಹಿಳೆಯರು ಕೂಡ ಈ ಸಮಸ್ಯೆಗೆ ಒಳಗಾಗುತ್ತಾರೆ. ಅವರಿಗೆ ನೆರವಾಗುವುದು ನನ್ನ ಕರ್ತವ್ಯ ಎಂದು ಹೋರಾಡುವ ಆ ವ್ಯಕ್ತಿ ಕೊನೆಗೆ ತಾನೇ ಸ್ಯಾನಿಟರಿ ಪ್ಯಾಡ್ ತಯಾರಿಸುತ್ತಾನೆ. ಅದನ್ನು ಪ್ರಯೋಗಕ್ಕೆ ಒಳಪಡಿಸುವಾಗ ಆತ ಪಡುವ ಪರಿಪಾಟಲನ್ನು ಕಂಡಾಗ ನಿಜಕ್ಕೂ ಮಹಿಳೆಯೊಬ್ಬಳು ಆ ಸಂದರ್ಭದಲ್ಲಿ ಅದೆಷ್ಟು ಸಂಕಟ ಪಡುತ್ತಾಳೆ ಎನ್ನುವುದು ಸೂಕ್ಷ್ಮಗ್ರಾಹಿಗಳ ಗಮನಕ್ಕೆ ಬರುತ್ತದೆ. ಕೊನೆಗೆ ಎಲ್ಲರು ಆತನನ್ನು ದೂರ ಮಾಡಿದ ಮೇಲೆ ತಾನಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ಮುಗಿಸುವ ಹೀರೋ ಕೊನೆಗೆ ಎಲ್ಲರ ಕಣ್ಣು ತೆರೆಸುತ್ತಾನೆ. ಆದರೆ ಆ ಚಿತ್ರದಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ತಯಾರಿಕೆ ಕಥಾವಸ್ತು ಎನ್ನುವುದು ತಿಳಿದು ಎಷ್ಟೋ ಜನ ಮೂಗು ಮುರಿಯುತ್ತಾರೆ. ಕೆಲವು ಜನ ಮಹಿಳೆಯರು ಮುಜುಗರ ಪಟ್ಟುಕೊಳ್ಳುತ್ತಾರೆ. ಮತ್ತೆ ಸಾಂಪ್ರಾದಾಯಿಕ ಕುಟುಂಬಗಳು ಇನ್ನೂ ಏನೇನು ನೋಡಬೇಕೋ ಈ ಪಾಪಿ ಕಣ್ಣುಗಳಿಂದ ರಾಮಾ ರಾಮಾ ಎಂದು ಉದ್ಘರಿಸುತ್ತಾರೆ. ಆದರೆ ವಾಸ್ತವದಲ್ಲಿ ನಾವು ಮಾಡುತ್ತಿರುವ ತಪ್ಪಿನ ಕುರಿತು ಯಾರೂ ವಿಚಾರ ಮಾಡದೇ ಇರುವುದೇ ನಿಜಕ್ಕೂ ದುರಂತವಾಗಿದೆ.  

ಮೊದಲಿನಿಂದಲೂ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕೇವಲವಾಗಿಯೇ ನಡೆಸಿಕೊಳ್ಳುತ್ತ ಬರಲಾಗಿದೆ. ಅದರಲ್ಲೂ ಮುಟ್ಟಾದ ಮಹಿಳೆಯನ್ನು ಮನೆಯಿಂದ ಮೂರುದಿನ ಹೊರಕ್ಕಿಡುವ ಸಂಪ್ರಾದಯವನ್ನು ಪಾಲಿಸಿಕೊಂಡು ಬಂದವರು ನಾವು. ಮಡಿ ಮೈಲಿಗೆಯ ಹೆಸರಲ್ಲಿ ಮನೆಯಲ್ಲಿಯೇ ಅವಳನ್ನು ಕೋಣೆಯೊಂದರಲ್ಲಿ ಬಂಧಿಸಿಟ್ಟವರು ನಾವು. ಆ ಸಂದರ್ಭದಲ್ಲಿ ಅವಳು ಅನುಭವಿಸುವ ದೈಹಿಕ ಯಾತನೆಯನ್ನು ಲೆಕ್ಕಕ್ಕೆ ತಗೆದುಕೊಳ್ಳದೆ ಅವಳನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸುವ ಕಾರ್ಯವನ್ನು ಮಾಡಿದ ನಮಗೆ ಇಂದು ಕಾಲ ಬದಲಾದಂತೆ ನಾವುಗಳು ಕೂಡ ಬದಲಾಗಬೇಕು ಎಂದು ಅನ್ನಿಸುವುದೇ ಇಲ್ಲ. ಇಂದೂ ಕೂಡ ಅವಳ ಅವಶ್ಯಕತೆಯನ್ನು ಪೂರೈಸುವುದಕ್ಕೆ ನಾಚಿಕೆ ಪಡುವುದು, ಕದ್ದು ಮುಚ್ಚಿ ವಸ್ತುಗಳನ್ನು ತಂದುಕೊಡುವುದು ನೋಡಿದರೆ ನೈಸರ್ಗಿಕ ಕ್ರೀಯೆಗೆ ಒಳಗಾಗುವುದು ಆ ಮಹಿಳೆಯು ಮಾಡುವ ದೊಡ್ಡ ಅಪರಾಧವೇ? ಅಥವಾ ಮಹಿಳೆಯರಿಗೆ ಆ ನಿಸರ್ಗ ನೀಡಿದ ಗುರುತರ ಶಾಪವೇ? ಎನ್ನುವ ಪ್ರಶ್ನೆ ಹುಟ್ಟುತ್ತವೆ. ಒಂದು ಬಾರಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಒಬ್ಬ ಮಹಿಳಾ ಅಧಿಕಾರಿಯೂ ಋತುಶ್ರಾವಕ್ಕೆ ಒಳಗಾಗಿ ಸಭೆಯಿಂದ ಹೊರ ಹೋಗುವುದಕ್ಕೆ ಒಪ್ಪಿಗೆ ಕೇಳುತ್ತಾಳೆ. ಉತ್ತರ ನೀಡಲೇಕಾದ ಅನಿವಾರ್ಯತೆ ಇದ್ದಾಗ ಮುಜರವಿಲ್ಲದೆ ಇರುವ ಸತ್ಯವನ್ನು ಹೇಳಿದಾಗ ಅಲ್ಲಿರುವ ಕೆಲವು ಅಧಿಕಾರಿಗಳು ನೆಲ ನೋಡುತ್ತಾರೆ. ಮತ್ತೆ ಕೆಲವರು ಅವಳನ್ನು ಅಸಹ್ಯ ಎನ್ನುವ ದೃಷ್ಠಿಯಲ್ಲಿ ನೋಡುತ್ತಾರೆ. ಅವಳ ಪ್ಯಾಂಟ್‌ಗೆ ಅಂಟಿದ ಕಲೆಯನ್ನು ನೋಡಿ ಮುಸು ಮುಸು ನಗುತ್ತಾರೆ ಅದನ್ನು ಗಮನಿಸಿದ ಆ ಅಧಿಕಾರಿ ಖಡಕ್ಕಾಗಿಯೇ ಉತ್ತರ ನೀಡುತ್ತಾ “ಸ್ವಾಮಿ ಇದೆಲ್ಲ ಮಹಿಳೆಯಾದವಳಿಗೆ ಕಾಮನ್, ನೀವು ಪುರುಷರಾದ ಮಾತ್ರಕ್ಕೆ ಇದನ್ನು ಅಸಹ್ಯ ಎಂದು ಭಾವಿಸುತ್ತೀರಿ, ಆದರೆ ಆ ಪ್ರಕ್ರಿಯೇ ಇಲ್ಲದೇ ಹೋಗಿದಲ್ಲಿ ನೀವುಗಳು ಎಲ್ಲಿರುತ್ತಿದ್ದಿರಿ?” ಎಂದು ಪ್ರಶ್ನೆ ಮಾಡಿದ ಅವಳು ಎಲ್ಲಿಯವರೆಗೂ ಇದನ್ನು ಸಾಮಾನ್ಯವಾಗಿ ಸ್ವೀಕರಿಸುವುದಿಲ್ಲವೋ ಅಲ್ಲಿಯವರೆಗೂ ಮಹಿಳೆ ಇಂದತಹ ಸಮಸ್ಯೆಯನ್ನು ಅನುಭವಿಸುವುದು, ಅಪಹಾಸ್ಯಕ್ಕೆ ಈಡಾಗುವುದು ತಪ್ಪುವುದಿಲ್ಲ ಎಂದು ಹೇಳಿ ಹೊರ ನಡೆಯುತ್ತಾಳೆ. ಇದನ್ನು ನೋಡಿದಾಗ ನಿಜಕ್ಕೂ ಅವಳ ಮಾತಿನಲ್ಲಿ ಅದೆಷ್ಟು ಸತ್ಯ ಅಡಗಿದೆ ಎಂದು ಎನ್ನಿಸುವುದಿಲ್ಲವೇ? ಅವಳು ಹೇಳಿದ್ದರಲ್ಲಿ ತಪ್ಪೇನಿದೆ? ಇದನ್ನೇ ತಾನೇ  

“ಮುಟ್ಟು ಮುಟ್ಟೆಂದು ಮುಟ್ಟಲೇಕಯ್ಯ?  

ಗಟ್ಟಿಗೊಂಡು ಹುಟ್ಟಿದ ಪಿಂಡವ ನೀನು ಮುಟ್ಟಲೇಕಯ್ಯ?” 

ಎಂದು ವಚನದ ಮೂಲಕ ಸರ್ವಜ್ಞ ಪ್ರಶ್ನೆ ಮಾಡಿದ್ದು. ಸಮಾಜದ ಕರಾಳ ಆಚರಣೆಯನ್ನು ಧಿಕ್ಕರಿಸಿದ್ದು, ನಮ್ಮಲ್ಲಿ ಮಲಗಿದ್ದ ಚೇತನವನ್ನು ಬಡಿದೆಬ್ಬಿಸಿದ್ದು. 

“ಮುಡಿಚಟ್ಟಿನೊಳ ಬಂದು ಮುಟ್ಟಿ ತಟ್ಟಿ ಅನತಿರಿ 

 ಮುಡಚಟ್ಟು ಎಲ್ಯಾದ ಹೇಳಣ್ಣ? 

 ಮುಟ್ಟಾದ ಮೂರು ದಿನಕ ಹುಟ್ಟಿ ಬಂದಿರಿ ನೀವು 

 ಮುಡಚಟ್ಟು ಎಲ್ಯಾದ ಹೇಳಣ್ಣ?” 

ಎಂದು ಕಡಕೋಳದ ಮಡಿವಾಳೇಶ್ವರರು ಪ್ರಶ್ನೆ ಮಾಡುವ ಮೂಲಕ ನಾವು ಮಾಡುವ ತಪ್ಪುಗಳನ್ನು ಎತ್ತಿ ತೋರಿಸಿದ್ದರು. ಆಗಿನ ಕಾಲದಲ್ಲಿಯೇ ಶರಣರು ಗಟ್ಟಿ ಧ್ವನಿಯ ಮೂಲಕ ಪ್ರಶ್ನೆ ಮಾಡಿ ತಪ್ಪುಗಳನ್ನು ತಿದ್ದಿಕೊಳ್ಳಲು ಹೇಳಿದ್ದರೂ ಕೂಡ ನಾವುಗಳು ಆಧುನಿಕ ಪ್ರಪಂಚಕ್ಕೆ ಕಾಲಿಟ್ಟು ಇನ್ನೂ ಅದರಿಂದ ಹೊರ ಬರುತ್ತಿಲ್ಲ ಎನ್ನುವುದಕ್ಕೆ ನಾನು ಮೇಲೆ ಉಲ್ಲೇಖಿಸಿದ ಘಟನೆಗಳೇ ಸಾಕ್ಷ್ಯ ಒದಗಿಸುತ್ತವೆ. 

ಪ್ರತಿಯೊಂದು ಕ್ಷೇತ್ರದಲ್ಲಿಯೂ ಲಿಂಗ ಸಮಾನತೆ ತರಬೇಕು ಎಂದು ಹೇಳುವ ನಾವುಗಳು ಅವಳ ಹಿಂದೆಯೇ ಇಂಥ ಅಚಾತುರ್ಯ ವಾತಾವರಣ ನಿರ್ಮಾಣ ಮಾಡಿದರೆ ಅದಕ್ಕೆ ಅರ್ಥವಿರುತ್ತದೆಯೇ ಹೇಳಿ? ಪಟ್ಟಣಗಳಲ್ಲಿ ಇರುವ ಜನಗಳು ಮಡದಿಗೆ ಸ್ಯಾನಿಟರಿ ಪ್ಯಾಡ್ ತೆಗೆದುಕೊಂಡು ಹೋಗುವುದಕ್ಕೆ ಇಷ್ಟೊಂದು ಮುಜುಗರ ಪಟ್ಟುಕೊಳ್ಳುತ್ತಾರೆಂದರೆ ಇನ್ನೂ ಹಳ್ಳಿಗಳಲ್ಲಿನ ಪಾಡೇನು? ಮಡದಿಗೆ ನೆರವಾಗುವುದಕ್ಕೆ ಹೆದರುವ ಪುರುಷ ಸಮಸ್ಯೆಯಲ್ಲಿರುವ ಸಹೋದರಿಯರಿಗೆ ನೆರವು ನೀಡುತ್ತಾರಾ ಹೇಳಿ? ಇಷ್ಟೊಂದು ಕದ್ದು ಮುಚ್ಚಿ ಅವುಗಳನ್ನು ಕಳ್ಳರಂತೆ ಕೇಳುವುದು, ಕಳ್ಳರಂತೆ ಪಡೆಯುವುದು, ಕಪ್ಪು ಚೀಲದಲ್ಲಿ ಕಾಣದಂತೆ ತೆಗೆದುಕೊಂಡು ಹೋಗುವುದು, ಯಾರೂ ಇಲ್ಲದ ವೇಳೆಯನ್ನು ನೋಡಿ ಅವಳಿಗೆ ನೀಡುವುದು ಏತಕ್ಕೆ? ಇದರಿಂದ ನಾವೇನು ಸಂದೇಶ ಕೊಡುವುದಕ್ಕೆ ಮುಂದಾಗುತ್ತಿದ್ದೇವೆ ಹೇಳಿ? ಟಿವಿಗಳಲ್ಲಿ ಥೇಟರ್‌ಗಳಲ್ಲಿ ನೋಡಬಾರದ್ದನ್ನು ನೋವುದಕ್ಕೆ ಹೇಸಿಕೊಳ್ಳದ ನಾವುಗಳು, ಮನೆಯಲ್ಲಿ ಕುಳಿತುಕೊಂಡು ಕುಟುಂಬ ಸಮೇತವಾಗಿ ಅಶ್ಲೀಲ ದೃಶ್ಯಗಳನ್ನು ನೋಡುವುದಕ್ಕೆ ಮುಜುಗರ ಪಟ್ಟುಕೊಳ್ಳದ ನಾವುಗಳು ನೈಸರ್ಗಿಕ ಕ್ರೀಯೆಯೊಂದನ್ನು ಅತೀ ಕೀಳೆನ್ನುವ ಮಟ್ಟಕ್ಕೆ ನೋಡುತ್ತೇವೆಂದರೆ ನಮ್ಮ ಮನಸ್ಸಿನ ಭಾವೆಗಳು ಹೇಗಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಸರ್ಕಾರ ಈ ಕುರಿತು ಜಾಗೃತಿ ಮೂಡಿಸುವುದಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತದೆ. ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತಿಸುತ್ತದೆ. ಅಷ್ಟು ಮಾತ್ರವಲ್ಲದೆ ಪ್ರತಿವರ್ಷ ಮೇ 28ನ್ನು ಋತುಶ್ರಾವ ಸುಚಿತ್ವ ದಿನವನ್ನಾಗಿ ಆಚರಣೆ ಮಾಡುತ್ತದೆ. ಕಾರಣ ಅದೊಂದು ಮುಚ್ಚಿಡುವ ಅಥವಾ ನಾಚಿಕೆ ಪಡುವ ಇಲ್ಲವೇ ಹೇಸಿಗೆ ಪಟ್ಟುಕೊಳ್ಳುವ ವಿಷಯವಲ್ಲ. ಬದಲಿಗೆ ಆ ಸಂದರ್ಭದಲ್ಲಿ ಮಹಿಳೆಯರಿಗೆ ಆಗುವ ಸಮಸ್ಯೆಗೆ ಸ್ಪಂಧನೆ ನೀಡಬೇಕಾದ ವಿಷಯ. ಇದನ್ನು ಆಧುನಿಕ ಪ್ರಪಂಚದಲ್ಲಿ ಬದುಕುತ್ತಿರುವ ನಾವುಗಳು ಕೂಡ ಅರ್ಥ ಮಾಡಿಕೊಳ್ಳದೇ ಹೊಗುತ್ತಿರುವುದು ನಿಜಕ್ಕೂ ಹೇಸಿಗೆ ಎನಿಸುತ್ತದೆ. ಅರಿವಿನ ಕೊರತೆಯಿಂದಾಗಿ, ಯಾರ ಬಳಿಯೂ ಹೇಳಿಕೊಳ್ಳದ ಗುಟ್ಟಿನ ವಿಷಯ ಎನ್ನುವಂತೆ ಮಾಡಿಕೊಂಡಿದ್ದರಿಂದಾಗಿ ಇಂದು ಅದೆಷ್ಟೋ ಮಹಿಳೆಯರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣವೇನು? ಮುಟ್ಟಿನ ವಿಷಯವನ್ನು ಗುಟ್ಟಿನ ವಿಷಯವಾಗಿಸಿದ ನಮ್ಮ ಮನಸ್ಥಿತಿಯೇ? ಇದು ಮಹಿಳೆಯರಿಗೆ ಸಂಬಂಧಿಸಿದ ವಿಷಯ ಇದನ್ನು ಪುರುಷರ ಬಳಿ ಹೇಳಿಕೊಳ್ಳಬಾರು ಎನ್ನುವ ಮಟ್ಟಕ್ಕೆ ಬಂದಿದ್ದರ ಪರಸ್ಥಿತಿಯೇ? ನಾಚಿಕೆ ಪಟ್ಟುಕೊಂಡು ಬದುಕುವುದರಿಂದಾಗುವ ಸಮಸ್ಯೆಯ ಪರಮಾವಧಿಯೇ? ನಮಗೆ ನಾವೇ ಹಾಕಿಕೊಂಡಿರುವ ದಿಗ್ಬಂಧನದ ಪ್ರತಿಫಲವೆ? ಗೊತ್ತಾಗುತ್ತಿಲ್ಲ. ಇಲ್ಲಿ ತಪ್ಪು ಯಾರದು ಎನ್ನುವುದು ಮುಖ್ಯವಲ್ಲ. ಅಸಲಿಗೆ ಇಲ್ಲಿ ನಡೆದುದ್ದು ತಪ್ಪೇ ಅಲ್ಲ. ಕಾರಣ ಇದರ ಕುರಿತು ಅರಿವು ಮೂಡಿಸದ ಕಾರಣಕ್ಕೆ ಇಷ್ಟೆಲ್ಲ ಆಗುತ್ತಿದೆ ಎನ್ನುವುದು ನನ್ನ ಅಭಿಪ್ರಾಯ. 

ಪ್ಯಾಡ್‌ಮ್ಯಾನ್ ಚಲನಚಿತ್ರ ಒಂದು ಸಾಮಾಜಿಕ ಬದಲಾವಣೆಗೆ ತೆರೆದಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಮೇಲೆ ಉಲ್ಲೇಖಿಸಿದ ಘಟನೆಗಳು ನಮ್ಮ ಮನಸ್ಥಿತಿಯನ್ನು ಬಿಂಬಿಸುತ್ತವೆ. ಅಂದ ಮೇಲೆ ಬದಲಾವಣೆ ಅನಿವಾರ್ಯ ಅಲ್ಲವೇ? ಯಾವುದಕ್ಕೆ ಮುಜುಗರ ಪಟ್ಟುಕೊಳ್ಳಬೇಕು, ಯಾವುದಕ್ಕೆ ಹೇಸಿಗೆ ಪಟ್ಟುಕೊಳ್ಳಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಮುಟ್ಟಿನ ಸಮಯದಲ್ಲಿ ಅವಳನ್ನು ಮನೆಯಿಂದ ದೂರ ಅಟ್ಟುವುದಕ್ಕಿಂತ ಅವಳಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಪೂರೈಸಿ ಆ ಸಂದರ್ಭದಲ್ಲಿ ಅವಳ ಕಲಸಗಳಿಗೆ ವಿರಾಮ ನೀಡಿ, ನೆರವು ನಿಡಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಈ ಸತ್ಯ ಮನಗಂಡಾಗಲೇ ಪರಿವರ್ತನೆ ಅಲ್ಲವೆ?  

- ಮಂಜುನಾಥ ಜುನಗೊಂಡ

ವಿಜಯಪುರ 

- * * * -