ಕೇಂದ್ರದಿಂದ 6000 ಜನೌಷಧಿ ಕೇಂದ್ರ ಸ್ಥಾಪನೆ: ಡಿ.ವಿ.ಸದಾನಂದ ಗೌಡ

ಬೆಂಗಳೂರು, ಜ.14 : ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯದ  ರೈತರಿಗೆ ಎರೆಡೆರಡು ಸಂತಸದ ಸುದ್ದಿ ನೀಡಿದೆ.  ಬೆಂಬಲ ಬೆಲೆ ಯೋಜನೆಯಡಿ 6.68 ಲಕ್ಷ  ಕ್ವಿಂಟಾಲ್ ಶೇಂಗಾ ಖರೀದಿಸಲು ಕರ್ನಾಟಕಕ್ಕೆ ಅನುಮತಿ ನೀಡಿದೆ. ಹಾಗೆಯೇ ಹೆಸರುಕಾಳು ಖರೀದಿ  ಗಡುವನ್ನು ಜನವರಿ 31ರವರೆಗೆ ವಿಸ್ತರಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

6000 ಜನೌಷಧಿ ಕೇಂದ್ರಗಳನ್ನು ತೆರೆಯುವ ಪ್ರಮುಖ ಮೈಲಿಗಲ್ಲು ಇಂದು ಸಾಧಿಸಲಾಗಿದೆ. ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳು ಸಾಮಾನ್ಯ ಜನರಿಗೆ ತಲುಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಪ್ರಯತ್ನಕ್ಕಾಗಿ ಫಾರ್ಮಾ ಇಲಾಖೆ ಮತ್ತು ಪ್ರಧಾನಿ ಹಾಗೂ ಬಿಜೆಪಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.