ಮೂರ್ಛೆ ರೋಗ ಜಾಗೃತಿಯ ಮೂಲಕ ನಿಯಂತ್ರಣಕ್ಕೆ ತರಬಹುದು: ಡಾ. ಬಿ.ಸಿ. ಕರಿಗೌಡರ್

Epilepsy can be controlled through awareness: Dr. B.C. Karigowder

ಗದಗ 30 : ಅಪಸ್ಮಾರದ ಕುರಿತು ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿದ್ದು ಆರೋಗ್ಯ ಶಿಕ್ಷಣದ ಮೂಲಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಜಾಗೃತಿಯ ಮೂಲಕ ಅಪಸ್ಮಾರ ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದು ಗದಗ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ್ ಹೇಳಿದರು. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಅಡಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅಪಸ್ಮಾರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 

ಅಪಸ್ಮಾರ ಅಥವಾ ಮೂರ್ಛೆ ರೋಗ ಇತ್ತೀಚಿಗೆ ವ್ಯಾಪಕವಾಗಿದ್ದು ಅವುಗಳ ಕುರಿತು ಪ್ರತಿಯೊಬ್ಬ ನಾಗರಿಕರಿಗೂ ತಿಳುವಳಿಕೆ ನೀಡುವ ಕಾರ್ಯವಾಗಬೇಕು ಎಂದರು. ರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ನಿಮಿತ್ತ ಉಪನ್ಯಾಸ ನೀಡಿದ ಜಿಮ್ಸ್‌ ಮನೋಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸೋಮಶೇಖರ ಬಿಜ್ಜಳ, ಪ್ರಸವ ಹಂತದಿಂದ ಆರಂಭವಾಗಿ ಮನುಷ್ಯನ ಬೆಳವಣಿಗೆಯ ಹಂತದ ಕೊನೆಯವರೆಗೂ ಅಪಸ್ಮಾರ ಖಾಯಿಲೆ ಕಂಡು ಬರುತ್ತದೆ. ವಿವಿಧ ಹಂತಗಳಲ್ಲಿ ಕಂಡುಬರುವ ಈ ಖಾಯಿಲೆಯಲ್ಲಿ ಹಲವಾರು ವಿಧಗಳಿವೆ. ಮದ್ಯಪಾನ, ಅರೆಬೆಂದ ಮಾಂಸಗಳ ಸೇವನೆ, ಆಮ್ಲಜನಕದ ಕೊರತೆ, ಅಪಘಾತಗಳಲ್ಲಿ ರಕ್ತ ಸೋರಿಕೆ ಮುಂತಾದ ಕಾರಣಗಳಿಂದ ಅಪಸ್ಮಾರ ಕಾಣಿಸಿಕೊಳ್ಳಬಹುದು. ‘ನನ್ನ ಅಪಸ್ಮಾರ ಜರ್ನಿಯ ಮೈಲಿಗಲ್ಲುಗಳು’ ಎಂಬುದು 2024ರ ರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ಧ್ಯೇಯವಾಕ್ಯವಾಗಿದ್ದು ಕಾಯಿಲೆ ಕಾಣಿಸಿಕೊಂಡ ಪ್ರತಿ ಹಂತದಲ್ಲಿಯೂ ಅದನ್ನು ಗುಣಪಡಿಸಲು ತೆಗೆದುಕೊಂಡ ಕ್ರಮಗಳೇ ಮೈಲಿಗಲ್ಲುಗಳು. ನಿತ್ಯ ಮೂಢನಂಬಿಕೆಗಳನ್ನು ಬಿಟ್ಟು ಸರಿಯಾದ ವಿಧಾನದಲ್ಲಿ ಓಷಧಿ ಸೇವನೆ ಮತ್ತು ಚಿಕಿತ್ಸೆಯನ್ನು ಪಡೆದುಕೊಂಡರೆ ಈ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು. ದಕ್ಷಿಣ ಆಫ್ರಿಕಾದ ಪ್ರಸಿದ್ಧ ಆಟಗಾರ ಜಾಂಟಿ ರೋಡ್ಸ್‌ ಸಹ ಈ ಕಾಯಿಲೆಗೆ ತುತ್ತಾಗಿದ್ದು ಆತ್ಮಸ್ಥೈರ್ಯದಿಂದ ಹೊರಬಂದು ಜಗತ್ತಿನ ಗಮನ ಸೆಳೆದ ಆಟಗಾರರಾಗಿ ಗುರುತಿಸಿಕೊಂಡಿರುವುದು ಸ್ಪೂರ್ತಿಯಾಗಿದೆ ಎಂದರು. ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ನ್ಯುರೋಲಾಜಿಸ್ಟ್‌ ಡಾ. ವಿನಯಕುಮಾರ್ ಹಾಗೂ ಡಾ. ಪ್ರಕಾಶ ಹೊಸಮನಿ ಅಪಸ್ಮಾರದ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿ.ಎನ್‌.ಎಂ ನರ್ಸಿಂಗ್ ಕಾಲೇಜಿನ ಉಪಪ್ರಚಾರ್ಯರಾದ  ಲಲಿತಾ ಮತ್ತು ಉಪನ್ಯಾಸಕರಾದ ಶ್ರೀಮತಿ ಜಯಶ್ರೀ ವೇದಿಕೆಯಲ್ಲಿದ್ದರು. 

ಕರ್ಣಾಟಕ ಮೆದುಳು ಆರೋಗ್ಯ ಉಪಕ್ರಮದ ಗದಗ ಜಿಲ್ಲಾ ಸಂಯೋಜಕ ಮಾರುತಿ ಹರಿಕಂತ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಉದ್ದೇಶ ಮತ್ತು ಕಾರ್ಯಕ್ರಮದ ಧ್ಯೇಯಗಳ ಕುರಿತು ವಿವರಿಸಿ ಸ್ವಾಗತಿಸಿದರು. ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಫಿಸಿಯೋಥೆರಪಿಸ್ಟ್‌ ಜಗನ್ನಾಥ ಪಟೇಲ್ ವಂದಿಸಿದರು. ಕಾಲೇಜು ವಿದ್ಯಾರ್ಥಿಗಳು, ವೈದ್ಯಕೀಯ ಮತ್ತು ಮನೋಚಿಕಿತ್ಸಾ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.