ನವಲಗುಂದ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ : ಶಾಸಕ ಕೋನರಡ್ಡಿ

Ensure that there is no drinking water problem in Navalgund constituency: MLA Konaraddy

ನವಲಗುಂದ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ : ಶಾಸಕ ಕೋನರಡ್ಡಿ 

ಹುಬ್ಬಳ್ಳಿ 10: ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು. ಅವರು ಇಂದು ಹುಬ್ಬಳ್ಳಿಯ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ನವಲಗುಂದ ವಿದಾನಸಭಾ ಕ್ಷೇತ್ರದ ಹುಬ್ಬಳ್ಳಿ, ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕುಗಳ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚೆಗೆ ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಬಿಸಿಲು ಅತೀ ಹೆಚ್ಚಾಗಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದ್ದು ಸಮಸ್ಯೆ ಬರಬಹುದೆಂದು ಈಗಾಗಲೇ ಹುಬ್ಬಳ್ಳಿ ತಾಲ್ಲೂಕಿನ ಉಮಚಗಿ, ಇಂಗಳಹಳ್ಳಿ ಮತ್ತು ಮಲ್ಲಿಗವಾಡ, ನವಲಗುಂದ ತಾಲ್ಲೂಕಿನ ಅರೇಕುರಹಟ್ಟಿ, ಕೊಂಗವಾಡ, ಹಾಲಕುಸುಗಲ್ ಗ್ರಾಮಗಳಿಗೆ ನೀರು ಬರುವ ದಾರಿ ಸರಿ ಇಲ್ಲದ ಕಾರಣ ಅಭಿವೃದ್ಧಿ ಪಡೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ತೆಗೆದುಕೊಳ್ಳುವದು ಹಾಗೂ ಅಣ್ಣಿಗೇರಿ ತಾಲ್ಲೂಕಿನ ಬಸಾಪೂರ, ಹಳ್ಳಿಕೇರಿ, ನಾವಳ್ಳಿ ಹೀಗೆ ಕೆಲವು ಗ್ರಾಮಗಳಲ್ಲಿ ಅಲ್ಪಸ್ವಲ್ಪ ನೀರಿನ ತೊಂದರೆಯ ಬಗ್ಗೆ ಗ್ರಾಮಸ್ಥರು ತಿಳಿಸಿದ್ದು ಕುಡಿಯುವ ನೀರು ಬೇಕಾದಾಗ ಮಲಪ್ರಭಾ ಕಾಲುವೆಯಿಂದ ನೀರು ಬಿಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಸಮಸ್ಯೆ ಕಂಡುಬಂದ ಗ್ರಾಮಗಳಿಗೆ ಕೂಡಲೇ ಪ್ರತಿ ದಿನ ಅಧಿಕಾರಿಗಳು ಭೇಟಿ ನೀಡಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಕುಡಿಯುವ ನೀರಿನ ಸಮಸ್ಯೆ ಆಗದಂತೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಇದರೊಂದಿಗೆ ಕ್ಷೇತ್ರದಲ್ಲಿನ ವಸತಿ ರಹಿತರಿಗೆ ಆಶ್ರಯ ಯೋಜನೆಯಡಿ ಸೂರು ಒದಗಿಸುವ ಕುರಿತು ಸ್ಥಳಾಂತರಗೊಂಡ ಗ್ರಾಮಗಳಲ್ಲಿ ಆಗಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಹಾಗೂ ಕೆಲವು ಗ್ರಾಮಗಳಲ್ಲಿ ಆಶ್ರಯ ಯೋಜನೆಯಡಿ ಜಮೀನು ಖರೀದಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಈ ಸಭೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಜೆ.ಬಿ. ಮಜ್ಜಗಿ, ನವಲಗುಂದ ತಹಶೀಲ್ದಾರ ಸುಧೀರ ಸಾವಕಾರ, ಅಣ್ಣಿಗೇರಿ ತಹಶೀಲ್ದಾರ ಮಂಜುನಾಥ ದಾಸಪ್ಪನವರ, ಹೆಸ್ಕಾಂ ಇಇ ಕಿರಣಕುಮಾರ, ಸಿಪಿಐ ಮುರಗೇಶ ಚನ್ನಣ್ಣನವರ, ತಾಲ್ಲೂಕು ಪಂಚಾಯತ ಇಒ ಯಶವಂತಕುಮಾರ, ಭಾಗ್ಯಶ್ರೀ ಜಾಗೀರದಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳಾದ ಸತೀಶ ನಾಗನೂರ, ರಾಘವೇಂದ್ರ ಹಕಾಟೆ, ನವಲಗುಂದ ಪುರಸಭೆ ಮುಖ್ಯಾಧಿಕಾರಿ ಎಸ್‌.ಪಿ. ಪೂಜಾರ, ಹುಬ್ಬಳ್ಳಿ ತಾಲ್ಲೂಕು ಗ್ಯಾರೇಂಟಿ ಸಮಿತಿ ಅಧ್ಯಕ್ಷ ಶಿವಾನಂದ ಭೂಮಣ್ಣವರ, ತಾಲ್ಲೂಕು ಕೆಡಿಪಿ ನಾಮನಿರ್ದೇಶಿತ ಸದಸ್ಯ ಬಸವರಾಜ ಬೀರಣ್ಣವರ,  ತಾಲ್ಲೂಕು ಮಟ್ಟದ ಕೃಷಿ, ಪಶುಸಂಗೋಪನೆ, ಭೂ ದಾಖಲೆಗಳ ಇಲಾಖೆ ಸೇರಿದಂತೆ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.