ನವದೆಹಲಿ, ಮೇ ೧೯, ದೇಶದ ವಿವಿಧ ಭಾಗಗಳಿಂದ ಕಾಲ್ನೆಡಿಗೆಯಲ್ಲಿ ತಮ್ಮ ಊರುಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರ ಸಂಕಷ್ಟ ಪರಿಸ್ಥಿತಿಯನ್ನು ಪರಿಹರಿಸುವ ಕ್ರಮವಾಗಿ ಸಮನ್ವಯದ ಮೂಲಕ ಸಹಕರಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.ವಲಸೆ ಕಾರ್ಮಿಕರನ್ನು ಅವರ ಸ್ವಂತ ರಾಜ್ಯ, ಊರುಗಳಿಗೆ ತಲುಪಿಸಲು ಇನ್ನೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರಗಳು ರೈಲ್ವೆ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಬೇಕು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿಮಾಡಿದ್ದಾರೆ.
ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ಮಾರ್ಗಗಳಲ್ಲಿ ವಿಶ್ರಾಂತಿ ಸ್ಥಳಗಳನ್ನು ವ್ಯವಸ್ಥೆಗೊಳಿಸಬೇಕು. ಈ ಸ್ಥಳಗಳನ್ನು ಜಿಲ್ಲಾಡಳಿತ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಾಯದೊಂದಿಗೆ ಗುರುತಿಸಿ ಅಭಿವೃದ್ದಿಪಡಿಸಿಬೇಕು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆವಿಶ್ರಾಂತಿ ಸ್ಥಳಗಳಲ್ಲಿ ಸೂಕ್ತ ಆಹಾರ, ಆರೋಗ್ಯವ್ಯವಸ್ಥೆ ಹಾಗೂ ನೈರ್ಮಲೀಕರಣ ವ್ಯವಸ್ಥೆಗಳನ್ನು ಸ್ಥಾಪಿಸಬೇಕು ಎಂದು ಗೃಹ ಕಾರ್ಯದರ್ಶಿ ಸಲಹೆ ನೀಡಿದ್ದಾರೆ.ಯಾವುದೇ ವಲಸೆ ಕಾರ್ಮಿಕರು ರೈಲ್ವೆ ಹಳಿಗಳ ಮೇಲೆ ಅಥವಾ ರಸ್ತೆಗಳಲ್ಲಿ ನಡೆದು ಹೋಗದಂತೆ ರಾಜ್ಯ ಹಾಗೂ ಜಿಲ್ಲಾಡಳಿತಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಖಾತರಿಪಡಿಸಬೇಕು ಎಂದು ಪತ್ರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ತಾಕೀತು ಮಾಡಿದ್ದಾರೆ.