ವಿದೇಶಿ ನೆಲದಲ್ಲಿ 500 ಟೆಸ್ಟ್ ಪಂದ್ಯಗಳಾಡಿ ಇತಿಹಾಸ ನಿರ್ಮಿಸಿದ ಇಂಗ್ಲೆಂಡ್

 ಪೋರ್ಟ್ ಎಲಿಝಬತ್, 17 :       ಇಡೀ ಜಗತ್ತಿಗೆ ಕ್ರಿಕೆಟ್ ಕಲಿಸಿಕೊಟ್ಟ ಇಂಗ್ಲೆಂಡ್ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ವಿಶಿಷ್ಠ ಮೈಲುಗಲ್ಲು ಸ್ಥಾಪಿಸಿದೆ. ವಿದೇಶಿ ನೆಲದಲ್ಲಿ 500 ಟೆಸ್ಟ್ ಪಂದ್ಯಗಳಾಡಿದ ವಿಶ್ವದ ಮೊದಲ ತಂಡ ಎಂಬ ಹಿರಿಮೆಗೆ ಭಾಜನವಾಯಿತು. ಗುರುವಾರ ಇಲ್ಲಿನ ಸೇಂಟ್ ಜಾರ್ಜ್ ಪಾರ್ಕ್ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್ ಪಂದ್ಯವಾಡುವ ಮೂಲಕ ಈ ಸಾಧನೆ ಮಾಡಿತು. 1877ರ ಮಾರ್ಚ್ 15 ರಿಂದ 19ರವರೆಗೆ ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ಜೇಮ್ಸ್ ಲಿಲ್ಲಿವೈಟ್ ಅವರ ನಾಯಕತ್ವದಲ್ಲಿ ಇಂಗ್ಲೆಂಡ್ ವಿದೇಶಿ ನೆಲದಲ್ಲಿ ಮೊಟ್ಟ ಮೊದಲ ಟೆಸ್ಟ್ ಪಂದ್ಯವಾಡಿತ್ತು. 500 ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ 149 ರಲ್ಲಿ ಜಯ ಸಾಧಿಸಿದೆ. 182 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ವಿದೇಶಿ ನೆಲದಲ್ಲಿ ಎರಡನೇ ಅತಿ ಹೆಚ್ಚು ಪಂದ್ಯಗಳಾಡಿರುವ ಸಾಧನೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಇದರಲ್ಲಿ ಆಸೀಸ್, 147ರಲ್ಲಿ ಜಯ ಸಾಧಿಸಿದ್ದು, 125 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನುಳಿದ 131 ಪಂದ್ಯಗಳು ಡ್ರಾ ನಲ್ಲಿ ಅಂತ್ಯ ಕಂಡಿದೆ.

ವಿದೇಶಿ ನೆಲದಲ್ಲಿ ಭಾರತ ತಂಡ 268 ಪಂದ್ಯಗಳಾಡಿದ್ದು, 51ರಲ್ಲಿ ಜಯ, 113ರಲ್ಲಿ ಸೋಲು ಹಾಗೂ 104 ಪಂದ್ಯಗಳು ಡ್ರಾನಲ್ಲಿ ಸಮಾಪ್ತಿಯಾಗಿದೆ. ಒಟ್ಟಾರೆಯಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಾಡಿರುವ ವಿಶ್ವದ ಮೊದಲ ತಂಡ ಎಂಬ ಹಿರಿಮೆ ಇಂಗ್ಲೆಂಡ್ ತಂಡಕ್ಕಿದೆ. ಇಂಗ್ಲೆಂಡ್ ಒಟ್ಟು 1,021 ಟೆಸ್ಟ್ ಪಂದ್ಯಗಳಾಡಿದೆ. ಇದರಲ್ಲಿ 393ರಲ್ಲಿ ಜಯ, 224ರಲ್ಲಿ ಸೋಲು ಹಾಗೂ 211 ಪಂದ್ಯಗಳು ಡ್ರಾ ಆಗಿದೆ. 545 ಪಂದ್ಯಗಳಾಡಿರುವ ವೆಸ್ಟ್ ಇಂಡೀಸ್ ಮೂರನೇ ಸ್ಥಾನದಲ್ಲಿದೆ. ಭಾರತ (540) ನಾಲ್ಕನೇ ಸ್ಥಾನದಲ್ಲಿದೆ.