ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ

ಹೊಳೆ ಆಲೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡಗೆ ಕಾರ್ಯಕ್ರಮ  

ಗದಗ 14: ಗ್ರಾಮೀಣ ಪ್ರದೇಶದ ಕೂಲಿಕಾರರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಿ,ಆರ್ಥಿಕ ನೆರವು ಪಡೆದು ಬದುಕು ಬದಲಾಯಿಸಿಕೊಳ್ಳುವ ಮೂಲಕ ಆರ್ಥಿಕ ವಾಗಿ ಸದೃಢ ಆಗಬೇಕು ಎಂದು ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಚಂದ್ರಶೇಖರ ಬಿ ಕಂದಕೂರ ಹೇಳಿದರು.

ಹೊಳೆ ಆಲೂರ ಗ್ರಾಮದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು  ಮಾತನಾಡಿದರು.ಗ್ರಾಮೀಣ ಬಾಗದ ಕೂಲಿಕಾರರ ಜೀವನಮಟ್ಟ ಸುಧಾರಿಸುವ ಕಾಮಗಾರಿಗಳು ನರೇಗಾ ಯೋಜನೆಯಡಿ ಲಭ್ಯವಿದ್ದು, ಗ್ರಾಮ ಪಂಚಾಯತ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಯೋಜನೆಯ ಲಾಭವನ್ನು ಪಡೆದುಕೊಳ್ಳಿ ಎಂದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ 100 ದಿನಗಳವರೆಗೆ ಕೂಲಿಕಾರರಿಗೆ ಕೆಲಸ ನೀಡುತ್ತೇವೆ. ಉದ್ಯೋಗ ಚೀಟಿ ಪಡೆದ ಕುಟುಂಬ ವರ್ಗ ವರ್ಷಕ್ಕೆ 100 ದಿನ ಕೆಲಸ ಮಾಡಿದರೆ ವಾರ್ಷಿಕವಾಗಿ ಯೋಜನೆಯಡಿ 34800 ರೂ, ಪಡೆಯುತ್ತಾರೆ. ಯೋಜನೆಯಡಿ ಅರ್ಹ ಫಲಾನುಭವಿಗಳು ದನದ ಕೊಟ್ಟಿಗೆ, ಬಚ್ಚಲು ಗುಂಡಿ,  ಕೋಳಿ ಶೆಡ್, ಕೃಷಿ ಹೊಂಡ ಕಾಮಗಾರಿ ಮಾಡಿಕೊಳ್ಳಲು ಸಾಧ್ಯವಿದೆ. ತೋಟಗಾರಿಕೆ ಇಲಾಖೆಯಡಿ ಬೆಳೆಗಳಾದ ತೆಂಗು, ಮಾವು, ದಾಳಿಂಬೆ, ಸೀಬೆ, ಗುಲಾಬಿ, ಮಲ್ಲಿಗೆ, ಬಾಳೆ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಆರ್ಥಿಕ ನೆರವು ಪಡೆದು ಬೆಳೆದುಕೊಳ್ಳಬಹುದು ಎಂದರು. ಮುಖ್ಯವಾಗಿ ಮಹಿಳೆಯರು ಆರ್ಥಿಕವಾಗಿ ಸದೃಢವಾದಾಗ ಮಾತ್ರ ಕುಟುಂಬ ಸದೃಢವಾಗುತ್ತದೆ ಈ ಹಿನ್ನೆಲೆ ಮಹಿಳೆಯರನ್ನು ಸದೃಢ ಮಾಡಲು ಸರ್ಕಾರ ಗಂಡು ಮತ್ತು ಹೆಣ್ಣು ಕೂಲಿಕಾರರಿಗೆ ಸಮಾನವಾಗಿ 349 ರೂಪಾಯಿ ದಿನವೊಂದಕ್ಕೆ ಯೋಜನೆಯಡಿ ಕೂಲಿ ಮೊತ್ತ ನೀಡಲಾಗುತ್ತಿದೆ. ಕೂಲಿಕಾರರ ಕೇಂದ್ರಬಿಂದುವಾಗಿರುವ ನರೇಗಾ ಯೋಜನೆಯು ಗ್ರಾಮೀಣ ಕೂಲಿಕಾರರಿಗೆ ಕೈತುಂಬ ಉದ್ಯೋಗ ನೀಡುವ ಕಾರ್ಯವನ್ನು ಮಾಡುತ್ತಿದೆ. ಮಹಿಳೆಯರು ಮತ್ತು ವಿಶೇಷಚೇತನರಿಗೆ ಯೋಜನೆಯಡಿ ಕೆಲಸದಲ್ಲಿ ವಿಶೇಷ ರಿಯಾಯತಿ ಇದೆ. ಕೂಲಿಕಾರರಿಗೆ ಇರುವ ಸೌಲಭ್ಯಗಳನ್ನು ಯೋಜನೆಯಡಿ ಪಡೆದುಕೊಂಡು ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸದ ಸಲುವಾಗಿ ಬೇರೆ ಸ್ಥಳಕ್ಕೆ ಹೋಗದೇ ಇದ್ದೂರಲ್ಲೇ ನರೇಗಾದಲ್ಲಿ ಕೆಲಸ ಮಾಡಿ ಎಂದು ತಿಳಿಸಿದರು. ಈಗಾಗಲೇ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಯಲ್ಲಿ ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳದ ಕರಪತ್ರಗಳನ್ನು ಮುದ್ರಿಸಿ ಮನೆ ಮನೆಗೆ ಹಂಚುವ ಮೂಲಕ ಪ್ರಚಾರ ಮಾಡುತ್ತಿದ್ದೇವೆ. ಯೋಜನೆಯಡಿ ಇರುವ ವಿವಿಧ ಕಾಮಗಾರಿಗಳನ್ನು ಪಡೆದುಕೊಳ್ಳಲು ಇಚ್ಛಿಸುವ ಕೂಲಿಕಾರರು ಗ್ರಾಮ ಪಂಚಾಯತ ಕಚೇರಿಗೆ ಬಂದು ಬೇಡಿಕೆ ಸಲ್ಲಿಸಬಹುದು ಎಂದರು.

ಗ್ರಾಮ ಪಂಚಾಯತ ಅಧ್ಯಕ್ಷೆ ಚಂದವ್ವ ಪೂಜಾರಿ, ಉಪಾಧ್ಯಕ್ಷೆ  ಜೋತಿ ಗಾಣಗೇರ, ಸದಸ್ಯರಾದ ಸಂತೋಷ ದೊಡ್ಡಮನಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಗಿರಿತಮ್ಮನ್ನವರ, ತಾಲೂಕ ಪಂಚಾಯತಿ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ತಾಲೂಕ ಪಂಚಾಯತಿ ಐಇಸಿ ಸಂಯೋಜಕ ಮಂಜುನಾಥ ಎಸ್, ಬಿ ಎಫ್ ಟಿ ಈರಣ್ಣ ದಳವಾಯಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಲ್ಲಿಕಾರ್ಜುನ ಭಾವಿ, ಸ್ವ ಸಂಘದ ಮಹಿಳಾ ಸದಸ್ಯರು ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.